ಮೈಸೂರು: ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ನೇತೃತ್ವದ ‘ಮಣ್ಣು ಉಳಿಸಿ’ ಅಭಿಯಾನ ನಗರದಲ್ಲಿ ಭಾನುವಾರ ಅದ್ದೂರಿಯಾಗಿ ಮುಕ್ತಾಯವಾಯಿತು.
ಮಣ್ಣಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ೧೦೦ ದಿನಗಳು ಕಾಲ ಅಂದಾಜು ೩೦ ಸಾವಿರ ಕಿ.ಮೀ ಬೈಕ್ ಪ್ರವಾಸ ಹಮ್ಮಿಕೊಂಡ ಜಗ್ಗಿ ವಾಸುದೇವ ನೇತೃತ್ವದ ‘ಮಣ್ಣು ಉಳಿಸಿ’ ಅಭಿಯಾನ ಮಾಡಲಾಗಿದೆ.
ಸದ್ಗುರು ಅವರು ಮಾ.೨೧ರಂದು ಈ ಅಭಿಯಾನದ ಪ್ರಯುಕ್ತ ಬೈಕ್ ನಲ್ಲಿ ಪ್ರವಾಸ ಆರಂಭಿಸಿದ್ದರು. ೭೪ ರಾಷ್ಟ್ರಗಳು ಸಂಚರಿಸಿ ಮಣ್ಣು ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು. ಈ ಅಭಿಯಾನದ ಸಮಾರೋಪ ಸಮಾರಂಭ ಮತ್ತು ೧೦೦ನೇ ಜಾಗತಿಕ ಸಾರ್ವಜನಿಕ ಕಾರ್ಯಕ್ರಮಕ್ಕೆ ಮೈಸೂರು ಮತ್ತು ಮೈಸೂರಿನ ಜನತೆ ಸಾಕ್ಷಿಯಾದರು.
ಮಾನಸಗಂಗೋತ್ರಿಯ ಬಯಲುರಂಗಮಂದಿರದಲ್ಲಿ ಆಯೋಜಿಸಿಲಾಗಿದ್ದ ಈ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಭಾಗಿಯಾಗಿ ಅಭಿಯಾನವನ್ನು ಬೆಂಬಲಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಾಗಿ ನೆರೆದಿದ್ದ ಯುವ ಸಮೂಹ ಜಗ್ಗಿ ವಾಸುದೇವ್ ಅವರ ಪ್ರತಿ ಮಾತಿಗೂ ಕೂಗು ಹಾಕುವ ಮೂಲಕ ಅವರ ಮಾತುಗಳನ್ನು ಆಸ್ವಾದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್ ಅಭಿಯಾನಕ್ಕೆ ೭೪ ರಾಷ್ಟ್ರಗಳ ಬೆಂಬಲ ದೊರತಿದೆ. ಅಲ್ಲದೇ ಮಣ್ಣಿನ ಸಂರಕ್ಷಣೆ ಬಗ್ಗೆ ಹಲವು ತಜ್ಞರು ಸಿದ್ಧ ಪಡಿಸಿರುವ ವೈಜ್ಞಾನಿಕ ವರದಿಯನ್ನೂ ನಾನು ಹೋದ ಎಲ್ಲ ದೇಶಗಳಿಗೂ ನೀಡಲಾಗಿದೆ. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರಗಳು, ವರದಿಯನ್ನು ಜಾರಿ ಮಾಡುವ ಬಗ್ಗೆ ಈಗಾಗಲೇ ಚಿಂತನೆ ನಡೆಸಿವೆ ಮತ್ತು ಇದಕ್ಕಾಗಿ ಪರಿಣಿತರ ಸಮಿತಿಯನ್ನು ರಚಿಸುವುದಾಗಿ ಭರವಸೆ ನೀಡಿವೆ ಎಂದರು.
ಮಣ್ಣು ಜೀವನದ ಭಾಗ, ಒಂದು ವರ್ಷದಲ್ಲಿ ೨೦ ಸಾವಿರ ವಿವಿಧ ಜೀವಚರಗಳು, ವೈವಿಧ್ಯಮಯ ಪ್ರಭೇದಗಳು ನಾಶವಾಗುತ್ತಿವೆ. ಮಣ್ಣಿನ ಸಂರಕ್ಷಣೆ ಮತ್ತು ಸೂಕ್ತ ರೀತಿಯ ಬಳಕೆ ಆಗದಿದ್ದರೆ ಮುಂದಿನ ೨೦-೨೫ ವರ್ಷದಲ್ಲಿ ಇಡೀ ಜೀವಸಂಕುಲ ಅಳಿಯುವ ಕಳವಳ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಅಭಿಯಾನ ಆಯೋಜಿಸಲಾಯಿತು ಎಂದರು.
ವಿವಿಧ ದೇಶಗಳ ಪ್ರವಾಸ ಮಾಡಿ, ಅಲ್ಲಿಯ ಕೃಷಿ ಸಚಿವರು, ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ಮಾಡಿ ಮಣ್ಣಿನ ಸಂರಕ್ಷಣೆ ಅಗತ್ಯದ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಇದಕ್ಕೆ ಎಲ್ಲ ಕಡೆ ಸಕಾರಾತ್ಮಕವಾಗಿ ಬೆಂಬಲ ದೊರೆತಿದೆ. ಮಣ್ಣಿನ ಅವನತಿಯನ್ನು ತಡೆದು ಅದರ ಪುನರುಜ್ಜೀವನಕೈಗೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವಲ್ಲಿ ಈ ಅಭಿಯಾನ ಯಶಸ್ಸಿಯಾಗಿದೆ. ಸರ್ಕಾರಗಳನ್ನು ಭೂ ಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಲು ಪ್ರೋತ್ಸಾಹಿಸಲಾಗಿದೆ. ಈ ಸಂಬಂಧ ೩ ಬಿಲಿಯನ್ ಜನರನ್ನು ಕಟಿಬದ್ದರನ್ನಾಗಿ ಮಾಡಲು ಉತ್ತೇಜಿಸಿದೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸದ್ಗುರು ಜಗ್ಗಿ ವಾಸುದೇವ್ ಅವರು ಪ್ರಕೃತಿ ಮತ್ತು ಭೂಮಿಯ ಮೇಲಿನ ಪ್ರೇಮ. ಈ ಎಲ್ಲ ಕಾರ್ಯಕ್ರಮಗಳಿಗೆ ಪ್ರೇರಣೆ. ೬೪ನೇ ವಯಸ್ಸಿನಲ್ಲೂ ಬೈಕ್ನಲ್ಲಿ ೨೭ ರಾಷ್ಟ್ರಗಳನ್ನು ಸುತ್ತಿ ಮಣ್ಣು ಉಳಿಸುವಂತೆ ಅರಿವು ಮೂಡಿಸಿದ್ದಾರೆ. ಇದಕ್ಕೂ ಮೊದಲು ರ‍್ಯಾಲಿ ಫಾರ್ ರಿವರ್, ಕಾವೇರಿ ಕಾಲಿಂಗ್ ಎಂಬ ರ‍್ಯಾಲಿ ಮಾಡಿದ್ದರು. ಈಗ ಮಣ್ಣು ಉಳಿಸಿ ಎಂದು ಜಗತ್ತಿನಾದ್ಯಂತ ಪ್ರವಾಸ ಮಾಡಿದ್ದಾರೆ. ಮುಂದಿನ ಅಭಿಯಾನ ಯಾವುದು ಎಂಬ ಪ್ರಶ್ನೆ ಮೂಡಿದೆ ಮುಂದಿನ ಅಭಿಯಾನ ಮಾನವೀಯತೆಗಾಗಿ ಇದ್ದರೆ ಒಳ್ಳೆಯದು ಎಂದರು.
ಭೂಮಿ, ಪ್ರಕೃತಿಯನ್ನು ದೇವರಂತೆ ಪೂಜಿಸುವ ಸಂಸ್ಕೃತಿ ಈ ಜಗತ್ತಿನಲ್ಲಿ ಇದ್ದರೆ ಅದು ಭಾರತೀಯ ಸಂಸ್ಕೃತಿ. ಒಬ್ಬ ರೈತ ಉಳುಮೆ ಮಾಡುವ ಮೊದಲು, ಬಿತ್ತನೆ ಮಾಡುವ ಮೊದಲು ಭೂಮಿಗೆ ಪೂಜೆ ಮಾಡಿ ಹೊಳ ಉಳುತ್ತಾನೆ ಇದು ನಮ್ಮ ಸಂಸ್ಕೃತಿ ಇದನ್ನು ಅರಿತರೆ ಭೂಮಿ ಸಂರಕ್ಷಣೆಯ ಮಹತ್ವ ತಿಳಿಯುತ್ತದೆ ಎಂದು ಹೇಳಿದರು.
ಭೂಮಿಗೆ ಬೇಡವಾದದ್ದನ್ನು ಸೇರಿಸದೇ ಇದ್ದರೆ ಅದು ಸ್ವಚ್ಛವಾಗಿಯೇ ಇರುತ್ತದೆ. ಒಂದು ಎರೆಹುಳು ಮಾಡುವ ಕೆಲಸವನ್ನು ಮನುಷ್ಯ ತನ್ನ ಇಡೀ ಜೀವನದಲ್ಲಿ ಮಾಡಲಾರ. ಹೀಗಾಗಿ ಭೂ ಸವಕಳಿ, ಭೂಮಿಗೆ ರಾಸಾಯನಿಕ ಸೇರುವುದನ್ನು ತಪ್ಪಿಸಿ ಭೂತಾಯಿಯನ್ನು ರಕ್ಷಣೆ ಮಾಡಬೇಕು ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮೈಸೂರಿನ ಜನರು ಮನೆಯ ಕಸ ಮತ್ತು ಕಟ್ಟಡ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವ ಬದಲು ಪೌರಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.
ಮಣ್ಣು, ಕಲ್ಲು, ಗಾಳಿ, ನೀರು, ಪ್ರಕೃತಿಯನ್ನು ದೇವರಂತೆ ಕಾಣುವ ಸಂಸ್ಕೃತಿ ಮತ್ತು ದೇಶ ಇದ್ದರೆ ಅದು ಭಾರತ. ನಾವೆಲ್ಲರೂ ಭೂಮಿಯನ್ನು ಉಳಿಸುವ, ಅದರ ಫಲವತ್ತತೆಯನ್ನು ಕಾಪಾಡುವ ಪ್ರತಿಜ್ಞೆ ಮಾಡಬೇಕು ಎಂದರು.