ಚಾಮರಾಜನಗರ: ಅಂಬೇಡ್ಕರ್ ಅವರು ದೇಶವಿದೇಶಗಳ ಸಂವಿಧಾನಗಳ ಅಧ್ಯಯನ ಮಾಡಿದ ಪರಿಣಾಮ ಭಾರತಕ್ಕೆ ಒಂದು ಉತ್ತಮಸಂವಿಧಾನ ರಚನೆಯಾಗಲು ಸಾಧ್ಯವಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ತಿಳಿಸಿದರು.
ನಗರದ ರೋಟರಿಭವನದಲ್ಲಿ ಅಖಿಲ ಕನ್ನಡಮಹಾಸಭೆ ಹಾಗೂ ರೋಟರಿಸಂಸ್ಥೆ ಸಹಯೋಗದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬುಜಗಜೀವನ್ ರಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಮೂಲಕ ಸರ್ವರು ಸಮಾನರು ಎಂದು ಭೋದಿಸಿದ ಅಂಬೇಡ್ಕರ್, ದೇಶದ ಆಹಾರಭದ್ರತೆಗೆ ಒತ್ತು ನೀಡಿದ ಬಾಬೂಜಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕೇಂದ್ರಪರಿಹಾರಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಜಿಲ್ಲೆಯ ಕನ್ನಡಪರ ಸಂಘಟನೆಗಳು ಜಿಲ್ಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ.
ಕಳೆದ ೨೦ ವರ್ಷಗಳ ಹಿಂದೆ ಡಾ.ರಾಜ್‌ಕುಮಾರ್ ಅವರ ಅಪಹರಣದ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ನೀಡಿದ ಬೆಂಬಲ ಸದಾಹಸಿರಾಗಿದೆ. ಅಂಬೇಡ್ಕರ್ ಮತ್ತು ಬಾಬೂಜಿ ಅವರ ಸಮಾಜಮುಖಿ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದರು.
ದಲಿತಮಹಾಸಭೆ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅನೇಕ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಎತ್ತರಕ್ಕೆ ಬೆಳೆದರು, ಅವರ ೪ ಮಕ್ಕಳು ಮರಣಹೊಂದಿದಾಗಲೂ, ಸ್ವಲ್ಪವು ಧೃತಿಗೆಡಲಿಲ್ಲ. ಜನರ ಕಲ್ಯಾಣವೇ ಅವರ ಗುರಿಯಾಗಿತ್ತು ಎಂದರು.
ಅಖಿಲ ಕರ್ನಾಟಕ ಕನ್ನಡಮಹಾಸಭೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಾಟಾಳ್ ಸೂರ್ಯ ಸಿಂಹಾಸನಾಮಠದ ಸಿದ್ದಲಿಂಗಶಿವಾಚಾರ್ಯಸ್ವಾಮೀಜಿ ಆಶೀರ್ವಚನ ನೀಡಿದರು.
ಬಾಬೂಜಿ ಪ್ರಶಸ್ತಿ ಪುರಸ್ಕೃತ ಆರ್.ಎಂ.ಕಾಂತರಾಜು, ಹಿಂದುಳಿದ ವರ್ಗಗಳ ಮುಖಂಡ ಜಿ.ಎಂ.ಗಾಡ್ಕರ್, ಲಯನ್ ಸಂಸ್ಥೆ ಅಧ್ಯಕ್ಷ ಪಿ.ವೃಷಬೇಂದ್ರಪ್ಪ, ದಲಿತಸಂಘಟನೆ ಮುಖಂಡ ಸಿ.ಕೆ.ರವಿಕುಮಾರ್, ನಗರಸಭೆ ಸದಸ್ಯೆ ಎಂ.ಎನ್. ಕುಮುದಾ, ಜಂಟಿಕೃಷಿನಿರ್ದೇಶಕಿ ಎಚ್.ಟಿ.ಚಂದ್ರಕಲಾ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ಶ್ರೀನಿವಾಸನ್, ಪ್ರಗತಿಪರಸಂಘಟನೆಗಳ ಮುಖಂಡರಾದ ಅರಕಲವಾಡಿನಾಗೇಂದ್ರ, ಸಿ.ಎಂ.ಕೃಷ್ಣಮೂರ್ತಿ, ಅಖಿಲ ಕರ್ನಾಟಕ ಕನ್ನಡಮಹಾಸಭೆ ಗೌರವಾಧ್ಯಕ್ಷ ಶಾ.ಮುರಳಿ, ಸಹಕಾರ್ಯದರ್ಶಿ ಪಣ್ಯದಹುಂಡಿರಾಜು, ನಗರಸಭೆ ಸದಸ್ಯೆ ಕಲಾವತಿ, ನಿಜಧ್ವನಿಗೋವಿಂದರಾಜು, ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಅರುಣ್ ಕುಮಾರ್, ಸಾಗರ್ ರಾವತ್, ದಲಿತಸಂಘಟನೆಗಳ ಮುಖಂಡರಾದ ಕೆ.ಎಂ.ನಾಗರಾಜು, ಸಿ.ಎಂ.ಶಿವಣ್ಣ, ಹಾಜರಿದ್ದರು.