ಚಾಮರಾಜನಗರ: ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಉಂಟಾಗುವ ಲೋಪದೋಷಗಳನ್ನು ಸರಿಪಡಿಸಿಕೊಳಲು ತರಬೇತಿ ಉಪಯುಕ್ತ ಹಾಗೂ ಅತ್ಯಾವಶ್ಯಕವಾಗಿದ್ದು, ತರಬೇತಿಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಲಹೆ ಮಾಡಿದರು. 

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯಿತಿ ವತಿಯಿಂದ ಜಲ ಜೀವನ್ ಮಿಷನ್ ಯೋಜನೆಯ ವಿವಿಧ ಅನುಷ್ಠಾನ ಹಂತದಲ್ಲಿನ ತಾಂತ್ರಿಕ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ ಜಲ ಜೀವನ್ ಮಿಷನ್ ಯೋಜನೆಯು ೨೦೧೯ರಲ್ಲಿ ಜಾರಿಯಾಗಿದೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಹಕಾರ, ಸಹಭಾಗಿತ್ವದೊಂದಿಗೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಸವಾಲು ನಮ್ಮ ಮುಂದಿದೆ. ಅನುಷ್ಟಾನದಲ್ಲಿ ಯಾವುದೇ ಅಡೆತಡೆಗಳಾಗದಂತೆ ನಿಗಾವಹಿಸಿ ನಿಗದಿತ ಅವಧಿಯಲ್ಲಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿಒದರು.

ಪ್ರಮುಖವಾಗಿ ವರ್ಗಾವಣೆಗೊಂಡಿರುವ ಇಂಜಿನಿಯರ್‌ಗಳಿಗೆ ಹಾಗೂ ಹೊಸ ಗುತ್ತಿಗೆದಾರರಿಗೆ ಯೋಜನೆಯ ಸಮಗ್ರ ಪರಿಶೀಲನೆ ನಡೆಸಲು ಈ ತರಬೇತಿಯು ಅನುಕೂಲವಾಗಲಿದೆ. ಜಲ ಜೀವನ್ ಮಿಷನ್ ಯೋಜನೆಯನ್ನು ವೈಜ್ಞಾನಿಕ ಅನುಷ್ಠಾನಕ್ಕಾಗಿ ತಾಂತ್ರಿಕ ವರ್ಗದವರು ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು. 

ಮೈಸೂರು ವೃತ್ತದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಎಂ.ಎನ್ ಕೃಷ್ಣಮೂರ್ತಿ ಅವರು ಮಾತನಾಡಿ ಯೋಜನೆಗೆ ಸಂಬಂಧಪಟ್ಟ ಇಂಜಿನಿಯರ್‌ಗಳು, ಗುಣಮಟ್ಟ ಪರಿಶೀಲಕರು, ತಾಂತ್ರಿಕ ವರ್ಗದವರು ಜಲ ಜೀವನ್ ಮಿಷನ್ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪರಸ್ಪರ ಸಹಕಾರದಿಂದ ಕೆಲಸ ಮಾಡಲು ತರಬೇತಿ ಉಪಯೋಗವಾಗಲಿದೆ ಎಂದರು. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಾಮರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗಂಗಾಧರಯ್ಯ, ಜಲ ಜೀವನ್ ಮಿಷನ್ ಯೋಜನೆಯ ತಾಂತ್ರಿಕ ವಿಷಯದ ಸಂಪನ್ಮೂಲ ವ್ಯಕ್ತಿ ಶಿವಶಂಕರಯ್ಯ, ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರಯ್ಯ, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.