ಮೈಸೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಲು ಸಚಿವರ ನಡುವಿನ ಸಮನ್ವಯದ ಕೊರತೆಯೇ ಕಾರಣ ಎಂದು ಸ್ವಪಕ್ಷದ ವಿರುದ್ಧವೇ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.
ಕೆ.ಆರ್.ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಎಂದು ತಾಂತ್ರಿಕ ಸಮಿತಿ ಎರಡು ತಿಂಗಳಿನಿಂದ ಸಲಹೆ ನೀಡಿದರೂ ರಾಜ್ಯ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸದಿರುವುದೇ ಇವತ್ತಿನ ಪರಿಸ್ಥಿತಿಗೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಮೇ. ೧೦ರಿಂದ ೧೫ ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ ಆದರೆ ಮುಖ್ಯ ಕಾರ್ಯದರ್ಶಿ ನಿರ್ಬಂಧ ಎನ್ನುತ್ತಾರೆ ಇದರಲ್ಲಿ ಯಾವುದು ನಿಜ ಪ್ರಶ್ನಿಸಿದ ಅವರು, ಜನತಾ ಕರ್ಫ್ಯೂ ಜಾರಿಯಲ್ಲಿದ್ದಾಗ ಮಾಡಿದ ನಿಯಮಗಳನ್ನು ಮತ್ತೆ ದಿನಾಂಕ ವಿಸ್ತರಿಸಿ ಪ್ರಕಟಿಸಲಾಗಿದ್ದು ಇದನ್ನು ಸರ್ಕಾರ ಮರು ವಿಮರ್ಶೆ ಮಾಡಬೇಕಾಗಿದೆ. ಇಲದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರ ಜನರ ಜೀವನಕ್ಕೆ ಆರ್ಥಿಕ ಮತ್ತು ಇತರ ಅನುಕೂಲ ಕಲ್ಪಿಸಿ ಪೂರ್ಣವಾಗಿ ಲಾಕ್ ಡೌನ್ ಮಾಡಿ ಎಂದ ಅವರು ಈ ವಿಚಾರದಲ್ಲಿ ಪ್ರಧಾನ ಮಂತ್ರಿಗಳ ಆದೇಶ ಪಾಲಿಸಿ ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಜನರ ಜೀವ ಮತ್ತು ವೈರಸ್ ಜತೆ ಆಟವಾಡುತ್ತಿದೆ. ಇದುವರೆಗೆ ಜಾತಿ, ಧರ್ಮ ಮತ್ತು ಪಕ್ಷಗಳ ಜೊತೆ ಆಟವಾಡಿದ್ದಾಯಿತು. ಈಗ ವೈರಸ್ ಜತೆ ಆಡಿದರೆ ಲಕ್ಷಾಂತರ ಅಮಾಯಕರ ಪ್ರಾಣ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿದರು. ಕೇಂದ್ರ ಸರ್ಕಾರ ಈಗಾಗಲೇ ಬಡವರಿಗೆ ಎರಡು ತಿಂಗಳು ಉಚಿತವಾಗಿ ಅಕ್ಕಿ ಕೊಡುವ ಪ್ರಕಟಣೆ ಮಾಡಿದೆ. ನಮ್ಮ ಸರ್ಕಾರವು ಅವರ ಖರ್ಚಿಗೆ ಹಣ ನೀಡಿ ೧೫ ದಿನ ಅತ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡಬೇಕೆಂದು ಆಗ್ರಹಿಸಿದರು.
ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಔಷಧಿ ಸಿಗುತ್ತಿಲ್ಲ. ಇದರೊಂದಿಗೆ ಕೊರೋನಾ ಸೋಂಕಿನ ಹೆಸರಿನಲ್ಲಿ ಹಲವಾರು ದಂಧೆ ನಡೆಯುತ್ತಿವೆ ಹಾಗಾಗಿ ಮುಖ್ಯಮಂತ್ರಿಗಳು ಮಹಾರಾಷ್ಠ್ರ ಮಾದರಿ ಅನುಸರಿಸಿ ಸೋಂಕು ತಡೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಈಗ ಜಾರಿಯಲ್ಲಿರುವುದು ಲಾಕ್ ಡೌನ್ ಅಲ್ಲ. ಕೇವಲ ನಿರ್ಬಂಧ ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ನಮ್ಮ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಂಡು ಜನರ ಜೀವ ಉಳಿಸಿ ಎಂದು ಕಿವಿಮಾತು ಹೇಳಿದರು.
ಮತ್ತೊಂದೆಡೆ ಶಾಸಕ ಸಾ.ರಾ.ಮಹೇಶ್ ಅವರ ಪರವಾಗಿ ಮಾತನಾಡಿದ ಅವರು ಶಾಸಕರು ಕೊರೋನಾ ಸಂಕಷ್ಟದ ಸಮಯದಲ್ಲಿ ತಾಲೂಕಿನ ಕೆಗ್ಗೆರೆ ಗ್ರಾಮದ ಬಳಿ ತಮ್ಮ ಸ್ವಂತ ಹಣದಲ್ಲಿ ೨೦೦ ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ತೆರೆದು ಉತ್ತಮವಾದ ಕೆಲಸ ಮಾಡಿದ್ದಾರೆ. ಉತ್ತಮ ಕೆಲಸ ಮಾಡುವವರಿಗೆ ನಾವು ಬೆನ್ನು ತಟ್ಟಬೇಕು ಇದರಲ್ಲಿ ಪಕ್ಷ ಮತ್ತು ಇನ್ನೊಂದು ಕಾರಣ ಹುಡುಕಬಾರದು ಎಂದು ಹೇಳಿದರು.

By admin