ಈ ಬಗ್ಗೆ ೨ ವರ್ಷ ಗಳ ಹಿಂದೆ, ರವಿ. ಡಿ ಚೆನ್ನಣ್ಣನವರ್ ಅವರ ಪ್ರೀಯ ಶಿಷ್ಯರೂ, ನನ್ನ ಆತ್ಮೀಯ ಮಿತ್ರರೂ, ಹಾಲಿ ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರೂ ಆಗಿರುವ ಬಿ. ಎಸ್ ರವಿಶಂಕರ್ ನನ್ನನ್ನು ನಮ್ಮ ಸಂಘದ ಕಛೇರಿ ಯಲ್ಲಿ ಭೇಟಿ ಮಾಡಿ ಒಂದು ಮನವಿ ಇಟ್ಟರು. ಅವರ ಗುರುಗಳಾದ ರವಿ. ಡಿ ಚೆನ್ನಣ್ಣನವರ್ ಅವರಿಗೆ ಮೈಸೂರಿನಲ್ಲಿ ನಿವೇಶನ ಹೊಂದುವ ಮಹದಾಶೆ ಇಟ್ಟುಕೊಂಡಿದ್ದಾರೆ, ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಲು ಅವರಿಂದ ಸಾಧ್ಯವಿಲ್ಲ,

ಆದ್ದರಿಂದ ಅವರನ್ನು ನಮ್ಮ ವಿಶ್ವೇಶ್ವರಯ್ಯ ಗೃ. ನಿ. ಸಂಘದ ಸದಸ್ಯರನ್ನಾಗಿ ಮಾಡಿಕೊಂಡು, ಕಂತಿನ ರೂಪದಲ್ಲಿ ೬೦೪೦ ಅಳತೆ ಯ ನಿವೇಶನ, ೨-೩ ವರ್ಷ ಆವಧಿ ಯಲ್ಲಿ ಕೊಡಿಸಿಕೊಡಿ ಎಂದು. ನಾನು ಕೂಡಲೇ ಅರ್ಜಿ ಫಾರಂ ನೀಡಿ, ಪ್ರಥಮ ಕಂತು ೩-೪ ಲಕ್ಷ ವಾದರೂ ಕಟ್ಟಬೇಕಾಗುತ್ತೆ ಎಂದೆ. ತಕ್ಷಣ ರವಿಶಂಕರ್, ರವಿ ಚನ್ನಣ್ಣ ಅವರಿಗೆ ಕರೆ ಮಾಡಿ, ನನಗೆ ಕೊಟ್ಟರು. ನಾನು ಅವರಿಗೆ ಅವರ ಅಭಿಮಾನಿ ಎಂದು ಪರಿಚಯಿಸಿಕೊಂಡು, ಎಲ್ಲಾ ವಿವರವನ್ನೂ ಪುನಃ ಹೇಳಿದೆ. ರವಿ. ಡಿ ಚೆನ್ನಣ್ಣನವರ್ ಅವರು, “ಗುರುಗಳೇ ಸದಸ್ಯತ್ವ ಹಣ ಆಗುತ್ತೆ, ಆದರೆ ಮೊದಲ ಕಂತಿನ ಹಣ ಅಷ್ಟು ಕಟ್ಟುವುದು ಕಷ್ಟ,

ಕೆಲವೇ ದಿನಗಳಲ್ಲಿ ಸ್ವಲ್ಪ ಸ್ವಲ್ಪ ಕಟ್ಟುತ್ತಾ ಹೋಗುತ್ತೇನೆ, ಮನಸ್ಸು ಮಾಡಿ” ಎಂದರು ದೈನ್ಯತೆ ಯಿಂದ. ನನಗೂ ವಿಷಯ ಅರ್ಥವಾಗಿ “ಆಗಬಹುದು” ಎಂದೆ. ರವಿಶಂಕರ್ ಗಂತೂ ಅವರ ಗುರುಗಳಿಗೆ ನಿವೇಶನ ದೊರಕಿಸಿ ಕೊಟ್ಟೇ ಬಿಟ್ಟೆ ಎಂಬಷ್ಟು ಸಂತಸ ಉಕ್ಕೇ ಬಿಟ್ಟಿತ್ತು ಪಾಪ!? ನನಗೂ ಒಬ್ಬ ಒಳ್ಳೆ ಅಧಿಕಾರಿಗೆ ಸಹಾಯ ಮಾಡಿದ ಧನ್ಯತೆ ಉಂಟಾಗಿದ್ದು ನಿಜ.
ಮುಂದಿನ ವಾರ ರವಿಶಂಕರ್ ಕರೆಮಾಡಿ, “ಸಾಹೇಬ್ರಿಂದ ಡಿ. ಡಿ ಬಂತೇ?” ಎಂದು ವಿಚಾರಿಸಿದರು. ಏನೂ ಬಂದಿರಲಿಲ್ಲವಾದ್ದರಿಂದ, “ಇಲ್ಲ ” ಎಂದುತ್ತರಿಸಿದೆ. ಬಹುಶಃ ಹಣ ಹೊಂದಾಣಿಕೆ ಪ್ರಯತ್ನ ದಲ್ಲಿರಬಹುದು ಎಂದರು. ನಂತರದ ವಾರದಲ್ಲೂ ಇದೇ ಪುನರಾವರ್ತನೆ ಆಯಿತು.

ಕೆಲ ದಿನಗಳ ನಂತರ ತಿಳಿದ ವಿಷಯ ವೆಂದರೆ, ರವಿ. ಡಿ ಚೆನ್ನಣ್ಣನವರ್ ಅವರು, ಕಂತಿನ ಹಣಕ್ಕಾಗಿ ಸಂಬಳದಲ್ಲಿ ಅಲ್ಪ ಸ್ವಲ್ಪ ಕೂಡಿಟ್ಟು, ಇನ್ನೇನು ಸಂಘಕ್ಕೆ ಕಳುಹಿಸಬೇಕೆನ್ನುವಷ್ಟರಲ್ಲಿ, ಅವರ ಗ್ರಾಮದವರೊಬ್ಬರ ಗುಡಿಸಲು ಮಳೆಯಿಂದ ಬಿದ್ದು ಹೋಗಲಾಗಿ, ಅದನ್ನು ಪುನರ್ ನಿರ್ಮಾಣ ಮಾಡಲು ಕೊಟ್ಟುಬಿಟ್ಟರಂತೆ! ಕರೆ ಮಾಡಿ ನನ್ನಲ್ಲಿ ಅವರು ಭಾರ ಹೃದಯ ದಿಂದ ಹೇಳಿದ್ದು, “ಗುರುಗಳೇ, ಮೈಸೂರ್ ನಲ್ಲಿ ನಿವೇಶನ ಪಡೆದು ಮನೆ ಕಟ್ಟಬೇಕೆಂಬ ಮಹದಾಶೆ,

ನೀವೆಲ್ಲಾ ಸಹಾಯ ಮಾಡಿದರೆ ಮುಂದೊಂದು ದಿನ ಕೈಗೂಡಬಹುದು, ಈಗ ನನಗಂತೂ ಕ್ವಾರ್ಟರ್ಸ್ ಇದ್ದೇ ಇದೆ, ನಮ್ಮೂರಿನ ಬಡಪಾಯಿ ತಾನೇ ನಿಂತು ಕಟ್ಟಲು ಶ್ರಮದಾನವನ್ನೂ ಮಾಡುತ್ತಾನಂತೆ ಇದಕ್ಕಿಂತಾ ಭಾಗ್ಯ ಬೇಕೇ? ಪುನಃ ಹಣ ಹೊಂದಿಸಿ ತಿಳಿಸುತ್ತೇನೆ ಗುರುಗಳೇ “ಎಂದರು. ಗುಣವಂತ ಅಧಿಕಾರಿಗಳ ಪರಿಪಾಟಿಲು ಹೀಗೆಯೇ ಎಂಬ ಸತ್ಯ ಅರಿವಾಯಿತು.

ಡಾ ಕೆ ರಘುರಾಮ್ ವಾಜಪೇಯಿ,
ಹಿರಿಯ ಸಮಾಜ ಸೇವಕ, ಮೈಸೂರು.