ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆಯ ಇತಿಹಾಸದಲ್ಲಿಯೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೊದಲಿಗೆ ಗೆಲುವು ಸಾಧಿಸಿದ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ, ಬಿಜೆಪಿ ಗ್ರಾಮೀಣ ಘಟಕದ ತಂಡ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಅಧ್ಯಕ್ಷರು, ಸಂಸದರು, ಶಾಸಕರು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರಾಜಿತ ಅಭ್ಯರ್ಥಿಗಳು ಹಾಗೂ ಪ್ರಮುಖವಾಗಿ ಮತದಾರ ಪ್ರಭುವಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಮೈಸೂರು ಜಿಲ್ಲೆಯಲ್ಲಿ 250 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 4232 ಗ್ರಾಮ ಪಂಚಾಯಿತಿ ಸ್ಥಾನಗಳಿವೆ. ಇದರಲ್ಲಿ 20 ಸ್ಥಾನಗಳು ನಾಮಪತ್ರ ಸಲ್ಲಿಸದೇ ಖಾಲಿ ಇದ್ದು, 205 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 4007 ಸ್ಥಾನಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡು ಪಕ್ಷಕ್ಕೆ ಬಲತುಂಬಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆ ವಿಷಯಕ್ಕೆ ಬಂದಾಗ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರ ನೆಲೆಯನ್ನು ಹೊಂದಿದ್ದರೂ ಸಹ ಪಕ್ಷದ ಚಿಹ್ನೆ ಇಲ್ಲದೆ, ಕಾರ್ಯಕರ್ತರು ಸ್ಪರ್ಧಿಸುವ ಸ್ಥಳೀಯ ಚುನಾವಣೆ ಬಂದರೆ ಪಕ್ಷಕ್ಕೆ ಗಟ್ಟಿ ನೆಲೆ ಎಂಬುದು ಇರಲಿಲ್ಲ. ಪಕ್ಷಕ್ಕಾಗಿ, ನಾಯಕರುಗಳಿಗಾಗಿ ದುಡಿಯುವ ಕಾರ್ಯಕರ್ತನಿಗಾಗಿ ಈ ಬಾರಿ ನಾವುಗಳು ದುಡಿಯಬೇಕು. ಅವರನ್ನು ಗೆಲ್ಲಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಈ ಮೂಲಕ ಹಳ್ಳಿಯಿಂದ ದಿಲ್ಲಿಯವರೆಗೂ ಕೇಸರಿ ಬಾವುಟ ಹಾರಬೇಕು ಎಂಬ ಕನಸು ರಾಷ್ಟ್ರೀಯ ಹಾಗೂ ರಾಜ್ಯದ ಮಟ್ಟದ ನಾಯಕರದ್ದಾಗಿತ್ತು. ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಆಡಳಿತ ಶ್ರೀ ಸಾಮಾನ್ಯನ ಮಟ್ಟಕ್ಕೂ ಮುಟ್ಟಿಸುವ ಕೆಲಸವಾಗಿದ್ದು, ಪ್ರತಿ ಹಳ್ಳಿಗಳಲ್ಲೂ ಕಮಲ ಅರಳಿದೆ. ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಸಹ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅಭಿವೃದ್ಧಿಪರ, ಜನಪರ, ಕೃಷಿಕರ ಪರವಾಗಿ ತೆಗೆದುಕೊಂಡ ನಿರ್ಧಾರಗಳಿಗೆ ಸಿಕ್ಕ ಜಯ ಇದಾಗಿದೆ.

ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಪಕ್ಷ ಸಂಘಟನೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೆಚ್ಚಿನ ಒತ್ತು ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ, ಸಂಸದರು, ಶಾಸಕರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಪ್ರಮುಖರಿಗೆ ಸೂಚನೆ ನೀಡಿದ್ದರು. ಇದರನ್ವಯ ನಾವೆಲ್ಲ ಒಂದು ತಂಡವಾಗಿ ಎರೆಡೆರಡು ಬಾರಿ ಜಿಲ್ಲಾ ಪ್ರವಾಸವನ್ನು ಮಾಡಿದ್ದೆವು. ಈಗ ನಮ್ಮ ಪ್ರವಾಸದ, ಸಂಘಟನೆಯ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗೆ ಫಲ ಸಿಕ್ಕಿದೆ.

ಮತದಾರರಿಗೆ ಕೃತಜ್ಞತೆಗಳು
ನಾನು ಮೈಸೂರು ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ ಮೈಸೂರು ಗ್ರಾಮೀಣ ಭಾಗದ 8 ವಿಧಾನಸಭಾ ಕ್ಷೇತ್ರದಲ್ಲಿ ಎರಡೆರಡು ಬಾರಿ ಪ್ರಚಾರ ಮಾಡಿ ಪಕ್ಷದ ಕಾರ್ಯಕರ್ತರ ಹಾಗೂ ಮತದಾರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿದ್ದೇನೆ. ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರ ಪ್ರಭು ಆಶೀರ್ವಾದ ನೀಡುವ ಮೂಲಕ ಪ್ರತಿ ಹಳ್ಳಿಯಲ್ಲೂ ಕೈಹಿಡಿಯುವ ಒಲವು ತೋರಿದ್ದಾನೆ. ಹೀಗಾಗಿ ನಮ್ಮೆಲ್ಲ ಮತದಾರರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ವಿಶೇಷ ಅಭಿನಂದನಾರ್ಹರು
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಈ ಸಂದರ್ಭದಲ್ಲಿ ಕೆಲವು ಪ್ರಮುಖರನ್ನು ಸ್ಮರಿಸಿಕೊಳ್ಳಲೇಬೇಕು. ಗ್ರಾಮ ಸ್ವರಾಜ್ಯ ಕಾರ್ಯಕ್ರಮ ನಿಜಕ್ಕೂ ಯಶಸ್ಸನ್ನು ತಂದುಕೊಟ್ಟಿದೆ. ಈ ಸಂದರ್ಭದಲ್ಲಿ ಪ್ರತಿ ಸಭೆಗಳಲ್ಲೂ ಹಾಜರಿದ್ದು, ಜನಾಭಿಪ್ರಾಯ ಮೂಡಿಸುವಲ್ಲಿ ಸಹಕಾರಿಗಳಾದ ಕಂದಾಯ ಸಚಿವರಾದ ಆರ್.ಅಶೋಕ್, ಪೌರಾಡಳಿತ ಸಚಿವರಾದ ನಾರಾಯಣ ಗೌಡ, ಆಹಾರ ಸಚಿವರಾದ ಗೋಪಾಲಯ್ಯ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಸದಸ್ಯರೂ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಮಂಗಳಾ ಸೋಮಶೇಖರ್, ಮಾಜಿ ಸಚಿವರಾದ ಎಂ.ಶಿವಣ್ಣ, ಮೈಸೂರು ಜಿಲ್ಲಾ ಬಿಜೆಪಿ ಪ್ರಭಾರಿಗಳಾದ ಮೈ.ವಿ,ರವಿಶಂಕರ್, ಮಂಡಲ, ಶಕ್ತಿಕೇಂದ್ರ ಹಾಗೂ ಮಹಾ ಶಕ್ತಿಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ವಿಜೇತರಿಗೆ ಕಿವಿಮಾತು
ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಜಯ ನಿಜಕ್ಕೂ ಪಕ್ಷದ ಜಯ. ಇನ್ನು ಮುಂದೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಬಿಜೆಪಿಯ ಘನತೆ, ಗೌರವ ಅಡಗಿರುತ್ತದೆ. ಈ ನಿಟ್ಟಿನಲ್ಲಿ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಪಕ್ಷಕ್ಕೆ ಹೆಸರು ತರುವುದರ ಜೊತೆಗೆ ವೈಯುಕ್ತಿಕವಾಗಿಯೂ ಬೆಳವಣಿಗೆ ಸಾಧಿಸಬೇಕು. ಅಲ್ಲದೆ, ಅಭಿವೃದ್ಧಿ ವಿಚಾರಕ್ಕೆ ಬಂದಾಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಯಾವಾಗ ಬೇಕಿದ್ದರೂ ನನ್ನ ಸಹಕಾರ ಇದ್ದೇ ಇರುತ್ತದೆ. ನಿಮ್ಮ ಅತ್ಯುತ್ತಮ ಕೆಲಸಗಳು ನಮ್ಮ ಮುಂಬರುವ ಚುನಾವಣೆಗಳಾದ ತಾಲೂಕು ಪಂಚಾಯಿತಿ, ಚಿಲ್ಲಾ ಪಂಚಾಯಿತಿ ಮತ್ತು ವಿಧಾನಸಭಾ ಚುನಾವಣೆಗೆ ಬುನಾದಿಯಾಗಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಜೊತೆಗೂಡಿ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ ಬಿ.ಎಸ್. ಯಡಿಯೂರಪ್ಪ ಅವರ ಹಾಗೂ ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಕೈಬಲಪಡಿಸೋಣ.

By admin