ಚಾಮರಾಜನಗರ: ಮಳೆ ನೀರು ಪೋಲಾಗದಂತೆ ಸಂಗ್ರಹಿಸುವ ಕಾಮಗಾರಿಗಳಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕೆಂದು ಕೇಂದ್ರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ, ಸಂಸ್ಕೃತಿ ಸಚಿವಾಲಯದ ನಿರ್ದೇಶಕರಾದ ಅನೀಶ್. ಪಿ ರಾಜನ್ ಅವರು ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ಜಲಶಕ್ತಿ ಅಭಿಯಾನ ಸಂಬಂಧ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ನೀರಿನ ಶೇಖರಣೆಯ ವಿವಿಧ ಮೂಲಗಳನ್ನು ಪುನಶ್ಚೇತನಗೊಳಿಸಿ ಮಳೆ ನೀರು ಪೋಲಾಗದಂತೆ ಸಂಗ್ರಹಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಇದರ ಸಲುವಾಗಿ ಯೋಜನೆ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಜಲಶಕ್ತಿ ಅಭಿಯಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.
ಚೆಕ್ ಡ್ಯಾಂ, ಅಮೃತ ಸರೋವರ, ಇಂಗು ಗುಂಡಿ, ಬದು ನಿರ್ಮಾಣ, ತೆರೆದ ಬಾವಿ, ಮಳೆ ನೀರಿನ ಕೊಯ್ಲು, ಜಲಾಮೃತ ಯೋಜನೆ, ಅಟಲ್ ಭೂಜಲ ಯೋಜನೆ ಅನುಷ್ಠಾನ ಕುರಿತ ಪ್ರಗತಿ ಹಂತವನ್ನು ತಾಲೂಕುವಾರು ಪರಿಶೀಲಿಸಿದರು. ನರೇಗಾ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ನೀರಿನ ಶೇಖರಣಾ ಮೂಲಗಳ ಮಾಹಿತಿ ಪಡೆದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೊಸದಾಗಿ ನಿರ್ಮಿಸಬಹುದಾದ ಜಲಮೂಲಗಳನ್ನು ಪತ್ತೆಹಚ್ಚಿ ನಿರ್ಮಾಣ ಮಾಡುವ, ಸಮುದಾಯ ನೀರು ಸಂಗ್ರಹಣ ಘಟಕ ನಿರ್ಮಾಣದ ಕುರಿತು ಚರ್ಚೆ ನಡೆಸಲಾಯಿತು. ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಶುದ್ದ ಕುಡಿಯುವ ನೀರಿನ ಸೌಲಭ್ಯದ ಕುರಿತು ಚರ್ಚಿಸಲಾಯಿತು.
ಇದಕ್ಕೂ ಮೊದಲು ಜಿಲ್ಲಾಡಳಿತ ಭವನದಲ್ಲಿರುವ ಜಲಶಕ್ತಿ ಕೇಂದ್ರಕ್ಕೆ ಅನೀಶ್. ಪಿ ರಾಜನ್ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು. ಬಳಿಕ ಜಿಲ್ಲೆಯ ವಿವಿಧ ಭಾಗಗಳಿಂದ ಜಲಶಕ್ತಿ ಕೇಂದ್ರಕ್ಕೆ ಆಗಮಿಸಿದ್ದ ರೈತರೊಡನೆ ಸಂವಾದ ನಡೆಸಿ ಜಮೀನಿನಲ್ಲಿ ಉಪಯೋಗಿಸುತ್ತಿರುವ ನೀರಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ನೀರಿನ ಯೋಜನೆಗಳ ಪ್ರಯೋಜನ, ಆಗಬೇಕಿರುವ ಕೆಲಸಗಳ ಕುರಿತು ರೈತರು ತಮ್ಮ ಸಲಹೆ ಅಭಿಪ್ರಾಯಗಳನ್ನು ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕಾಧಿಕಾರಿ ಕೆ.ಎಂ. ಗಾಯಿತ್ರಿ, ಸಹಾಯಕ ಯೋಜನಾಧಿಕಾರಿ ಪ್ರೇಮ್‌ಕುಮಾರ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗಂಗಾಧರಯ್ಯ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಜಂಟಿ ಕೃಷಿ ನಿರ್ದೇಶಕರಾದ ಮಧುಸೂದನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಪ್ರಸಾದ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಅಭಿಯಂತರರು ಇನ್ನಿತರರು ಉಪಸ್ಥಿತರಿದ್ದರು.