ಕೆಚ್ಚೆದೆಯ ಯುವಕರಿಗೆ ಸ್ಫೂರ್ತಿ ತುಂಬುತ್ತಾರೆ ಯೋಧ ರವಿ..!

ಮೈಸೂರಿನ ಹೆಮ್ಮೆಯ ಯೋಧ ರವಿ, ಸೇನೆಗೆ ಸೇರಬಯಸುವ ಅಭ್ಯರ್ಥಿಗಳಿಗೆ ಉಚಿತವಾಗಿ ಸೈನಿಕ ತರಬೇತಿ ನೀಡುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಬೇಕೆಂಬ ಹಂಬಲ ಹೊಂದಿರುವ ರವಿ, ಸೇನೆಗೆ ಸೇರಬೇಕೆಂಬ ಆಸೆಯಿದ್ದರೂ ಕನಸು ಕೈಗೂಡದೆ ಪರಿತಪಿಸುತ್ತಿರುವ ಯುವಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ಮೈಸೂರಿನಲ್ಲೇ ಉಚಿತ ತರಬೇತಿ ನೀಡುವ ಜೊತೆಯಲ್ಲೇ, ಸೇನೆಗೆ ಸೇರಲು ಬೇಕಾದ ಅರ್ಹತೆಗಳೇನು? ಯಾವ ರೀತಿಯ ದೈಹಿಕ, ಶೈಕ್ಷಣಿಕ ತರಬೇತಿ ಅವಶ್ಯಕ ಎಂಬುದನ್ನು ನಿಮಗೆ ವಿವರಿಸುತ್ತಾರೆ. ರವಿ ಅವರ ಈ ಸಮಾಜಮುಖಿ ಕಾರ್ಯದ ವಿವರ ಇಲ್ಲಿದೆ ನೋಡಿ.
ನಿಮಗೆ ಸೈನ್ಯ ಸೇರಬೇಕೆಂಬ ಆಸೆ ಇದೆಯೇ? ದೇಶ ಸೇವೆ ಮಾಡಬೇಕೆಂಬ ಹಂಬಲವಿದೆಯೇ? ಸೈನಿಕನ ದಿರಿಸು ಧರಿಸಿ ಗಡಿಯಲ್ಲಿ ಎದೆಯುಬ್ಬಿಸಿ ನಿಲ್ಲಬೇಕೆಂಬ ಛಲವಿದೆಯೇ? ನಿಮ್ಮ ಈ ಛಲಕ್ಕೆ ಬಲ ತುಂಬಲು ಇಲ್ಲೊಬ್ಬರು ಸಿದ್ಧರಿದ್ದಾರೆ! ಅವರ ಹೆಸರು ರವಿ. ವೀರ ಯೋಧ. ಬಿಸಿರಕ್ತದ ಯುವಕರನ್ನು ಸೈನ್ಯಕ್ಕೆ ಸೇರಿಸೋದೇ ಇವರ ಮಹದಾಸೆ.

ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾಗುತ್ತಿರುವ ಯೋಧರ ಸಂಖ್ಯೆ ಕರ್ನಾಟಕದಲ್ಲಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಸೇನೆ ಸೇರುವವರ ಸಂಖ್ಯೆಯನ್ನು ವೃದ್ಧಿಸಬೇಕೆನ್ನುವುದು ರವಿಯವರ ಆಸೆ. ಜೊತೆಗೆ ದೇಶ ಸೇವೆ ಮಾಡಬೇಕೆಂಬ ಹಂಬಲವಿರುವ ಯುವಕರಿಗೆ ನೆರವಾಗಬೇಕೆಂಬ ಉದ್ದೇಶವೂ ಇದೆ. ಹೀಗಾಗಿ, ಭಾವೀ ಸೈನಿಕರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

ಸೈನ್ಯದಿಂದ ನಿವೃತ್ತಿಯಾದ ಬಳಿಕ ಮೈಸೂರಿನಲ್ಲಿ ಸೈನಿಕ ತರಬೇತಿ ಶಾಲೆಯನ್ನು ಆರಂಭಿಸಬೇಕೆಂದು ಕನಸು ಕಟ್ಟಿಕೊಂಡಿದ್ದೇನೆ ಎಂದು ಹೇಳುವ ರವಿ, ನಿವೃತ್ತಿಯ ನಂತರವೂ ದೇಶ ಸೇವೆ ಮಾಡುವ ಬಯಕೆ ಹೊಂದಿದ್ಧಾರೆ. ಸದ್ಯ ರವಿಯವರು ಅಸ್ಸಾಂನ ಭಾರತ-ಭೂತಾನ್ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೈನ್ಯಕ್ಕೆ ಸೇರುವುದೆಂದರೆ ಸುಲಭದ ಮಾತಲ್ಲ. ಅದಕ್ಕೆ ಕಠಿಣ ತರಬೇತಿ ಬಹುಮುಖ್ಯ. ಈ ನಿಟ್ಟಿನಲ್ಲಿ 2011ರಿಂದ ಸೈನ್ಯ ಶಿಬಿರದಲ್ಲಿ ತರಬೇತುದಾರನಾಗಿ 12,768 ವಿದ್ಯಾರ್ಥಿಗಳಿಗೆ ತರಬೇತಿ ಕೊಟ್ಟಿದ್ದೇನೆ ಎನ್ನುತ್ತಾರೆ ರವಿ. ತಮ್ಮ ಈ ಕಾಯಕವನ್ನು ನಿವೃತ್ತಿಯ ನಂತರವೂ ಮುಂದುವರಿಸಬೇಕೆನ್ನುವುದು ರವಿ ಜೀವನದ ಬಹುದೊಡ್ಡ ಕನಸಾಗಿದೆ.

By admin