( ಹಿರಿಯ, ಕಿರಿಯ ಪೀಳಿಗೆಗಳ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ ಮೂಲ ತತ್ವ)
-ಚಿದ್ರೂಪ ಅಂತಃಕರಣ
ಮಾನವ ವಿಕಸಿತಗಳ ವೈಶಿಷ್ಟ್ಯಗಳನ್ನು ಅಥವಾ ಒಂದು ಪೀಳಿಗೆ ಮತ್ತು ಇನ್ನೊಂದು ಪೀಳಿಗೆಯ ನಡುವೆ ಇರುವ ಬದಲಾದ ಸ್ವರೂಪವನ್ನು ಈ ಜನರೇಷನ್ ಗ್ಯಾಪ್ ಒಳಗೊಂಡಿದೆ. ಎರಡು ಪೀಳಿಗೆಗಳ ನಡುವಿನ ವಿಕಾಸದ ಮೌಲ್ಯವನ್ನು ತೆಗೆದುಕೊಂಡಾಗ ತುಂಬಾ ಜಾಗೃತವಾಗಿ ಇದರ ಬಗ್ಗೆ ಅರಿವನ್ನು ಸ್ವೀಕರಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಪೀಳಿಗೆಗಳ ನಡುವೆ ವೈಶಿಷ್ಟ್ಯಗಳನ್ನು ಗುರುತು ಹಿಡಿಯುವುದಕ್ಕೆ ಸಾಧ್ಯವಾಗುವುದಿಲ್ಲ. ಬದಲಿಗೆ ಈ ಪೀಳಿಗೆಗಳ ನಡುವೆ ವೈಷಮ್ಯಗಳು ಎದ್ದು ತೋರುತ್ತವೆ ಹಾಗೂ ಪೀಳಿಗೆಗಳ ನಡುವಿನ ಕೊಂಡಿ ಕಳಚಿ ಸತ್ಯ ಮತ್ತು ಹೊಂದಾಣಿಕೆ ಎನ್ನುವುದು ಮರೆಮಾಚುತ್ತದೆ. ಮಾನವ ಸಂಬಂಧಗಳು ಮುರಿದುಬೀಳುತ್ತದೆ.
ಹಿರಿಯ ಪೀಳಿಗೆಗೆ ಕಿರಿಯ ಪೀಳಿಗೆ ಎಂದಿಗೂ ಆಭಾರಿಯಾಗಿರಲೇಬೇಕು. ಹಿರಿಪೀಳಿಗೆ ಕಿರಿಪೀಳಿಗೆಯ ಬದಲಾವಣೆಯ ವಿಶಿಷ್ಠತೆಯನ್ನು ಕಂಡು ಪ್ರಶಂಶಿಸಬೇಕು ಮತ್ತು ಮತ್ತಷ್ಟು ಆಶೀರ್ವದಿಸಬೇಕು. ವಿಜ್ಞಾನದ ಪ್ರಕಾರ ಗಮನಿಸುವುದಾದರೆ ಅನುವಂಶಿಕ ಗುಣಗಳ ಆಧಾರದ ಮೇಲೆ ಜ್ಞಾನವು ಮತ್ತು ವಿಕಾಸವು ವರ್ಗಾವಣೆ ಆಗುತ್ತದೆ. ಈ ವರ್ಗಾವಣೆಗೊಂಡ ವಿಕಸಿತ ಅಂಶಗಳು ಮುಂದಿನ ಪೀಳಿಗೆಯ ವರ್ತಮಾನದ ಕ್ರಿಯೆಗಳ ಹಂತದಲ್ಲಿ ಮತ್ತಷ್ಟು ಭಿನ್ನ ರೂಪವನ್ನು ಅಥವಾ ಭಿನ್ನ ಬೆಳೆವಣಿಗೆಯನ್ನು ಕಾಣುತ್ತದೆ. ಈ ಬೆಳೆವಣಿಗೆ ಉತ್ತಮವೇ ಆಗಿರಬಹುದು ಅಧಮವೇ ಆಗಿರಬಹುದು ಒಟ್ಟಿನಲ್ಲಿ ಅಲ್ಲೊಂದು ಬದಲಾವಣೆಯಂತೂ ಇದ್ದೇ ಇರುತ್ತದೆ.
ಈ ಅನುವಂಶಿಕ ಗುಣಗಳು ಹಿರಿಯ ಪೀಳಿಗೆ ಮತ್ತು ಕಿರಿಯ ಪೀಳಿಗೆಯನ್ನು ಹೊಂದುಮಾಡುವ ವಿಚಾರವಾಗಿದೆ. ಹಿರಿಯರದ್ದೇ ಜ್ಞಾನವು, ಜೀವನ ಶೈಲಿಯ ಅಂಶಗಳು, ಸಮಾಜ ಸಂಘಟಿತ ವ್ಯವಸ್ಥೆಗಳು ಕಿರಿಯರಲ್ಲಿ ಕೊಂಚ ಬೆಳೆವಣಿಗೆಯಲ್ಲಿ ಹೊಳಪನ್ನು ಹೊಂದಿರುತ್ತದಷ್ಟೇ. ಆದ್ದರಿಂದ ಮೂಲದಲ್ಲಿ ಆರಂಭವಾದ ಕ್ರಿಯೆ ಪಕ್ವತೆಯನ್ನು ಪಡೆಯುತ್ತಾ ಸಾಗುತ್ತದೆ. ಹೀಗೆ ಸಾಗುತ್ತಿರುವ ಪಕ್ವತೆಯನ್ನು ಒಂದು ಪೀಳಿಗೆ ಮತ್ತೊಂದು ಪೀಳಿಗೆಗೆ ಹಲವಾರು ಮಾರ್ಪಾಡುಗಳ ಮೂಲಕ ಕೊಂಡೊಯ್ಯುತ್ತಿರುತ್ತದೆ.
ಕೆಲವೊಂದು ವಿಷಯಗಳು ಹೀಗಾಗುತ್ತದೆ ಕ್ಲಿಷ್ಟವಾಗಿದ್ದ ಕೆಲಸಗಳನ್ನು ಸುಲಭ ರೂಪದಲ್ಲಿ, ಬದಲಾದ ಸ್ಥಿತಿಯಲ್ಲಿ ದೊರೆಯುವಂತೆ ಈ ಭವಿಷ್ಯದ ಪೀಳಿಗೆ ಕಾರ್ಯನಿರ್ವಹಿಸುತ್ತಿರುತ್ತದೆ. ಉದಾಹರಣೆಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಒಂದು ಪೀಳಿಗೆ ವಾಹನ ಸಾಧನಗಳನ್ನು ಕಂಡುಹಿಡಿಯಿತು. ಇಲ್ಲಿ ಅರವತ್ತು ಕೀ.ಮೀ ಅನ್ನು ಎರಡು ಘಂಟೆಯಲ್ಲಿ ತಲುಪುವ ವಾಹನದ ವೇಗದ ಸಾಧಿತವಿರುತ್ತದೆ ಆದರೆ ಈ ಸಂಚಾರ ಸಾಧನವನ್ನು ಭವಿಷ್ಯದಲ್ಲಿ ಬಂದ ಪೀಳಿಗೆ ಘಂಟೆಗೆ ಅರವತ್ತು ಕಿ.ಮೀ. ತಲುಪುವ ವೇಗದ ಸಾಧಿತವನ್ನು ಹೊಂದುತ್ತದೆ. ಇಲ್ಲಿ ಎರಡರಲ್ಲೂ ಇದ್ದ ಕಾರ್ಯ ಸಾಧನೆ ಒಳ್ಳೆಯದೇ. ಇಲ್ಲಿ ಸೃಷ್ಟಿ ಮಾಡಿದ ಪೀಳಿಗೆಯೂ ಗೌರವಾರ್ಹ ಹಾಗೂ ಅದನ್ನು ಬೆಳೆವಣಿಗೆ ಹಂತದಲ್ಲಿ ಕಾರ್ಯ ಸಾಧನೆಯ ದಕ್ಷತೆಯನ್ನು ಹೆಚ್ಚಿಸಿದ ಮುಂದಿನ ಪೀಳಿಗೆಯ ಕಾರ್ಯವು ಗೌರವಾರ್ಹವಾಗಿದೆ.
ಇಲ್ಲಿ ಪೀಳಿಗೆಗಳ ನಡುವೆ ಶ್ರೇಷ್ಠ ಮತ್ತು ಕನಿಷ್ಠ ನಿಲುವುಗಳು ಬರಲೇ ಬಾರದು. ಆಯಾಯ ಯುಗಧರ್ಮದ ಮಹತ್ವ ಇದ್ದೇ ಇರುತ್ತದೆ. ಅಂದಿನ ಪ್ಲೇಟೋ, ಸಾಕ್ರಟೀಸ್, ಅರಿಸ್ಟಾಟಲ್, ವಾಲ್ಮೀಕಿ, ವ್ಯಾಸ, ಪಂಪ, ಚಾಣಕ್ಯ ಇನ್ನೂ ಅನೇಕ ಜ್ಞಾನಿಗಳ ತಾತ್ವಿಕ ವಿಚಾರಗಳಿಗಿಂತ ಹೊಸಸೃಷ್ಟಿಸುವ ಚತುರತೆ ಈ ಶತಮಾನದ ಪೀಳಿಗೆಗೆ ಕಷ್ಟಸಾಧ್ಯವಾಗಿದೆ. ಹಾಗಾಗಿ ಭದ್ರ ಅಡಿಪಾಯವನ್ನು ಹಾಕಿಕೊಟ್ಟ ಭೂತಮಾನದ ಪೀಳಿಗೆಗೆ ವರ್ತಮಾನದ ಮತ್ತು ಭವಿಷ್ಯದ ಪೀಳಿಗೆ ಋಣಿಯಾಗಿರಲೇಬೇಕು. ಕೆಲವು ವಿಚಾರಗಳಲ್ಲಿ ವೇಗತೆಯನ್ನು ಪಡೆದುದಾಗಿ ಪೀಳಿಗೆಗಳಲ್ಲಿ ಅರಿವು ಮತ್ತು ಹೊಸ ಪೀಳಿಗೆ ಊರ್ಜಿಸಿದ ವಸ್ತುಗಳ ಬಳಕೆಯ ದೃಷ್ಟಿಯಲ್ಲಿ ಹಿರಿಯ ಪೀಳಿಗೆಗೆ ಗೊಂದಲ ಉಂಟಾಗುತ್ತದೆ. ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ಬೆಳೆವಣಿಗೆಯ ಘರ್ಷಣೆಯಿಂದಾಗಿ ಪೀಳಿಗೆಗಳ ನಡುವೆ ಹೊಂದಾಣಿಕೆ ತಪ್ಪುತ್ತದೆ. ಏಕಪ್ರಕಾರದ ಚಲನೆ ಅಸಾಧ್ಯವಾಗಿ ನಿಂತಿರುತ್ತದೆ. ಹಾಗಾಗಿ ಈ ಜನರೇಷನ್ ಗ್ಯಾಪ್ ಈ ವರ್ತಮಾನದವರ ಒಂದು ಕೂಗಾಗಿದೆ.
ಹಿರಿಯ ಪೀಳಿಗೆಯಲ್ಲಿ ನಿಯಮ ಮತ್ತು ಕಟ್ಟುಪಾಡುಗಳು ಹೆಚ್ಚು ಆದರೆ ಕಿರಿಯ ಪೀಳಿಗೆಯಲ್ಲಿ ಸರಳೀಕೃತರು ಮತ್ತು ಸುಲಭಪ್ರಾಯದವರಾಗಿದ್ದು ಒಂದೇ ಸನ್ನಿವೇಶದಲ್ಲಿ ಇಬ್ಬರೂ ಭಾಗಿಯಾದಾಗ ಈ ಜನರೇಷನ್ ಗ್ಯಾಪ್ ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. ಹಿರಿಯ ಪೀಳಿಗೆ ಗತಕಾಲದಲ್ಲಿ ಮರೆಯಾಗಲೇಬೇಕು ಅದರ ಹಿಂದೆ ಕಿರಿಯ ಪೀಳಿಗೆ ಕೂಡ ಕಾಲಗರ್ಭದಲ್ಲಿ ಸೇರಲೇಬೇಕು. ವಿಕಸಿತವೊಂದೇ ಮುಂದೋಗುವುದು; ಅದು ಕೂಡ ಪೀಳಿಗೆಗಳ ಮೂಲಕವೇ ಹಾಗಾಗಿ ಇಲ್ಲಿ ಗಮನಿಸಬೇಕಾದ ಮೂಲ ತತ್ವಗಳಲ್ಲಿ ಮೊದಲನೆಯದು ಹೊಂದಾಣಿಕೆ ಮತ್ತು ಸ್ವೀಕರಣೆ. ಪೀಳಿಗೆಗಳ ನಡುವೆ ಎಷ್ಟೇ ಅಂತರಗಳು ಏರ್ಪಟ್ಟರೂ ಹಿರಿಯ ಮತ್ತು ಕಿರಿಯರ ನಡುವೆ ಬಹಳಷ್ಟು ಆದಿಯ ಬೆಸುಗೆ ಇದ್ದೇ ಇರುತ್ತದೆ. ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಸಾಗುವ ಈ ಹಾದಿಯಲ್ಲಿ ಹೊಂದಾಣಿಕೆ ಮತ್ತು ಸ್ವೀಕರಣೆ ಅಗತ್ಯವಾಗಿದೆ.
ಆ ಜನರೇಷನ್ ಸರಿಯಿಲ್ಲ ಅಲ್ಲಿ ರಚನೆಯಾದ ವ್ಯವಸ್ಥೆಗಳೆಲ್ಲಾ ತಪ್ಪುತಪ್ಪಾಗಿ ರಚನೆಗೊಂಡವು ಮುಂದೆ ಬಂದ ಪೀಳಿಗೆ ಅದನ್ನೆಲ್ಲಾ ಸರಿಪಡಿಸಿದೆ ಎನ್ನುವ ಅಹಂಕೃತ ಹೇಳಿಕೆಗಳು ಹಾಗೂ ಸ್ವತಃ ಅಭಿಪ್ರಾಯಗಳನ್ನು ಸಮಾಜಕ್ಕೆ ಪ್ರಚಾರ ಮಾಡುವ ಮನೋಧರ್ಮಗಳನ್ನು ಆದಷ್ಟು ಬೇಗ ತಿರಸ್ಕಾರ ಮಾಡುವುದು ಒಳಿತು. ಹಾಗೂ ಹಿರಿಯ ಪೀಳಿಗೆಯವರಾದ ನಾವು ವಸ್ತುನಿಷ್ಠವಾಗಿ ಬಲಾಢ್ಯವಾಗಿ ಸಂಸ್ಕರಿಸಿದ್ದನ್ನೆಲ್ಲಾ ಮುಂದೆ ಬಂದ ನಮ್ಮ ಕಿರಿಯರು ಹಾಳುಗೆಡುವಿದರು, ಸತ್ವಹೀನಗೊಳಿಸಿದರು, ಅಪಾಯಗಳ ವಸ್ತಿಲಿಗೆ ಕರೆತರುತ್ತಿರುವರು ಎನ್ನುವುದು ಸಮಂಜಸವಲ್ಲ. ಕಾಲ ಧರ್ಮದಲ್ಲಿ ನಿಸರ್ಗ ಬದಲಾವಣೆಯಲ್ಲಿ ಮನುಷ್ಯನ ಜೀವನಶೈಲಿ ಒಂದೇ ತೆರನಾಗಿ ಇರುವುದಿಲ್ಲ. ಹಾಗಾಗಿ ಎಲ್ಲಾ ವಿಚಾರಗಳಲ್ಲೂ ಮನುಷ್ಯನ ಮುಂದೋಗುವಿಕೆ ಇದ್ದೇ ಇರುತ್ತದೆ ಅದು ಅಪಾಯಗಳೇ ಆಗಿರಬಹುದು ಅಥವಾ ಉಪಾಯಗಳೇ ಆಗಿರಬಹುದು. ಇದರಿಂದ ತಾರತಮ್ಯಗಳನ್ನು ಪೀಳಿಗೆಗಳಲ್ಲಿ ಗುರುತಿಸಿಕೊಳ್ಳುವುದರ ಬದಲು ಹೊಂದಾಣಿಕೆ ಎನ್ನುವ ಮಹಾಮಂತ್ರವನ್ನು ಜಪಿಸಿದರೆ ವಿಕಾಸದ ಹಾದಿಯು ಅದರ ಗುರಿಯನ್ನು ಉತ್ತಮ ರೀತಿಯಲ್ಲಿ ತಲುಪಿಯೇ ತಲುಪುತ್ತದೆ. ಏಕತಾ ತತ್ವದಲ್ಲಿ ಪೀಳಿಗೆಗಳು ಸಾಗಬೇಕಿದೆ. ಮನುಷ್ಯತ್ವದ ನೆಲೆಯೊಂದೇ ನೆಲೆವೂರಬೇಕಿದೆ. ಸಮಾಜದ ಪೂರ್ಣ ವ್ಯವಸ್ಥೆಗಳೆಲ್ಲವೂ ಎರವಲು ಎನಿಸಿದರೂ ಎಲ್ಲವೂ ಮನುಷ್ಯ ವಿಕಾಸಗಳೇ ಆಗಿದೆ. ಶೋಧಿಸುವ ಕಾರ್ಯ ಎಲ್ಲ ಕಾಲದ ಹಂತಗಳಲ್ಲೂ ಆಗಿರುವುದರಿಂದ ಪರಿಷ್ಕರಣಾ ಫಲಿತಾಂಶಗಳು ಈವರೆಗೇ ಏನೇನೂ ದೊರಕಿದೆಯೋ ಅವೆಲ್ಲವೂ ಮನುಷ್ಯ ಜಗತ್ತಿನಲ್ಲಾದ ನಮ್ಮದೇ ವಿಕಾಸಗಳಾಗಿದೆ ಭೇಧಗಳಿರದ ವಿಕಾಸಗಳನ್ನು ಅರ್ಥೈಸಿಕೊಂಡು ಈ ಜನರೇಷನ್ ಗ್ಯಾಪ್ ಎನ್ನುವ ಸಣ್ಣ ಎಳೆಯನ್ನು ತೆಗೆದಾಕುವುದು ಒಳ್ಳೆಯ ಬೆಳೆವಣಿಗೆಯೇ ಆಗಿದೆ.
ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ಸಂಶೋಧಕ, ವಿಮರ್ಶಕ.
ಎಚ್.ಡಿ. ಕೋಟೆ ಮೈಸೂರು.
ದೂರವಾಣಿ ಸಂಖ್ಯೆ :- 8884684726

Gmail I’d:-manjunathabr709@gmail.com
Attachments area