ಗುಂಡ್ಲುಪೇಟೆ: ಬ್ರಾಹ್ಮಣ ಸಮಾಜವು ತೀರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದನ್ನು ಮನಗಂಡು ರಾಜ್ಯ ಸರ್ಕಾರ ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ತೆರೆಯುವ ಮೂಲಕ ಪುರೋಹಿತರು ಹಾಗೂ ಅರ್ಚಕರ ಸರ್ವತೋಮುಖ ಅಭಿವೃದ್ಧಿಗೆ ಹಲವು ರೀತಿಯ ಯೋಜನೆ ಅನುಷ್ಠಾನ ಗೊಳಿಸಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಖುಗ್ವೇದಿ ತಿಳಿಸಿದರು.

ಪಟ್ಟಣದ ಶ್ರೀರಾಮ ಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಮುದಾಯದ ಪುರೋಹಿತ ಹಾಗೂ ಅರ್ಚಕರ ಪರಿಷತ್‍ನ ತಾಲ್ಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸನಾತನ ಕಾಲದಿಂದಲೂ ಬ್ರಾಹ್ಮಣ ಸಮುದಾಯ ಪುರೋಹಿತ ಹಾಗೂ ಅರ್ಚಕ ವೃತ್ತಿಯನ್ನೇ ನಂಬಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತ ಬಂದಿದ್ದಾರೆ. ಇದೀಗ ಸರ್ಕಾರ ಬೆನ್ನುಲುಬಾಗಿ ನಿಂತಿದೆ ಎಂದರು.

ಈಗಾಗಲೇ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಸಮಾಜದವರಿಗೆ ಕಿರುಸಾಲ ಸೌಲಭ್ಯ ಸೇರಿದಂತೆ ಇನ್ನೂ ಹತ್ತು ಹಲವು ನೂತನ ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ. ಆದ್ದರಿಂದ ಜನಾಂಗದವರು ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಘಟಕ ಅಸ್ಥಿತ್ವಕ್ಕೆ ತರುವ ಮೂಲಕ ತಾಲ್ಲೂಕು ಘಟಕದ ವತಿಯಿಂದ ಜಿಲ್ಲಾ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ತಾಲೂಕು ಪುರೋಹಿತರ ಹಾಗೂ ಅರ್ಚಕರ ಸಂಘದ ಅಧ್ಯಕ್ಷರಾಗಿ ಪಟ್ಟಣದ ಹೆಚ್.ಎನ್.ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಸ್.ದಿವಾಕರ್,
ಕಾರ್ಯದರ್ಶಿ ಎಸ್.ರವಿ ಜೋಯಿಸ್, ಖಜಾಂಚಿ ವಿದ್ಯಾಶಂಕರ, ನಿರ್ದೇಶಕರಾಗಿ ಹರೀಶ್, ನಟೇಶ್ ಜೋಯಿಸ್, ಪದ್ಮನಾಭ, ಗೋವಿಂದ ರಾಜು ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಜರಿದ್ದರು.

ವರದಿ: ಬಸವರಾಜು ಎಸ್.ಹಂಗಳ