ಗೆಳೆಯನೆಂದರೆ ಪ್ರಾಣ
ಗೆಳೆತನವೆಂದರೆ ಪಂಚಪ್ರಾಣ
ಇದ್ದರೆ ಇರಬೇಕು ಮಿತ್ರರು
ಇದ್ದಂತೆ ದುರ್ಯೋಧನ-ಕರ್ಣ
ಬದುಕಿದರೆ ಬದುಕಬೇಕು ಮಿತ್ರರು
ಬದುಕಿದ್ದಂತೆ ರಾಧೇಯ-ಸುಯೋಧನ
ಆ(ಬಾ)ಳಿದರೆ ಆ(ಬಾ)ಳಬೇಕು ಜೀವಗಳು
ಆ(ಬಾ)ಳಿದಂತೆ ಕುರುಕುಲತಿಲಕ-ಕುಂತೀಪುತ್ರ
ಹೋರಾಡಿದರೆ ಹೋರಾಡಬೇಕು ತನುಮನಗಳು
ಹೋರಾಡಿದಂತೆ ರಣಧೀರ-ದಾನಶೂರ
ಸತ್ತರೆ ಸಾಯಬೇಕು ಮಿತ್ರರಿಬ್ಬರು
ಸತ್ತಂತೆ ಧೃತರಾಷ್ಟ್ರಸುತಜೇಷ್ಠ-ಸೂತಪುತ್ರಶ್ರೇಷ್ಠ
ಸ್ನೇಹವೇ ಪ್ರಾಣ
ಸ್ನೇಹಿತನೇ ಪಂಚಪ್ರಾಣ
ತನಗಾಗಿ ಮಾತ್ರ ದುಡಿಯುವುದು ಶ್ರಮ ಸ್ವಾರ್ಥ
ದೋಸ್ತಿಗೂ ದುಡಿಯುವುದು ಪರಿಶ್ರಮ ನಿಸ್ವಾರ್ಥ
ತಾನುಮಾತ್ರ ತಿಂದುಣ್ಣುವುದು ದುಂದುವೆಚ್ಚ ವ್ಯರ್ಥ
ದೋಸ್ತಿಗೂ ತಿನ್ನಿಸಿಮನ್ನಿಸುವುದು ಬಂಧುಖರ್ಚು ಅರ್ಥ
ತನಗಾಗಿಯೇ ಪೂರ್ಣ ಬಾಳುವುದು ದುರ್ಬುದ್ಧಿ
ದೋಸ್ತಿಗಾಗಿಯೂ ಸಹ ಬಾಳುವುದು ಸುಬುದ್ಧಿ
ತಾನುಮಾತ್ರ ಮನೆ-ಮಡದಿ-ಬಂಗಾರ ಗಳಿಸೋದು ಭೋಗ
ದೋಸ್ತಿಯೂ ಗಳಿಸಲು ಸಹಾಯ ಮಾಡುವುದೆ ತ್ಯಾಗ
ತನಗಾಗಿ ಮಾತ್ರ ಬದುಕಿ-ಸಾಯುವುದು ಪಾಪ-ಕರ್ಮ
ದೋಸ್ತಿಗಾಗಿಯೂ ಬದುಕಿ-ಸಾಯುವುದು ಪುಣ್ಯ-ಧರ್ಮ
