ಮೈಸೂರು: ಕರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವ ವಿಶ್ರಾಂತರ ಸ್ವರ್ಗ ತಾಣವಾದ ಮೈಸೂರಿನ ಹಿರಿಯ ನಾಗರಿಕರು ಎರಡನೇ ವ್ಯಾಕ್ಸಿನೇಷನ್ ಗೆ ತೆರಳಲು ಅನುಕೂಲವಾಗುವಾಗುವಂತೆ “ಲೆಟ್ಸ್ ಡು ಇಟ್” ಸಂಸ್ಥೆ ಮತ್ತು “ಸೇಫ್ ವೀಲ್” ಟೂರ್ಸ್ ಅಂಡ್ ಟ್ರಾವೆಲರ್ಸ್ ಉಚಿತ ಸಂಚಾರ ಆರಂಭಿಸಿದೆ.
ಲಾಕ್ ಡೌನ್ ಇರುವ ಕಾರಣ ಹಿರಿಯನಾಗರಿಕರ ನೆರವಿಗೆ ಇದೆರಡು ಸಂಸ್ಥೆ ಬಂದಿದ್ದು, ಸುಮಾರು ಹದಿನೈದು ವಾಹನಗಳನ್ನು ವ್ಯವಸ್ಥೆ ಮಾಡಿದ್ದು, ಈ ಉಚಿತ ಸೇವೆಯನ್ನು ಅರ್ಹ ಹಿರಿಯ ನಾಗರಿಕರು ಲಾಕ್ಡೌನ್ ಮುಗಿಯುವರೆಗೆ ಪಡೆದುಕೊಳ್ಳಬಹುದಾಗಿದೆ.
ಮೈಸೂರಿನ ಸರಸ್ವತಿಪುರಂ, ಕುವೆಂಪುನಗರ, ಶ್ರೀರಾಂಪುರ ಹಾಗೂ ನಗರದ ಇನ್ನೂ ಮುಖ್ಯ ಭಾಗಗಳಲ್ಲಿ ಹಿರಿಯ ನಾಗರಿಕರು ಹೆಚ್ಚಾಗಿ ವಾಸವಿದ್ದಾರೆ. ಇವರ ಮಕ್ಕಳು ಹೊರದೇಶಗಳಲ್ಲಿ ನೆಲೆಸಿರುವುದರಿಂದ ಇವರುಗಳು ಮನೆಯಿಂದ ಹೊರಬರಲಾಗದೆ ಭಯಭೀತರಾಗಿ ಮನೆಯಲ್ಲೇ ಉಳಿಯುವಂತಾಗಿದೆ. ಜೊತೆಗೆ ಲಾಕ್ಡೌನ್ ನಿಂದಾಗಿ ನಗರದಲ್ಲಿ ಯಾವುದೇ ಆಟೋ ಮತ್ತು ಟ್ಯಾಕ್ಸಿಗಳ ಸೇವೆಗೆ ಅನುವು ಮಾಡಿಕೊಡದೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ವಯಸ್ಸಾದವರು ಸ್ವಂತ ವಾಹನಗಳಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಹೋಗಬೇಕು. ಆದರೆ ದ್ವಿಚಕ್ರ ವಾಹನವನ್ನು ಓಡಿಸಲಾಗದ ಹಾಗೂ ಸಹಾಯಕ್ಕೆ ಯಾರಾದರೂ ಆಸರೆ ಬೇಕು ಎಂದು ಬಯಸುತ್ತಿರುವವರು ಈ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಈ ಸೌಲಭ್ಯ ಎರಡನೇ ಬಾರಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರಿಗೆ ಮಾತ್ರವಾಗಿದೆ.
ಸೌಲಭ್ಯ ಪಡೆಯುವವರು ಮುಂಚಿತವಾಗಿ “ಲೆಟ್ಸ್ ಡು ಇಟ್” ಮತ್ತು ಸೇಫ್ ವೀಲ್ ಟೂರ್ಸ್ ಅಂಡ್ ಟ್ರಾವೆಲರ್ಸ್ ಸಂಸ್ಥೆಗಳ ಕಚೆರಿಗಳ ಈ ಕೆಳಗಿನ ದೂರವಾಣಿ ಸಂಖ್ಯೆ (0821-4001100)ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು. ಅನುಕ್ರಮವಾಗಿ ನೋಂದಣಿದಾರರ ಮನೆಗೆ ಖುದ್ದಾಗಿ ಹೋಗಿ ಟ್ಯಾಕ್ಸಿಯಲ್ಲಿ ಕರೆತರುವುದು ಹಾಗೂ ವ್ಯಾಕ್ಸಿನೇಷನ್ ಹಾಕಿಸಿ ಸುರಕ್ಷಿತವಾಗಿ ಅವರ ಮನೆಗೆ ಪುನಃ ಕರೆದುಕೊಂಡು ಹೋಗಿ ಬಿಡುವ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.
ಈ ಬಗ್ಗೆ ಸಂಸ್ಥೆಯ ಸದಸ್ಯ ಬಿ.ಎಸ್. ಪ್ರಶಾಂತ್ ಮಾತನಾಡಿ ಮೈಸೂರಿನ ಹಿರಿಯ ನಾಗರಿಕರಿಗೆ ಧರ್ಯ ಮತ್ತು ಕರೋನಾದ ಬಗ್ಗೆ ಜಾಗೃತಿ ಮೂಡಿಸಿ ವ್ಯಾಕ್ಸಿನೇಷನ್ ಕೊಡಿಸುವುದಾಗಿ ಈ ಬಗ್ಗೆ ಮೈಸೂರಿನ ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದೇವೆ. ಈ ಕೆಲಸವು ಎರಡು ಸಂಘಟನೆಗಳ ಪರಿಶ್ರಮದಿಂದ ಆಗುತ್ತಿದೆ. ಮುಂದಿನ ದಸರಾ ಹಬ್ಬದ ಸಮಯಕ್ಕೆ ಮಾಸ್ಕ್ ಮುಕ್ತ ಮೈಸೂರನ್ನಾಗಿ ಮಾಡುವ ಜೊತೆಗೆ ನಗರದ ಅಧಿ ದೇವತೆ ಚಾಮುಂಡೇಶ್ವರಿಯ ಪೂಜೆಯನ್ನು ಸಂಭ್ರಮದಿಂದ ಆಚರಣೆ ಮಾಡಬೇಕೆಂಬ ಬಹುದೊಡ್ಡ ಆಸೆಯೊಂದಿಗೆ ಈ ಕೆಲಸವನ್ನು ಮಾಡುತ್ತಿದ್ದೇವೆ ಹಾಗಾಗಿ ನಗರದ ಜನತೆ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು.
ಈ ರೀತಿಯ ಸಾಮಾಜಿಕ ಕಾರ್ಯಗಳು ಹೆಚ್ಚೆಚ್ಚು ಸರ್ಕಾರ ಮತ್ತು ಖಾಸಗಿ ಸಂಘಟನೆಗಳು ಒಗ್ಗೂಡಿ ನಮ್ಮ ಮೈಸೂರಿನಲ್ಲೇ ಮಾತ್ರ ಅಲ್ಲ ಇಡೀ ಭಾರತ ದೇಶದಿಂದಲೇ ಕರೋನಾ ವೈರಸ್ ಎಂಬ ಮಹಾಮಾರಿಯನ್ನು ಬಡಿದೋಡಿಸಲು ಉತ್ತಮ ರೀತಿಯಲ್ಲಿ ಯೋಜಿತರಾಗಬೇಕು ಹಾಗೂ ಕಾರ್ಯೋನ್ಮುಖರಾಗಬೇಕ. ತಾಯಿ ಚಾಮುಂಡೇಶ್ವರಿ ಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಇಡೀ ದೇಶವೇ ಆದಷ್ಟು ಬೇಗ ಕರೋನಾ ಮುಕ್ತ ದೇಶವಾಗಲಿ ಪ್ರಾರ್ಥಿಸಿದರು.