ಮೈಸೂರು: ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ದೇವರ ಬಸವಣ್ಣ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದು, ಸಕಲ ವಿಧಿವಿಧಾನಗಳೊಂದಿದೆ ಗ್ರಾಮದ ದೇಗುಲದ ಮುಂದೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಗ್ರಾಮದಲ್ಲಿ ಕಳೆದ ೧೫ ವರ್ಷದಿಂದ ದೇವರ ಬಸವಣ್ಣ (ಬೀದಿಬಸವ) ನಾಗಿ ಓಡಾಡಿಕೊಂಡಿದ್ದ ಈ ಬಸವಣ್ಣ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಅದರ ಮುಂದೆ ಹಿಂದೆ ದೇಹದ ಕೆಳ ಭಾಗದಲ್ಲಿ ನುಗ್ಗಿ ಹೋದರೂ ಯಾವುದೇ ತೊಂದರೆ ನೀಡಿದ ಸಾಧುಸ್ವಭಾವ ಹೊಂದಿತ್ತು. ಜತೆಗೆ ಇತರೆ ಗ್ರಾಮದ ರಾಸುಗಳಿಗೂ ತೊಂದರೆ ನೀಡುತ್ತಿರಲಿಲ್ಲ. ಜನ ನೀಡಿದ ಹುಲ್ಲು, ಇನ್ನಿತರೆ ಆಹಾರಗಳನ್ನು ಸೇವಿಸುತ್ತಾ ಅಡ್ಡಾಡಿಕೊಂಡಿದ್ದ ಬಸವನಿಗೆ ಕೆಲ ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿತ್ತು.
ಇದರಿಂದ ಓಡಾಡಲು ಸಾಧ್ಯವಾಗದೆ ಬಸವ ಗ್ರಾಮದ ದೇವಸ್ಥಾನದ ಮುಂದೆ ಬಂದು ಮಲಗಿತ್ತು. ಹೀಗೆ ಮಲಗಿದ ಬಸವನಿಗೆ ಮೇಲೇಳಲು ಸಾಧ್ಯವಾಗಲಿಲ್ಲ. ಬಸವ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಅರಿತ ಗ್ರಾಮಸ್ಥರು ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಬಸವ ಮಾತ್ರ ಚೇತರಿಸಿಕೊಳ್ಳಲಿಲ್ಲ. ಎರಡು ದಿನಗಳ ಕಾಲ ಅನಾರೋಗ್ಯದಿಂದ ಬಳಲಿದ ಬಸವ ಕೊನೆಗೂ ಅಗಲಿದೆ.
ದಿಢೀರ್ ಆಗಿ ಸಾವನ್ನಪ್ಪಿದ ಬಸವನ ನೋಡಿ ಜನ ಕಣ್ಣೀರು ಸುರಿಸಿದ್ದಾರೆ. ಇದರೊಂದಿಗೆ ಪ್ರತಿದಿನವೂ ಒಡನಾಟ ಹೊಂದಿದ್ದವರು ಇನ್ನು ಮುಂದೆ ಬಸವ ಇಲ್ಲ ಎಂಬುದನ್ನು ನೆನಪಿಸಿಕೊಂಡು ಕಣ್ಣೀರಾದರು. ಬಳಿಕ ವಿಧಿ ವಿಧಾನಗಳನ್ನು ನೆರವೇರಿಸಿ ಟ್ರ್ಯಾಕ್ಟರ್ ನಲ್ಲಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಊರ ದೇವಸ್ಥಾನದ ಮುಂಭಾಗವೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು.