ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರ ವಲಯದಲ್ಲಿ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ವೇಳೆ ರಸ್ತೆಗೆ ಹೊಂದಿಕೊಂಡಂತೆ ಚರಂಡಿ ನಿರ್ಮಿಸಿ ಅದರ ಮೇಲೆ ಫುಟ್‍ಫಾತ್ ಮಾಡಲಾಗಿತ್ತು. ಆದರೆ ಮಳೆ ಬಂದ ವೇಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ರಸ್ತೆ ಮೇಲೆಯೇ ನಿಲ್ಲುತ್ತಿತ್ತು. ಊಟಿ ಸರ್ಕಲ್‍ನಲ್ಲಿ ಮಳೆ ಮತ್ತು ಚರಂಡಿ ನೀರು ರಸ್ತೆಯಲ್ಲಿ ನಿಂತು ಕೆರೆ ಮಾದರಿಯಂತಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಹೊಸದಾಗಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಎರಡು ಬದಿಯಲ್ಲಿ ಈ ಹಿಂದೆ ನಿರ್ಮಿಸಲಾಗಿರುವ ಚರಂಡಿ ಕಿತ್ತು ಹೊಸದಾಗಿ ಚರಂಡಿ ಕಾಮಗಾರಿ ಆರಂಭಿಸಲಾಗಿತ್ತು. ಅದು ಕಳಪೆ ಗುಣಮಟ್ಟದಿಂದ ನಿರ್ಮಾಣವಾಗುತ್ತಿದೆ. ನಿಗಧಿಯಂತೆ ಸಿಮೆಂಟ್, ಜಲ್ಲಿ, ಕಬ್ಬಿಣ ಬಳಸದ ಪರಿಣಾಮ ನಿರ್ಮಾಣವಾದ 5 ದಿನದಲ್ಲೆ ಚರಂಡಿ ಕುಸಿಯುವ ಹಂತ ತಲುಪಿದೆ ಎಂದು ತಾಲ್ಲೂಕು ಕಾವಲು ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ಪಟ್ಟಣದ ಫುಟ್‍ಪಾತ್ ಮೇಲೆ ಸಾವಿರಾರು ಜನರು ಸಂಚಾರ ಮಾಡುತ್ತಿದ್ದು, ಕಳಪೆ ಗುಣಮಟ್ಟದಿಂದ ಗುತ್ತಿಗೆದಾರ ಕಾಮಗಾರಿ ಮುಗಿಸಿ ಕೈತೊಳೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಗುಣಮಟ್ಟದ ಕಾಮಗಾರಿಗೆ ನಡೆಯುವಂತೆ ನೋಡಿಕೊಳ್ಳಬೇಕೆಂದು ಕಾವಲು ಪಡೆ ತಾಲ್ಲೂಕು ಅಧ್ಯಕ್ಷ ಎ. ಅಬ್ದುಲ್ ಮಾಲಿಕ್ ಒತ್ತಾಯಿಸಿದ್ದಾರೆ.
ವರದಿ: ಬಸವರಾಜು ಎಸ್ ಹಂಗಳ