ಚಾಮರಾಜನಗರ: ಅವಧಿ ಮುಕ್ತಾಯವಾಗಿರುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸುವ ಸಂಬಂಧ ಜಿಲ್ಲೆಯ ಒಟ್ಟು ೨೩ ಸ್ಥಾನಗಳಿಗೆ ಪ್ರಪತ್ರ-೨ ರಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.
ಜೂನ್-೨೦೨೧ರಿಂದ ೨೦೨೨ರ ಮಾರ್ಚ್ ಮಾಹೆಯವರೆಗೆ ಅವಧಿ ಮುಕ್ತಾಯವಾಗುವ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಖಾಲಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸುವ ಸಲುವಾಗಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ತಾಲೂಕುಗಳ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರ ಮರಣ, ರಾಜೀನಾಮೆ, ಇನ್ನಿತರೆ ಕಾರಣದಿಂದ ತೆರವಾಗಿರುವ ಸ್ಥಾನಗಳಿಗೆ ಮೀಸಲಾತಿ ನಿಗಧಿಪಡಿಸಿ ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.
ಹನೂರು ತಾಲೂಕಿನ ಕುರಹಟ್ಟಿ ಹೊಸೂರು ಗ್ರಾಮ ಪಂಚಾಯಿತಿಯ ಕುರಹಟ್ಟಿ ಹೊಸೂರು-೧ರ ಕ್ಷೇತ್ರದಲ್ಲಿ ೨ ಸ್ಥಾನಗಳಿಗೆ ಹಿಂದುಳಿದ ವರ್ಗದ ಅ ಮಹಿಳೆ ಹಾಗೂ ಸಾಮಾನ್ಯ ವರ್ಗ, ಕುರಹಟ್ಟಿ ಹೊಸೂರು-೨ರ ಕ್ಷೇತ್ರದಲ್ಲಿ ೩ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಬ ಹಾಗೂ ಸಾಮಾನ್ಯ ಮಹಿಳೆ, ಎಲ್.ಪಿ.ಎಸ್. ಪ್ರಾಜೆಕ್ಟ್ ನ ೩ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ ಹಾಗೂ ಸಾಮಾನ್ಯ ಮಹಿಳೆ, ದಂಟಳ್ಳಿ-೧ರ ಕ್ಷೇತ್ರದಲ್ಲಿ ೨ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ ಹಾಗೂ ಸಾಮಾನ್ಯ ವರ್ಗ, ದಂಟಳ್ಳಿ-೨ರ ಕ್ಷೇತ್ರದಲ್ಲಿ ೩ ಸ್ಥಾನಗಳಿಗೆ ಹಿಂದುಳಿದ ವರ್ಗದ ಅ ಮಹಿಳೆ, ಸಾಮಾನ್ಯ ವರ್ಗ ಹಾಗೂ ಸಾಮಾನ್ಯ ಮಹಿಳೆ ಮತ್ತು ಚಂಗಡಿಯ ೧ ಸದಸ್ಯ ಸ್ಥಾನಕ್ಕೆ ಸಾಮಾನ್ಯ ವರ್ಗ ಸೇರಿದಂತೆ ಒಟ್ಟು ೧೪ ಸ್ಥಾನಗಳಿಗೆ ಮೀಸಲಾತಿ ನಿಗಧಿಯಾಗಿದೆ.
ಹನೂರು ತಾಲೂಕಿನ ಸೂಳೇರಪಾಳ್ಯ ಗ್ರಾಮ ಪಂಚಾಯಿತಿಯ ಕೆ. ಗುಂಡಾಪುರ ಕ್ಷೇತ್ರದ ೧ ಸದಸ್ಯ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಕೊಳ್ಳೆಗಾಲ ತಾಲೂಕಿನ ಕುಂತೂರು ಗ್ರಾ.ಪಂ ನ ಮಲ್ಲಹಳ್ಳಿಮಾಳ ಕ್ಷೇತ್ರದ ೧ ಸ್ಥಾನಕ್ಕೆ ಅನುಸೂಚಿತ ಜಾತಿ, ಹರಳೆ ಗ್ರಾ.ಪಂ ನ ಹಳೆಹಂಪಾಪುರ ಕ್ಷೇತ್ರದ ೧ ಸ್ಥಾನಕ್ಕೆ ಸಾಮಾನ್ಯ ವರ್ಗ, ಚಿಕ್ಕಲ್ಲೂರು ಗ್ರಾ.ಪಂ ನ ಇಕ್ಕಡಹಳ್ಳಿ-೨ರ ಕ್ಷೇತ್ರದ ೧ ಸ್ಥಾನಕ್ಕೆ ಅನುಸೂಚಿತ ಜಾತಿ, ಸಿಂಗಾನಲ್ಲೂರು ಗ್ರಾ.ಪಂ ನ ಸಿಂಗಾನಲ್ಲೂರು-೨ರ ಕ್ಷೇತ್ರದ ೧ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾ.ಪಂ ನ ಅಗತಗೌಡನಹಳ್ಳಿ ಕ್ಷೇತ್ರದ ೧ರ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಬೇರಂಬಾಡಿ ಗ್ರಾ.ಪಂ ನ ಬೇರಂಬಾಡಿ-೨ರ ಕ್ಷೇತ್ರದ ೧ ಸ್ಥಾನಕ್ಕೆ ಅನುಸೂಚಿತ ಜಾತಿ, ತೆರಕಣಾಂಬಿ ಗ್ರಾ.ಪಂ ನ ತೆರಕಣಾಂಬಿ-೩ರ ಕ್ಷೇತ್ರದ ೧ ಸ್ಥಾನಕ್ಕೆ ಅನುಸೂಚಿತ ಪಂಗಡ ಮತ್ತು ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾ.ಪಂ ನ ನಾಗವಳ್ಳಿ-೪ರ ಕ್ಷೇತ್ರದ ೧ ಸ್ಥಾನಕ್ಕೆ ಅನುಸೂಚಿತ ಪಂಗಡ ಸೇರಿದಂತೆ ಒಟ್ಟು ೯ ಸ್ಥಾನಗಳಿಗೆ ಮೀಸಲಿರಿಸಿದೆ.
ನಾಮಪತ್ರ ಸಲ್ಲಿಸಲು ೨೦೨೧ರ ಡಿಸೆಂಬರ್ ೧೭ ಕೊನೆಯ ದಿನವಾಗಿದೆ. ಡಿಸೆಂಬರ್ ೧೮ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿಸೆಂಬರ್ ೨೦ ಅಂತಿಮ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಡಿಸೆಂಬರ್ ೨೭ರಂದು ಬೆಳಿಗ್ಗೆ ೭ರಿಂದ ಸಂಜೆ ೫ಗಂಟೆಯವರೆಗೆ ಮತದಾನ ನಡೆಸಲಾಗುತ್ತದೆ. ಮರುಮತದಾನ ಅವಶ್ಯವಿದ್ದರೆ ಡಿಸೆಂಬರ್ ೨೯ ರಂದು ಬೆಳಿಗ್ಗೆ ೭ರಿಂದ ಸಂಜೆ ೫ಗಂಟೆಯವರೆಗೆ ಮತದಾನ ನಡೆಸಲಾಗುತ್ತದೆ. ಡಿಸೆಂಬರ್ ೩೦ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು ಡಿಸೆಂಬರ್ ೩೦ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.