ಕೊಳ್ಳೇಗಾಲ: ಸದಾ ಜಾತಿ, ಧರ್ಮ ಎಂದು ಹೊಡೆದಾಡುವ ಬಹಳಷ್ಟು ಮಂದಿಗೆ ಕೊನೆಗಾಲದಲ್ಲಿ ಮಾನವೀಯ ಜಾತಿಯೇ ಮೇಲು ಎಂಬುದನ್ನು ಕೊಳ್ಳೇಗಾಲದ ಮುಸ್ಲಿಂ ಯುವಕರು ತೋರಿಸಿಕೊಟ್ಟಿದ್ದಾರೆ.
ಸಹಜವಾಗಿ ಮೃತಪಟ್ಟರೂ ಕೊರೋನಾದ ಸುಳ್ಳು ಸುದ್ಧಿ ಹಬ್ಬಿಸಿ ವೃದ್ಧನ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರಾಗಲೀ, ಗ್ರಾಮದವರಾಗಲೀ ಮುಂದೆ ಬಾರದಿದ್ದಾಗ ಮೃತನ ಅಣ್ಣನ ಮಗನ ಸಹಾಯಕ್ಕೆ ಪಿಎಫ್ ಐ ಸಂಘಟನೆಯ ಯುವಕರು ಬರುವ ಮೂಲಕ ಬೈಕ್ ನಲ್ಲಿಯೇ ಶವವನ್ನು ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಿ ಎಲ್ಲರ ಗಮನಸೆಳೆದಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ ಗ್ರಾಮದ ಮಾದೇವ ಎಂಬುವರು ಸಹಜವಾಗಿ ಮೃತಪಟ್ಟಿದ್ದರೂ ಕೊರೋನಾದ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಮೃತನ ಸಂಬಂಧಿಕರು, ಅಕ್ಕ ಪಕ್ಕದ ಮನೆಯವರು ಅಂತ್ಯ ಸಂಸ್ಕಾರಕ್ಕೆ ಮುಂದಾಗಲಿಲ್ಲ. ಹೀಗಾಗಿ ಮೃತನ ಅಣ್ಣನ ಮಗ ದಿಕ್ಕುತೋಚದೆ ಕುಳಿತಿದ್ದರು. ಈ ವೇಳೆ ಟಗರಪುರ ಗ್ರಾಮದ ಮುಖಂಡ ರೊಬ್ಬರು ಕೊಳ್ಳೇಗಾಲ ಪಿಎಫ್‌ಐ ಯುವಕರಿಗೆ ಕರೆ ಮಾಡುವಂತೆ ಹೇಳಿದ್ದು ಅದರಂತೆ ಕರೆ ಮಾಡಿದ ಕೂಡಲೇ ಸ್ಥಳಕ್ಕೆ ೮ ಮಂದಿ ಮುಸ್ಲಿಂ ಯುವಕರ ತಂಡ ದೌಡಾಯಿಸಿದೆ. ನಂತರ ಕಾರ್ಯೋನ್ಮುಖರಾಗಿ ಪಿಪಿಇ ಕಿಟ್ ಧರಿಸಿ ಅಂತ್ಯ ಕ್ರಿಯೆ ಮಾಡಲು ಸಜ್ಜಾಗಿ ಗ್ರಾಮಸ್ಥರಿಗೆ ಸ್ಮಶಾನಕ್ಕೆ ಶವ ಸಾಗಿಸಲು ವಾಹನಗಳ ಸೇವೆ ಒದಗಿಸಿ ಎಂದು ಕೇಳಿ ಕೊಂಡಾಗ ಯಾರು ಸಹಾಯ ಮಾಡಿಲ್ಲ. ಹೀಗಾಗಿ ಪಿಎಫ್ ಐ ಸಂಘಟನೆಯ ಕಾರ್ಯಕರ್ತರು ತಮ್ಮ ದ್ವಿಚಕ್ರ ವಾಹನದಲ್ಲಿ ಒಂದು ಏಣಿ ಸಹಾಯದಿಂದ ಶವವನ್ನು ಹೊತ್ತೊಯ್ದಿದ್ದಾರೆ. ಆದರೆ ಅಂತ್ಯ ಸಂಸ್ಕಾರಕ್ಕೆ ಗ್ರಾಮದವರು ಅವಕಾಶ ನೀಡದೆ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿದ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿ. ಅಂತ್ಯ ಸಂಸ್ಕಾರಕ್ಕೆ ಗೋಮಾಳದಲ್ಲಿ ಜಾಗ ತೋರಿಸಿದ್ದು. ಆ ನಂತರ, ಪಿ ಎಫ್ ಐ ಸಂಘಟನೆ ಯ ಯುವಕರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

By admin