ಚಾಮರಾಜನಗರ: ಶಿಕ್ಷಣದ ನಂತರ ಯುವಜನರು ಅವರಲ್ಲಿ  ಅಂತರ್ಗತವಾಗಿರುವ ಜ್ಞಾನ ಮತ್ತು ಕೌಶಲವನ್ನು ಗುರುತಿಸಿ ಹಲವು ಜನರಿಗೆ ಉದ್ಯೋಗ ನೀಡಬಹುದಾದ ಸ್ವಯಂ ಉದ್ಯೋಗ ಪ್ರಾರಂಭಿಸುವ ಪ್ರಯತ್ನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಲಹೆ ಮಾಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ಒಂದು ದಿನದ ಉದ್ಯಮಶೀಲತಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರಿಗೆ ಶಿಕ್ಷಣ ಮುಗಿದ ಬಳಿಕ ಮುಂದೇನು ಮಾಡಬೇಕೆಂಬ ಪ್ರಶ್ನೆ ಎದುರಾಗುತ್ತದೆ. ಕೆಲಸ ಅರಸಿ ವಲಸೆ ಹೋಗುವುದಕ್ಕಿಂತ ಇರುವಲ್ಲೇ ಸ್ವಯಂ ಉದ್ಯೋಗ ರೂಪಿಸಿಕೊಂಡರೆ ಇನ್ನಷ್ಟು ಜನರ ಬದುಕಿಗೆ ಆಸರೆಯಾಗುವ ಉದ್ಯೋಗ ನೀಡಬಹುದು. ಈ ಕುರಿತು ಮಾರ್ಗದರ್ಶನ ಮಾಡುವುದಕ್ಕಾಗಿಯೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉದ್ಯಮಾಶೀಲತಾ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು. 
ಸ್ವಯಂ ಉದ್ಯೋಗಕ್ಕೆ ಅವಶ್ಯವಿರುವ ಆರ್ಥಿಕ ನೆರವನ್ನು ಬ್ಯಾಂಕುಗಳಿಂದ ಪಡೆಯಬೇಕಾಗುತ್ತದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಟ್ಟು ಸಿಗದಿದ್ದಾಗ ನಿರಾಶರಾಗುವುದು ಬೇಡ. ಸ್ವಯಂ ಉದ್ಯೋಗ ಕೈಗೊಂಡು ಸಹ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ. ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಬೆಳೆವಣಿಗೆಗೂ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ವಿವಿಧ ಇಲಾಖೆಗಳು ನಿರುದ್ಯೋಗಿ ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಈ ಎಲ್ಲಾ ಪ್ರಯೋಜನ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಗಾಯತ್ರಿ ಅವರು ತಿಳಿಸಿದರು.   
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಎಲ್ಲಾ ವರ್ಗದ ಜನರಿಗೂ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ಲಭಿಸಲಿದೆ. ಮುಂದೆ ಉದ್ದಿಮೆದಾರರಾಗಲು ಮಾಹಿತಿ ನೀಡುವ ಕರ್ನಾಟಕ ಹೊಸ ಕೈಗಾರಿಕಾ ನೀತಿಯ ಕೈಪಿಡಿಯನ್ನೂ ಸಹ ಹೊರತರಲಾಗಿದೆ. ಜಿಲ್ಲೆಗೆ ಅನ್ವಯವಾಗುವ ರಿಯಾಯಿತಿ ಪ್ರೋತ್ಸಾಹ ಕುರಿತು ಕೈಪಿಡಿ ತಿಳಿಸಲಿದೆ. ಉದ್ಯಮಶೀಲರಾಗಲು ಬಯಸುವ ಎಲ್ಲರಿಗೂ ಇದು ಅನುಕೂಲವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕರಾದ ಶಂಕರನಾರಾಯಣ ಅವರು ಸ್ವಯಂ ಉದ್ಯೋಗ ರೂಪಿಸಿಕೊಳ್ಳುವುದಕ್ಕೆ ಇಲಾಖೆಯಿಂದ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಸರ್ಕಾರಿ ಉದ್ಯೋಗವನ್ನೇ ನೆಚ್ಚಿಕೊಳ್ಳದೇ ಆತ್ಮವಿಶ್ವಾಸದಿಂದ ಸ್ವಯಂ ಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಬೇಕು ಎಂದರು. 
ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ರಾಜೇಂದ್ರ ಪ್ರಸಾದ್, ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕರಾದ ಶಂಕರ ಮಹದೇವಪ್ಪ, ಎಸ್‌ಬಿಐ ವ್ಯವಸ್ಥಾಪಕರಾದ ರಜಿನಿ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕರಾದ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕರಾದ ಎಸ್. ರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.