ಚಾಮರಾಜನಗರ: ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಹಾಗೂ ಒಣ ಕಸವನ್ನಾಗಿ ವಿಂಗಡಿಸುವ ಕುರಿತ ಪ್ರತಿಜ್ಞೆ ಬಗ್ಗೆ ಹಮ್ಮಿಕೊಳ್ಳಲಾಗಿರುವ ಸಹಿ ಸಂಗ್ರಹ ಅಭಿಯಾನ ಇಂದು ಆರಂಭಗೊಂಡಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ನಗರಾಭಿವೃದ್ದಿ ಕೋಶದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಫೋಟೊ ಬೂತ್ ಪಕ್ಕದಲ್ಲಿ ಸಹಿ ಹಾಕುವ ಮೂಲಕ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆ ಆಗುವಂತಹ ಸ್ಥಳಗಳಾದ ಹೋಟೆಲ್, ಕಲ್ಯಾಣ ಮಂಟಪಗಳು, ವಾಣಿಜ್ಯ ಚಟುವಟಿಕೆ ಪ್ರದೇಶಗಳಲ್ಲಿ ಹಸಿಕಸ ಹಾಗೂ ಒಣಕಸವನ್ನಾಗಿ ವಿಂಗಡಿಸುವ ಜವಾಬ್ದಾರಿ ಹೆಚ್ಚಿದೆ. ಅಂತಹ ಕಡೆಯೂ ಸ್ಥಳೀಯ ಸಂಸ್ಥೆಗಳೊಡನೆ ಕೈ ಜೋಡಿಸಿ ವೈಜ್ಞಾನಿಕ ಕಸ ವಿಂಗಡಣೆಗೆ ಸಹಕರಿಸಬೇಕು. ವೈಯಕ್ತಿಕವಾಗಿಯೂ ಕೂಡ ಪ್ರತಿಯೊಬ್ಬ ವ್ಯಕ್ತಿಯೂ ಪರಿಸರ ಸ್ವಚ್ಚತೆಯಲ್ಲಿ ಭಾಗಿಯಾಗಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈಜ್ಞಾನಿಕ ಕಸ ನಿರ್ವಹಣೆಗೆ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ನಗರಸಭೆಯಿಂದಲೂ ಕೂಡ ಪಟ್ಟಣದಲ್ಲಿರುವ ಪ್ರತಿ ಮನೆಗಳಿಂದಲೂ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ. ಜನತೆ ಹಸಿಕಸ, ಒಣಕಸವನ್ನಾಗಿ ವಿಂಗಡಿಸಿ ಕೊಡುವ ಮೂಲಕ ನಗರ ಸ್ವಚ್ಚತೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು ಅವರು ಮಾತನಾಡಿ ಸ್ವಚ್ಚಭಾರತ್ ಮಿಷನ್ ಯೋಜನೆ ಯಶಸ್ವಿಗೆ ಜನರ ಸಹಕಾರ ಅಗತ್ಯ, ಸ್ವಚ್ಚತಾ ಆಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಸ್ವಚ್ಚತೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಿದಲ್ಲಿ ೪೮ ಗಂಟೆಗಳಲ್ಲಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಪಿ. ಸುಧಾ, ಪರಿಸರ ಅಭಿಯಂತರರಾದ ಗಿರಿಜಾ, ಹಿರಿಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ, ಆರೋಗ್ಯ ನಿರೀಕ್ಷಕರಾದ ಮಂಜುನಾಥ, ಗ್ರೀನ್ ಸಂಸ್ಥೆಯ ಕಾರ್ಯದರ್ಶಿ ಮಹದೇವಸ್ವಾಮಿ ಅಭಿಯಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.