ಚಾಮರಾಜನಗರ, ಜೂನ್. ೧೧ (ಕರ್ನಾಟಕ ವಾರ್ತೆ):- ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪ್ರಸಿದ್ದ ಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಜೂನ್ ೨೩ರಂದು ಏರ್ಪಡಿಸಲಾಗಿದ್ದು, ಈ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ ಹಾಗೂ ವರನಿಗೆ ಪಂಚೆ, ಶರ್ಟ್, ಟವಲ್‌ನ್ನು ಪ್ರಾಧಿಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು. ಮದುವೆ ಆಗಬಯಸುವ ವರನಿಗೆ ೨೧ ವರ್ಷ, ವಧುವಿಗೆ ೧೮ ವರ್ಷ ಪೂರ್ಣಗೊಂಡಿರಬೇಕು. ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ದಾಖಲಾತಿ ಪತ್ರ ಅಥವಾ ಮೂಳೆ ತಜ್ಞರಿಂದ ಪಡೆದ ದೃಢೀಕರಣ ಪತ್ರ ಲಗತ್ತಿಸಬೇಕು. ವರ ಮತ್ತು ವಧುವಿನ ೩ ಜೋಡಿ ಭಾವಚಿತ್ರ ಲಗತ್ತಿಸಬೇಕು. ತಹಶೀಲ್ದಾರ್‌ರವರಿಂದ ಪಡೆದ ಜಾತಿ ದೃಢೀಕರಣ ಪತ್ರ ಲಗತ್ತಿಸಬೇಕು. ಬಾಲ್ಯವಿವಾಹ ಹಾಗೂ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಈ ಹಿಂದೆ ಮದುವೆ ಆಗಿರದ ಬಗ್ಗೆ ಅವರು ವಾಸಿಸುವ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಅಥವಾ ನಗರ ಸ್ಥಳೀಯ ಸಂಸ್ಥೆಯಿಂದ ರುಜುವಾತ ಪತ್ರ ಪಡೆದಿರಬೇಕು. ಆಯಾ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಮದುವೆ ನೋಂದಣಿ ಪ್ರಮಾಣ ಪತ್ರ ಪಡೆದು ಪ್ರಾಧಿಕಾರದ ಕಚೇರಿಗೆ ಒಪ್ಪಿಸಬೇಕು. ಆಧಾರ್ ಕಾರ್ಡ್ ಮತ್ತು ವಾಸಸ್ಥಳ ದೃಢೀಕರಣ ಪತ್ರ ಲಗತ್ತಿಸಬೇಕು.
ವಧು-ವರರ ಕಡೆಯವರು ತಲಾ ೧೦ ಜನಕ್ಕೆ ಮೀರದಂತೆ ಮದುವೆಯಲ್ಲಿ ಭಾಗವಹಿಸಲು ಅವಕಾಶವಿದೆ. ಶ್ರೀ ಕ್ಷೇತ್ರದ ವತಿಯಿಂದ ಇವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು.
ವಿವಾಹವಾಗಲು ಬಯಸುವ ವಧು-ವರರು ಅವರ ಹೆಸರು, ವಿಳಾಸವನ್ನು ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಶ್ರೀಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ನೀಡಿ ನಿಗದಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಿ ಜೂನ್ ೧೫ರ ಶುಕ್ರವಾರ ಸಂಜೆ ೫ ಗಂಟೆ ಒಳಗೆ ಸೂಚಿಸಲಾಗಿರುವ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಶ್ರೀಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯ ಅಥವಾ ಮೊಬೈಲ್ ಸಂಖ್ಯೆ : ೯೪೮೦೦೬೫೩೯೩, ೯೧೧೩೨೧೫೩೪೨ ಮತ್ತು ೦೮೨೨೫-೨೭೨೧೨೮ ಸಂಪರ್ಕಿಸುವಂತೆ ಶ್ರೀಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಎಸ್. ಕಾತ್ಯಾಯಿನಿದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
