ಕೃಷ್ಣರಾಜಪೇಟೆ: ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಮನೋಬಲ ತುಂಬುವ ಸಲುವಾಗಿ ಗಾನ ಸುಧೆಯನ್ನು ತಾಲೂಕಿನ ಶೆಟ್ಟನಾಯಕನಕೊಪ್ಪಲು ಗ್ರಾಮದ ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ ಸ್ಥಾಪಿಸಿರುವ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಹರಿಸಲಾಯಿತು.
ಸುಮಾರು ಇನ್ನೂರಕ್ಕೂ ಹೆಚ್ಚು ಸೋಂಕಿತರು ಮಂಡ್ಯದ ರಾಗರಂಜನಿ ಸಂಗೀತ ಕಲಾತಂಡವು ನಡೆಸಿಕೊಟ್ಟ ಸುಗಮ ಸಂಗೀತದ ಸುಮಧುರ ಹಾಡಿಗೆ ತಲೆದೂಗಿ ಖುಷಿಪಟ್ಟರಲ್ಲದೆ, ತಮ್ಮ ನೋವುಗಳನ್ನು ಮರೆತು ಸಂಭ್ರಮಿಸಿದರು. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡರು ಸೋಂಕಿತರ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ಸಂವರ್ಧನೆಗಾಗಿ ಆಯೋಜಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಅವರು ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ ಎಂಬ ಹಾಡು ಹಾಡಿ ರಂಜಿಸಿದರು.


ಈ ಸಂದರ್ಭ ಮಾತನಾಡಿದ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಅವರು ಸಚಿವ ನಾರಾಯಣಗೌಡರ ನಿರ್ದೇಶನದಂತೆ ಕೋವಿಡ್ ಹೆಲ್ತ್‌ಕೇರ್ ಸೆಂಟರ್‌ನಲ್ಲಿ ಸುಗಮ ಸಂಗೀತ ಕಾರ್ಯಕ್ರವನ್ನು ಆಯೋಜಿಸಲಾಗಿದೆ. ಇಲ್ಲಿನ ಸಂಭ್ರಮ ಸಂತೋಷವನ್ನು ನೋಡಿದರೆ ಕಾರ್ಯಕ್ರಮದ ಆಯೋಜನೆಗೆ ಮಹತ್ವ ಬಂದಿದೆ ಎಂದು ಗೊತ್ತಾಗುತ್ತಿದೆ. ಆರೋಗ್ಯ ಸಂವರ್ಧನಾ ಕೇಂದ್ರದಲ್ಲಿ ಸಂತೋಷ ಮನೆ ಮಾಡಿದೆ. ಸೋಂಕಿತರ ಮೊಗದಲ್ಲಿ ಮಂದಹಾಸವು ಮೂಡಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೋವಿಡ್ ಪಾಸಿಟಿವ್ ಪತ್ತೆಯಾದವರನ್ನು ಕೋವಿಡ್ ಆರೋಗ್ಯ ಸಂವರ್ಧನಾ ಕೇಂದ್ರದಲ್ಲಿಟ್ಟು ವಿಶೇಷ ಕಾಳಜಿಯಿಂದ ಊಟ, ವಸತಿ ಹಾಗೂ ವೈದ್ಯಕೀಯ ಆರೈಕೆಯನ್ನು ನೀಡಿ ಗುಣಪಡಿಸಲಾಗುತ್ತಿದೆ. ಕೋವಿಡ್ ಸೋಂಕಿತರು ಭಯಭೀತಿಯಿಂದ ಮುಕ್ತರಾಗಿ ಆತ್ಮವಿಶ್ವಾಸದಿಂದ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿ ಸಂತೋಷದಿಂದ ಮನೆಗೆ ತೆರಳಬೇಕು. ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಮನವಿ ಮಾಡಿದರು.
ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ಶಿವಮೂರ್ತಿ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್, ಸಬ್‌ಇನ್ಸ್‌ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮತ್ತು ಸಚಿವರ ಆಪ್ತಸಹಾಯಕರಾದ ದಯಾನಂದ ಮೊದಲಾದವರು ಇದ್ದರು.

By admin