ಚಾಮರಾಜನಗರ: ಜಲಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಬಳಕೆ ಹಾಗೂ ಅಮೃತ ಸರೋವರದ ಯೋಜನೆ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾಂತ್ರಿಕವಾಗಿ ತಿಳಿದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಲ ಜೀವನ್ ಮಿಷನ್ ಹಾಗೂ ಅಮೃತ ಸರೋವರ ಅನುಷ್ಠಾನ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಲ ಜೀವನ್ ಯೋಜನೆಯು ಪ್ರತಿಯೊಂದು ಗ್ರಾಮದ ಪ್ರತಿ ಮನೆಗಳಿಗೂ ಶುದ್ದ ಕುಡಿಯುವ ನೀರನ್ನು ತಲುಪಿಸುವ ಯೋಜನೆಯಾಗಿದ್ದು ೨೦೨೩ ರ ವೇಳೆಗೆ ಸಂಪೂರ್ಣವಾಗಿ ಅನುಷ್ಠಾನವಾಗಬೇಕಿದೆ. ನಂತರ ಯೋಜನೆಯ ಸಂಪೂರ್ಣ ನಿರ್ವಹಣೆ, ಜವಾಬ್ದಾರಿ ಆಯಾ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಒಳಪಡಲಿದೆ. ಹೀಗಾಗಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಯೋಜನೆಯ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳುವುದು ಅತ್ಯವಶ್ಯವಾಗಿದೆ ಎಂದರು.
ಗ್ರಾಮಗಳ ಜನಸಂಖ್ಯೆಗೆ ಅನುಗುಣವಾಗಿ ಅವಶ್ಯಕ ನೀರಿನ ಪ್ರಮಾಣ, ಖರ್ಚು ವೆಚ್ಚಕ್ಕೆ ಅನುಗುಣವಾಗಿ ತೆರಿಗೆ ವಸೂಲಿ, ಸರಬರಾಜಾಗುವ ನೀರಿನ ಗುಣಮಟ್ಟ ಪರಿಶೀಲನೆ, ಮೀಟರ್ ರೀಡಿಂಗ್ ಮುಂತಾದ ಅಂಶಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
೭೫ನೇ ವರ್ಷದ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಜಾರಿಯಾಗಲಿರುವ ಅಮೃತ ಸರೋವರ ಯೋಜನೆಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ಶೀಘ್ರ ಸ್ಥಳ ಆಯ್ಕೆ ಮಾಡಬೇಕಿದೆ. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಶೀಘ್ರವಾಗಿ ಪರಿಶಿಲಿಸಿ ಅನುಮೋದನೆಗೆ ಶಿಫಾರಸು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೆಂಗಳೂರಿನ ವಿಶೇಷಾಧಿಕಾರಿ ರೋಹಿತ್ ಮಲ್ಹೋತ್ರ ಅವರು ಮಾತನಾಡಿ, ಜಲಜೀವನ್ ಮಿಷನ್ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಇದರಿಂದಾಗಿ ಗ್ರಾಮದ ಪ್ರತಿಯೊಂದು ಮನೆಗೂ ದಿನಕ್ಕೆ ಕನಿಷ್ಟ ೫೫ ಲೀ ಗುಣಮಟ್ಟದ ಶುದ್ದನೀರು ಸಿಗುವಂತಾಗುತ್ತದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೆಂಗಳೂರಿನ ಮತ್ತೋರ್ವ ವಿಶೇಷಾಧಿಕಾರಿ ನಂದಿತಾ ಚಂದ್ರಶೇಖರ್ ಅವರು ಜಲಜೀವನ್ ಮಿಷನ್ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಜೆ.ಜೆ.ಎಂ. ಡ್ಯಾಶ್‌ಬೋರ್ಡ್ ಅಪ್ಲಿಕೇಶನ್‌ನ ಬಳಕೆ, ಎಮ್.ವಿ.ಎಸ್. ಅನುಷ್ಠಾನಗೊಳ್ಳುವ ಪ್ರಕ್ರಿಯೆ, ಮೀಟರ್ ರೀಡಿಂಗ್, ಬಳಕೆಯಾದ ನೀರಿನ ಪ್ರಮಾಣವನ್ನು ಲೆಕ್ಕ ಹಾಕುವುದರ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ನಿವೃತ ಕಾರ್ಯಪಾಲಕ ಎಂಜಿನಿಯರ್ ಶಿವಶಂಕರಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗಂಗಾಧರಯ್ಯ, ಇತರರು ಉಪಸ್ಥಿತರಿದ್ದರು.