ಚಾಮರಾಜನಗರ: ಜಗತ್ತಿನ ಎಲ್ಲಾ ಸಾಹಿತ್ಯಗಳಿಗಿಂತ ಆಡುಮಾತಿನಲ್ಲಿ ನುಡಿಗಟ್ಟುಗಳನ್ನು ಕಟ್ಟುವ ಜನಪದ ಸಾಹಿತ್ಯಕ್ಕೆ ಜಾಗತಿಕ ಮೌಲ್ಯವಿದೆ ಎಂದು ಸಾಹಿತಿ ಮಂಜು ಕೋಡಿಉಗನೆ ಅವರು ಅಭಿಪ್ರಾಯಪಟ್ಟರು.
ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಯುವ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯಕ್ಕೆ ದೊಡ್ಡ ಪರಂಪರೆ ಇದೆ. ಕವಿಯ ಭಾವನೆಗಳೇ ಕಾವ್ಯವಾಗಿ ಹೊರಹೊಮ್ಮಲಿವೆ. ವ್ಯಕ್ತಿಯು ತನ್ನ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿಯಿದೆ. ಹಾಗೆ ಗ್ರಹಿಸಿದ ಅಂಶಗಳನ್ನು ಅಭಿವ್ಯಕ್ತಿಸುವ ಮೂಲಕ ಕವಿತೆಯಾಗಿ ಮೇಳೈಸಿದ ದಾಟಿಯೇ ಕಾವ್ಯ. ಕಾವ್ಯಕ್ಕೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ. ಜನಪದ ಸಾಹಿತ್ಯ ಜನರ ಬಾಯಿಂದ ಬಾಯಿಗೆ ಹುಟ್ಟಿದ ಸರಳ ಸಾಹಿತ್ಯವಾಗಿದ್ದು, ಇದು ಜಾಗತಿಕಮಟ್ಟದಲ್ಲಿ ಮೌಲ್ಯ ಗಳಿಸಿಕೊಂಡಿದೆ ಎಂದರು.
ಮೂಲದಲ್ಲಿ ಕಾವ್ಯ ಹುಟ್ಟುವುದು ಮನುಷ್ಯನ ಸಂಸ್ಕಾರದಲ್ಲಿ. ಕಾವ್ಯದ ತಿರುಳು ಮನುಷ್ಯನ ಆಲೋಚನೆಯಿಂದ ಪ್ರತಿಭೆಯಾಗಿ ಅರಳುತ್ತದೆ. ವ್ಯಕ್ತಿ ವಿದ್ಯಾವಂತನಾದಂತೆ ವಿಶೇಷ ಅನುಭವಗಳನ್ನು ಹೊಂದಿ ಅದನ್ನು ಅಭಿವ್ಯಕ್ತಪಡಿಸಿ ಕಾವ್ಯ ರಚನೆಗೆ ಮುಂದಾಗುತ್ತಾನೆ. ಜಿಲ್ಲೆಯಲ್ಲಿ ಸಾಕಷ್ಟು ಯುವ ಕವಿಗಳಿದ್ದಾರೆ. ಅವರೆಲ್ಲರಿಗೂ ಉತ್ತಮ ವೇದಿಕೆ ಕಲ್ಪಿಸಲು ಈ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಮಂಜುಕೋಡಿಉಗನೆ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಚಾರುಲತಾಸೋಮಲ್ ಅವರು ಮಾತನಾಡಿ ಇಂದು ನಾಲ್ಕು ದಿನಗಳ ಚಾಮರಾಜನಗರ ದಸರಾಗೆ ಚಾಲನೆ ನೀಡಲಾಗಿದೆ. ಕೋವಿಡ್ನಿಂದಾಗಿ ಕಳೆದ ೨ ವರ್ಷಗಳಿಂದ ದಸರಾ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ದಸರಾವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಕಲೆ ಸಾಹಿತ್ಯಕ್ಕೆ ಉತ್ತಮ ಅವಕಾಶ ನೀಡುವ ನಿಟ್ಟಿನಲ್ಲಿ ಕವಿಗೋಷ್ಠಿ ಆಯೋಜಿಸಲಾಗಿದೆ. ಜಿಲ್ಲೆಯ ಯುವಕವಿಗಳಿಗೆ ಕವಿಗೋಷ್ಠಿ ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಎಂ. ಗಾಯತ್ರಿ ಅವರು ಮಾತನಾಡಿ ದಸರಾ ಕಾರ್ಯಕ್ರಮಗಳು ಕವಿಗೋಷ್ಠಿಯಿಂದ ಆರಂಭವಾಗಿರುವುದು ಹೆಮ್ಮೆಯ ಸಂಗತಿ. ಕಾವ್ಯ ಮನುಷ್ಯನ ನೋವು-ನಲಿವಿನಿಂದ ಹುಟ್ಟಲಿದೆ. ಕುವೆಂಪು, ಬೇಂದ್ರೆ, ಶಿವರುದ್ದಪ್ಪನವರು ರಚಿಸಿದ ಕವನಗಳು ಇಂದಿಗೂ ಜನಮನ್ನಣೆ ಪಡೆದಿವೆ ಎಂದರು.
ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಸಾಹಿತಿ ಕೃಷ್ಣಮೂರ್ತಿ ಚಮರಂ ಅವರು ಸಾಹಿತ್ಯಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ. ಸಾಹಿತ್ಯವನ್ನು ಎಲ್ಲರೂ ಪ್ರೀತಿಸಬೇಕು. ಅಲ್ಲಿ ದಟ್ಟ ಅನುಭವಗಳಿರುತ್ತವೆ. ಸಮಾಜಮುಖಿಯಾಗಿ ರಚನೆಯಾಗುವ ಕವನಗಳು ಸಮಾಜಕ್ಕೆ ಚಿಕಿತ್ಸೆ ನೀಡುವಂತಿರಬೇಕು. ಕವಿತ್ವದಲ್ಲಿ ಕ್ರೀಯಾಶೀಲತೆ ಇರಬೇಕು. ರವಿ ಕಾಣದ್ದನ್ನು ಕವಿ ಕಾಣುವಂತೆ ಕವಿಗಳು ಸಮಾಜವನ್ನು ವಿಭಿನ್ನ ದೃಷ್ಠಿಕೋನದಲ್ಲಿ ನೋಡುವ ಕವಿಗೆ ಸಾಮಾಜಿಕ ಜವಾಬ್ದಾರಿಯು ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಶೈಲಕುಮಾರ್ ಮಾತನಾಡಿ ಸಾಹಿತಿ ಎಂದರೆ ಸಮಾಜಕ್ಕೆ ಹಿತವಾದವನು ಎಂದರ್ಥ. ಸಮಾಜದ ಶ್ರೇಣಿಕೃತ ವ್ಯವಸ್ಥೆಯನ್ನು ಸರಿಪಡಿಸುವ ಬಯಕೆಯನ್ನು ಯುವ ಕವಿಗಳಲ್ಲಿ ಕಾಣಬಹುದಾಗಿದೆ. ಚಾಮರಾಜನಗರದ ಭಾಷೆಗೆ ತನ್ನದೇ ಆದ ಅಸ್ಮಿತೆ ಇದೆ. ಈ ಮಣ್ಣಿನ ಸೊಗಡು ಸೂಸುವ ಕವಿತೆಗಳ ರಚನೆ ಆದ್ಯತೆ ನೀಡುವಂತೆ ಯುವಕವಿಗಳಿಗೆ ಕಿವಿಮಾತು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ಕನ್ನಡಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನಾಗಲಕ್ಷ್ಮಿ, ಇತರರು ಕವಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಜಿಲ್ಲೆಯ ೨೦ ಯುವಕವಿಗಳು ಕವನ ವಾಚನ ಮಾಡಿದರು. ವಾಚನ ಮಾಡಿದ ಕವಿಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.