ಚಾಮರಾಜನಗರ: ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಹಾಗೂ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮಗಳಿಗೆ ಅವಶ್ಯಕವಾಗಿರುವ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸ್ವಾತಂತ್ರೊತ್ಸವ ಅಮೃತ ಮಹೋತ್ಸವ ಹಾಗೂ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮಗಳ ಆಯೋಜನೆ ಸಂಬಂಧ ನಡೆದ ಪೂರ್ವ ಸಿದ್ದತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳಿಗೆ ಈ ಹಿಂದೆಯೇ ಸಭೆ ನಡೆಸಿ ನೀಡಲಾಗಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಥ ಸಂಚಲನ, ಮಕ್ಕಳ ದೇಶಭಕ್ತಿ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶಿಷ್ಟವಾಗಿ ಮೂಡಿಬರಲು ಅಚ್ಚುಕಟ್ಟಾಗಿ ತಾಲೀಮು ನಡೆಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ಮನೆ ಮನೆ, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿ ಕಟ್ಟಡಗಳು, ವಾಣಿಜ್ಯ, ವಿದ್ಯಾಸಂಸ್ಥೆಗಳು ಸೇರಿದಂತೆ ವಿವಿಧೆಡೆ ಆಗಸ್ಟ್ ೧೩ ರಿಂದ ೧೫ರವರೆಗೆ ಧ್ವಜ ಹಾರಿಸುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳು ತೊಡಗಬೇಕು ಎಂದರು.
ಜಿಲ್ಲೆಗೆ ೨೫ ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ದಿನಾಂಕ ನಿಗದಿಯಾಗಲಿದೆ. ಇದಕ್ಕಾಗಿ ವೈವಿದ್ಯಮಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಶಾಲಾ ವಿದ್ಯಾರ್ಥಿಗಳಿಂದ ಜಾಥಾ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಕಾರ್ಯಕ್ರಮಗಳನ್ನು ಆರಂಭಿಸಬೇಕು. ಜಿಲ್ಲೆಯ ರಜತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಪ್ರತೀ ಇಲಾಖೆಗಳು ಯೋಜನೆ, ಕಾರ್ಯಕ್ರಮಗಳ ಮಾಹಿತಿ ನೀಡುವ ನಿಟ್ಟಿನಲ್ಲಿ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಾಗಮಲ್ಲೇಶ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ತಹಶೀಲ್ದಾರ್ ಬಸವರಾಜು, ಮಂಜುಳಾ, ರವಿಶಂಕರ್, ಆನಂದಯ್ಯ, ಆನಂದಪ್ಪನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಕೃಷಿ ಇಲಾಖೆಯ ಉಪನಿರ್ದೇಶಕರಾದ ಮಧುಸೂದನ್, ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
