ಸರಗೂರು: ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದಲ್ಲಿನ ಜಮೀನೊಂದರಲ್ಲಿ ಬೆಳೆಯಲಾದ ಬಾಳೆ ತೋಟವನ್ನು ಕಾಡಾನೆಗಳು ತುಳಿದು, ಸೋಲಾರ್ ತಂತಿ ಹಾಗೂ ಪೈಪ್‌ಗಳನ್ನು ಸಂಪೂರ್ಣವಾಗಿ ನಾಶಗೊಳಿಸಿವೆ. ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಮೊಳೆಯೂರು ಅರಣ್ಯ ವಲಯ ಪ್ರದೇಶದ ಗ್ರಾಮದ ಮಹದೇವಚಾರಿ ಜಮೀನಿನಿಂದ ಭಾನುವಾರ ತಡರಾತ್ರಿ ಕಾಡಾನೆಗಳ ಹಿಂಡು ಏಕಾಏಕಿ ಚಿಕ್ಕನಾಯಕ ಎಂಬುವರ ಜಮೀನಿಗೆ ನುಗ್ಗಿ, ೧ ಎಕರೆಯಲ್ಲಿ ನಾಟಿ ಮಾಡಿದ್ದ ೧೩೦೦ ಬಾಳೆಗಿಡ ಪೈಕಿ ಸುಮಾರು ೭೦೦ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶಗೊಳಿಸಿವೆ. ಇದಲ್ಲದೆ ೧.೮೦ ಲಕ್ಷ ರೂ. ಸೋಲಾರ್ ತಂತಿ ಕಿತ್ತು ಹಾಕಿದ್ದು, ತೆಂಗಿನ ಗಿಡ ಸೇರಿದಂತೆ ನೀರಿನ ಪೈಪ್‌ಗಳನ್ನು ತುಳಿದು ಹಾಳು ಮಾಡಿವೆ, ಇದರಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತ ಚಿಕ್ಕನಾಯಕ ದೂರಿದ್ದಾರೆ.
ಕಾಡಾನೆಗಳ ದಾಳಿಗೆ ೨೦೧೯ರಲ್ಲಿಯೂ ತೆಂಗಿನ ಗಿಡ, ಶುಂಠಿ, ಬಾಳೆ ಹಾಗೂ ಸೋಲಾರ್ ತಂತಿ ಸಿಲುಕಿದ್ದು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಇಲ್ಲಿಯತನಕವೂ ಪರಿಹಾರ ಬಂದಿಲ್ಲ. ಆದರೆ, ರಾತ್ರಿ ಏಕಾಏಕಿ ಕಾಡಾನೆಗಳು ಜಮೀನಿಗೆ ನುಗ್ಗಿ ಬಾಳೆ ಗಿಡಗಳನ್ನು ಹಾಳು ಮಾಡಿವೆ. ಇದಲ್ಲದೆ ಹಲಸಿನ ಮರವನ್ನೂ ಮುರಿದು ಹಾಕ್ಕಿವೆ. ಇದರಿಂದ ತುಂಬಾ ನಷ್ಟ ಉಂಟಾಗಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಕಾಡಾನೆಗಳ ದಾಳಿ ಕುರಿತು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಘಟನಾಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲೆಂದು ಪೋನ್ ಮಾಡಿದರೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಜತೆಗೆ ರಾತ್ರಿ ಕಾವಲು ಕಾಯುವ ಅರಣ್ಯ ಸಿಬ್ಬಂದಿಗಳು ಕಾವಲು ಕಾಯದೇ ಕುಡಿದು ಒಂದೆಡೆ ಮಲಗುತ್ತಿದ್ದಾರೆ. ಹೀಗಾಗಿ ಕಾಡಾನೆಗಳು ಜಮೀನಿನತ್ತ ನುಸುಳುತ್ತಿವೆ. ಕೂಡಲೇ ಅರಣ್ಯಾಧಿಕಾರಿಗಳಾದ ಮಧು, ನಿಂಗರಾಜು ಅವರು ಸ್ಥಳಕ್ಕೆ ಭೇಟಿ ನೀಡಬೇಕು. ಇಲ್ಲವಾದಲ್ಲಿ ಅರಣ್ಯ ಕಚೇರಿ ಮುಂಭಾಗದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.