ಶ್ರೀಮತಿ ಅಶ್ವಿನಿ ರಮೇಶ್ ನಲ್ಗೆಯವರು ಬೆಂಗಳೂರಿನಲ್ಲಿ ಸುಮಿತ್ರಾಬಾಯಿ, ಕೃಷ್ಣರಾವ್ ದಂಪತಿ ಸುಪುತ್ರಿಯಾಗಿ ಜನಿಸಿದರು. ಎಂ.ಬಿ.ಎ. ಫೈನಾನ್ಸ್ ಪದವಿಯನ್ನು ಪಡೆದಿದ್ದಾರೆ. ಇವರ ಪತಿ ರಮೇಶ್ ನಲ್ಗೆಯವರು ಎಂ.ಕಾಂ. ಪದವೀಧರರಾಗಿದ್ದು, ಟಾಟಾ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನಿರ್ವಹಿಸಿದ್ದಾರೆ.

ಅಶ್ವಿನಿ ರಮೇಶ್ ನಲ್ಗೆಯವರು ಬೆಂಗಳೂರಿನಲ್ಲಿ ಹೆಚ್.ಸಿ.ಬಿ.ಸಿ. ಬ್ಯಾಂಕ್‍ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ರ ದಿವಿಜ್ ನಲ್ಗೆಯವರು ಎಂ.ಟೆಕ್ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾರೆ. (ಐಟಿಐ ದೆಹಲಿಯಲ್ಲಿ) ಇವರ ಕಿರಿಯ ಪುತ್ರ ಧೀರಜ್ ನಲ್ಗೆಯವರು ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.


ಅಶ್ವಿನಿ ರಮೇಶ್ ನಲ್ಗೆಯವರು ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ ಕೆಂಪ್ಯನಹಟ್ಟಿಯಲ್ಲಿ ಸದ್ಯದಲ್ಲಿ ವಾಸವಾಗಿದ್ದಾರೆ. ಚಿಕ್ಕಂದಿನಲ್ಲಿ ಅಜ್ಜಿ, ತಾತ ಅವರ ಪ್ರೀತಿ-ವಾತ್ಸಲ್ಯದ ಸವಿಯನ್ನು ಅನುಭವಿಸಿದ ಅಶ್ವಿನಿಯವರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ, ವಿವಾಹವಾಗಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಗಾಗ ತಮ್ಮ ಹುಟ್ಟೂರು ಕೆಂಪ್ಯನಹಟ್ಟಿಗೂ ಭೇಟಿ ಕೊಡುತ್ತಾರೆ.


2008ರಲ್ಲಿ ಅಶ್ವಿನಿಯವರು ತಮ್ಮ ತಾಯಿ-ತಂದೆಯ ಸಲಹೆ ಮೇರೆಗೆ 4.65 ಎಕರೆ ಜಮೀನನ್ನು ಖರೀದಿಸಿದರು. 2008 ರಿಂದ 2018 ರವರೆಗೂ ವ್ಯವಸಾಯದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ಅಶ್ವಿನಿಯವರಿಗೆ ಹಲವು ಸಂಶಯಗಳಿದ್ದವು. ಕಾರಣ ಅಶ್ವಿನಿಯವರು, ಅವರ ಪತಿ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದರು. ಅಶ್ವಿನಿಯವರಿಗಾಗಲೀ, ಅವರ ಯಜಮಾನರಾದ ರಮೇಶ್‍ರವರಿಗಾಗಲೀ ವ್ಯವಸಾಯ ಮಾಡಿ ಅನುಭವವಿರಲಿಲ್ಲ. ಇವರು ಎನ್.ಜಿ.ಓ. ಆರ್ಗನೈಸಿಷನ್‍ನಲ್ಲಿ ತೊಡಗಿಸಿಕೊಂಡು ಪರಿಸರದ ಬಗ್ಗೆ ಇತರರಿಗೆ ಅರಿವು ಮೂಡಿಸುವುದು, ಮಣ್ಣಿನ ಗುಣಮಟ್ಟ, ನೀರಿನ ಸಂರಕ್ಷಣೆ, ಸಾವಯವ ಕೃಷಿ ಬಗ್ಗೆ ಕೃಷಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವಲ್ಲಿ ಸಮಗ್ರವಾಗಿ ತಮ್ಮನ್ನು ತೊಡಗಿಸಿಕೊಂಡರು.


ಈಗಾಗಲೇ ಅಶ್ವಿನಿಯವರ ಜಮೀನಿನಲ್ಲಿ ಒಂದು ಕೊಳವೆ ಬಾವಿ ಇತ್ತು. ಅದರಲ್ಲಿ ಅಷ್ಟಾಗಿ ನೀರಿರಲಿಲ್ಲ. ಆ ಕಾರಣದಿಂದಾಗಿ 2019ರಲ್ಲಿ ಮತ್ತೊಂದು ಕೊಳವೆ ಬಾವಿ ಕೊರೆಸಿದರು. ನಂತರ ಪತಿ ರಮೇಶ್ ಅವರು ಜಿ.ಕೆ.ವಿ.ಕೆ. ಸಂಸ್ಥೆಗೆ ಹೋಗಿ ಅಲ್ಲಿ ಸಾವಯವ ಕೃಷಿ ಬಗ್ಗೆ, ಹನಿ ನೀರಾವರಿ ಬಗ್ಗೆ, ಕೀಟನಾಶಕಗಳ ಬಗ್ಗೆ ತಿಳಿದುಕೊಂಡರು.


ಜುಲೈ 2019ರಂದು ಅಶ್ವಿನಿಯವರು ಎರಡು ನಾಟಿ ಹಸು ಖರೀದಿಸಿದರು. ಇದಕ್ಕೆ ಕಾರಣ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಸುವಿನ ಸಗಣಿ, ಗಂಜಲ ಇವುಗಳಿಂದ ಕೃಷಿಭೂಮಿ ಫಲವತ್ತತೆಗೊಳ್ಳಲು ಈ ನಾಟಿ ಹಸುಗಳನ್ನು ಖರೀದಿಸಿದರು.


ಹಲವಾರು ಯೂಟ್ಯೂಬ್ ವೀಡಿಯೋಗಳೂ, ರೈತರ ಬಳಿ ಸಾವಯವ ಕೃಷಿ ಬಗ್ಗೆ ಗಂಭೀರ ಚರ್ಚೆ ಮಾಡಿ, ಪ್ರಮುಖವಾಗಿ ಮಹಾರಾಷ್ಟ್ರದ ಸಾವಯವ ಕೃಷಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಸುಭಾಷ್ ಪಾಳೇಕಾರ್‍ರವರ ವೀಡಿಯೋಗಳನ್ನು ನೋಡಿ ಕೀಟನಾಶಕ, ಗೊಬ್ಬರ ತಯಾರು ಮಾಡುವ ವಿಧಾನದ ಬಗ್ಗೆ ಅವರಿಂದ ತಿಳಿದುಕೊಂಡರು.


ಅಶ್ವಿನಿಯವರ ಪತಿ ರಮೇಶ್ ನಲ್ಗೆಯವರು ಸಾವಯವ ಕೃಷಿ ಬಗ್ಗೆ ತರಬೇತಿ ಪಡೆದಿದ್ದಾರೆ.
ಅಶ್ವಿನಿಯವರು ಸಾವಯವ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ತಮ್ಮ ಕೃಷಿಭೂಮಿಯ ಚಟುವಟಿಕೆ ನೋಡಿಕೊಳ್ಳಲು ಖಾಯಂ ಆಗಿ ಒಬ್ಬ ನೌಕರನನ್ನು ನೇಮಿಸಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಳು ಹೆಚ್ಚಿದ್ದಾಗ 6 ರಿಂದ 7 ಜನ ಕಾರ್ಮಿಕರನ್ನು ಹಂಗಾಮಿಯಾಗಿ ನೇಮಿಸಿಕೊಂಡು ಕೃಷಿ ಚಟುವಟಿಕೆಗಳು ಯಶಸ್ವಿಯಾಗಿ ನಡೆಯಲು ಅಶ್ವಿನಿಯವರು ತುಂಬಾ ಶ್ರಮ ಹಾಕಿದ್ದಾರೆ.


ಅಶ್ವಿನಿಯವರ ಪತಿ ರಮೇಶ್ ನಲ್ಗೆಯವರು ಕೃಷಿ ಕ್ಷೇತ್ರಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದು, ಕೈ ತುಂಬಾ ಸಂಬಳ ಬರುತ್ತಿದ್ದ ಉದ್ಯೋಗಕ್ಕೆ ಕಳೆದ ತಿಂಗಳು ರಾಜೀನಾಮೆ ನೀಡಿ, ಈಗ ಸಂಪೂರ್ಣ ಸಮಯವನ್ನು ಸಾವಯವ ಕೃಷಿಯಲ್ಲಿ ಅನನ್ಯ ಸಾಧನೆ ಮಾಡಲು ಮೀಸಲಿರಿಸಿದ್ದಾರೆ.


ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತಬಂಧುಗಳಿಗೆ ಅಶ್ವಿನಿಯವರ ಕಿವಿಮಾತು : ಬಹುಪಾಲು ರೈತರಿಗೆ ಸಾವಯವ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ. ಅದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕನಿಷ್ಠ ಕಾಳಜಿಯೂ ಅವರಿಗಿಲ್ಲ. ಅಶ್ವಿನಿಯವರು ಯಶಸ್ವೀ ಸಾವಯವ ಕೃಷಿಕರಾಗಿದ್ದು, ಅವರು ತಮ್ಮ ಕೃಷಿ ಚಟುವಟಿಕೆಗೆ ಮಾಡುವ ಖರ್ಚು ಅತ್ಯಲ್ಪವಾಗಿದೆ. ಆದರೆ ಈಗಿನ ಬಹುಪಾಲು ರೈತರು ತಮ್ಮ ಜಮೀನಿಗೆ ಹೆಚ್ಚು ಇಳುವರಿ ಬರುತ್ತದೆಂಬ ಮೂಢನಂಬಿಕೆಯಿಂದ ಯಥೇಚ್ಛವಾಗಿ ಕ್ರಿಮಿನಾಶಕಗಳನ್ನು ಬಳಸುತ್ತಿದ್ದಾರೆ. ಕ್ವಿಂಟಾಲ್‍ಗಟ್ಟಲೆ ಕ್ರಿಮಿನಾಶಕಗಳನ್ನು ಖರೀದಿಸಲು ಅಪಾರ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡುತ್ತಿದ್ದಾರೆ.

ಈ ಯಥೇಚ್ಛ, ಕ್ರಿಮಿನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗಿ ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಈ ಬಗ್ಗೆ ಬಹುಪಾಲು ರೈತರಿಗೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಿ ಎಂದರೆ ಅವರು ಉಢಾಪೆಯಿಂದ ಉತ್ತರಿಸುತ್ತಾರೆ. ಕ್ರಿಮಿನಾಶಕಗಳ ಬಳಕೆಯ ಬಗ್ಗೆಯೇ ಹೆಚ್ಚಿನ ಒಲವು ತೋರಿಸುತ್ತಾರೆ. ತಕ್ಷಣ ರೈತರು ತಮ್ಮ ಮನೋಸ್ಥಿತಿಯನ್ನು ಬದಲಾಯಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಸಾವಯವ ಕೃಷಿ ಪದ್ಧತಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು.


ಚುನಾವಣೆ ಸಮಯದಲ್ಲಿ ಶಾಸಕರು, ಜನಪ್ರತಿನಿಧಿಗಳು ನೀಡುವ ಆಮಿಷಗಳಿಗೆ ಒಳಗಾಗಿ ತಮ್ಮ ಸಂಕಷ್ಟಗಳ ಬಗ್ಗೆ, ಕೃಷಿಕ್ಷೇತ್ರದಲ್ಲಿನ ಪ್ರಯೋಜನಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲು ಕೃಷಿಕರು ವಿಫಲರಾಗುತ್ತಿದ್ದಾರೆ.
ಸರ್ಕಾರದ ಹಲವಾರು ಉಪಯುಕ್ತ ಕೃಷಿ ಮಾಹಿತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ, ತಿಳಿದುಕೊಳ್ಳುವಲ್ಲಿ ರೈತರು ತೋರಿಸುತ್ತಿರುವ ಅಸೀಮ ನಿರ್ಲಕ್ಷ್ಯದಿಂದ ಅವರು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಲು, ಲಾಭ ಗಳಿಸಲು ವಿಫಲರಾಗುತ್ತಿದ್ದಾರೆ.
ಸಮಗ್ರ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕ್ರಿಯಾತ್ಮಕವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡದ್ದೇ ಆದಲ್ಲಿ ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯೇ ಉಂಟಾಗುವುದಿಲ್ಲ ಎಂದು ಪ್ರಗತಿಪರ ಕೃಷಿ ಮಹಿಳೆ ಅಶ್ವಿನಿ ರಮೇಶ್ ನಲ್ಗೆ ತಮ್ಮ ಸಂದೇಶದ ಮೂಲಕ ಕೃಷಿಕರನ್ನು ಎಚ್ಚರಿಸಿದ್ದಾರೆ.


ರಾಜ್ಯಮಟ್ಟದ ಜನಪರ ನಿಲುವಿನ “ವಿಜಯ ಕರ್ನಾಟಕ” ದಿನಪತ್ರಿಕೆಯ ಸೂಪರ್‍ಸ್ಟಾರ್ ರೈತ ಮಹಿಳೆ ಪ್ರಶಸ್ತಿಯನ್ನು 2021-22ರಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ವಿಕ (ವಿಜಯ ಕರ್ನಾಟಕ) ಸೂಪರ್‍ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಶಸ್ವೀ ರೈತ ಮಹಿಳೆ ಅಶ್ವಿನಿ ರಮೇಶ್ ನಲ್ಗೆಯವರಿಗೆ ನೀಡಿ ಗೌರವಿಸಲಾಯಿತು.
ಅಶ್ವಿನಿಯವರಿಗೆ ಚಾಮರಾಜನಗರ ಜಿಲ್ಲಾಮಟ್ಟದ ಕೃಷಿ ಮೇಳ ರೈತ ಪ್ರಶಸ್ತಿ ನೀಡಲು ಈಗಾಗಲೇ ಇವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ.


ಯಶಸ್ವೀ ಸಾವಯವ ಕೃಷಿಕ ಮಹಿಳೆ ಅಶ್ವಿನಿ ರಮೇಶ್ ನಲ್ಗೆಯವರು ಕೃಷಿ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡಿದ್ದೇ ಆದಲ್ಲಿ ನಿಜವಾಗಿಯೂ ಕೃಷಿ ಕ್ಷೇತ್ರ ಅಪರಿಮಿತವಾಗಿ ಲಾಭವನ್ನು ತಂದುಕೊಡಬಲ್ಲದು ಎಂದು ವಿನಮ್ರವಾಗಿ ತಿಳಿಸುತ್ತಾರೆ.


ಅಶ್ವಿನಿಯವರು ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಬಗ್ಗೆ ರೈತರಿಗೆ ಶಿಬಿರಗಳನ್ನು ಹಮ್ಮಿಕೊಂಡು ಅವರ ಮನಮುಟ್ಟುವಂತೆ ಮಾಹಿತಿ ತಿಳಿಸಿ ಅವರನ್ನು ಸಾವಯವ ಕೃಷಿಯ ಕಡೆಗೆ ಕರೆತರಲು ತಮ್ಮ ಜೀವನವನ್ನು ಮುಡುಪಾಗಿಡಲು ನಿರ್ಧರಿಸಿದ್ದಾರೆ.ಈ ಅಪರೂಪದ ದಂಪತಿಗಳು ಸಾವಯವ ಕೃಷಿಯ ಬಗ್ಗೆ ಅಪರಿಮಿತ ಸಾಧನೆ ಮಾಡಲು ಕಂಕಣಬದ್ಧರಾಗಿದ್ದು, ಆ ನಿಟ್ಟಿನಲ್ಲಿ ಯಶಸ್ವಿಯಾಗಿ ಕಾರ್ಯೋನ್ಮುಖರಾಗಲು ಹಂಬಲಿಸುತ್ತಿದ್ದಾರೆ.