ಗುಂಡ್ಲುಪೇಟೆ: ಇ-ಸ್ವತ್ತು ಕೊಡಲು ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಜನರನ್ನು ಪಿಡಿಓಗಳು ಅಲೆಸುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸಿ ತಕ್ಷಣ ಇ-ಸ್ವತ್ತು ನೀಡಲು ಕ್ರಮ ವಹಿಸುವಂತೆ ಶಾಸಕ ಸಿ.ಎಸ್.ನಿರಂಜನಕುಮಾರ್ ತಾಪಂ ಕಾರ್ಯ ನಿರ್ವಾಹಕ ಶ್ರೀಕಂಠರಾಜೇ ಅರಸು ಅವರಿಗೆ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಶಾಸಕರು, ದಾಖಲಾತಿ ಪರಿಶೀಲಿಸಿ ಕೂಡಲೇ ಇ-ಸ್ವತ್ತು ನೀಡಬೇಕು. ವಿಳಂಭ ಧೋರಣೆ ಅನುಸರಿಸಿದರೆ ಅಂತವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಖಡಕ್ಕಾಗಿ ಸೂಚಿಸಿದರು.
30 ವರ್ಷದಿಂದಲೂ ವ್ಯವಸಾಯ ಮಾಡುತ್ತಿದ್ದರೂ ಸಹ ಇನ್ನು ನಮಗೆ ಸಾಗುವಳಿ ನೀಡಿಲ್ಲ. ಈ ಬಗ್ಗೆ ಕ್ರಮ ವಹಿಸಿಸುವಂತೆ ಕಲ್ಲಿಗೌಡನಹಳ್ಳಿ ರೈತರೊಬ್ಬರು ಮನವಿ ಮಾಡಿದರು. ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರ ರೈತರಿಗೆ ಅನೇಕ ವರ್ಷದಿಂದ ಸಾಗುವಳಿ ನೀಡದ ಕಾರಣ ತೊಂದರೆ ಉಂಟಾಗಿತ್ತು. ಇದನ್ನು ಮನಗಂಡು 2 ಸಾವಿರ ಜನರಿಗೆ ಈ ಬಾರಿ ಸಾಗುವಳಿ ನೀಡಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲೆ ಈ ಪ್ರಕ್ರಿಯೆ ನಡೆಯಲಿದ್ದು, ಹಲವು ವರ್ಷದಿಂದ ಜಮೀನು ಉಳುಮೆ ಮಾಡುತ್ತಿರುವವರಿಗೆ ಇದು ನೆರವಾಗಲಿದೆ ಎಂದರು.
ಬೊಮ್ಮಲಾಪುರ ಗ್ರಾಮದ ಪಟ್ಟಲದ ರಾಣಿ ದೇವಸ್ಥಾನದ ಹಿಂಭಾಗದ ರಸ್ತೆಯನ್ನು ಕೆಲವು ಮಂದಿ ಒತ್ತುವರಿ ಮಾಡಿಕೊಂಡಿರುವ ಕಾರಣ ಜಮೀನುಗಳಿಗೆ ತೆರಳಲು ತೊಂದರೆ ಉಂಟಾಗಿದೆ. ಸರ್ವೇ ನಡೆಸಿ ರಸ್ತೆ ಬಿಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಶಾಸಕರು, ತಹಸೀಲ್ದಾರ್ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಬಿಡಿಸುವಂತೆ ಸರ್ವೇ ಅಧಿಕಾರಿ ರಮೇಶ್ ನಾಯಕ್ ಅವರಿಗೆ ಸೂಚಿಸಿದರು.
ವಾಲ್ಮೀಕಿ ನಿಗಮದಿಂದ ಲೋನ್ ಆಗಿದ್ದರೂ ಸಹ ಬ್ಯಾಂಕ್ ಅಧಿಕಾರಿಗಳು ದಾಖಲಾತಿ ನೆಪದಲ್ಲಿ ಪ್ರತಿನಿತ್ಯ ಅಲೆಸುತ್ತಿದ್ದಾರೆ ಎಂದು ಚಿಕ್ಕಾಟಿ ಗ್ರಾಮದ ಯುವಕ ಸಮಸ್ಯೆ ಬಿಚ್ಚಿಟ್ಟರು. ಭೀಮನಬೀಡು ಗ್ರಾಮದ ವಿಧವೆಯೊಬ್ಬರು ಮನೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಅಂಕಹಳ್ಳಿ ರೈತ ಬೆಳೆ ಸಾಲ ಕೊಡಿಸುವಂತೆ ಕೋರಿದರು. ಅನುದಾನ ಮಂಜೂರು ಮಾಡಿದ್ದರೂ ಸಹ ಅಂಬೇಡ್ಕರ್ ಭವನ ಪ್ರಾರಂಭವಾಗಿಲ್ಲ ಎಂದು ಬೆಳವಾಡಿ ಬೆಳ್ಳಯ್ಯ ದೂರಿದರು. ಅಕ್ರಮ-ಸಕ್ರಮದಡಿ ಸಾಗವಳು ನೀಡುವಂತೆ ಬೊಮ್ಮನಹಳ್ಳಿ ರೈತ ಮನವಿ ಮಾಡಿದರು.
ತಹಸೀಲ್ದಾರ್ ಸಿ.ಜಿ.ರವಿಶಂಕರ್, ತಾಪಂ ಇಓ ಶ್ರೀಕಂಠರಾಜೇ ಅರಸ್, ಅಕ್ಷರ ದಾಸೋಹದ ಮಂಜಣ್ಣ, ಪುರಸಭೆ ಮುಖ್ಯಾಧಿಕಾರಿ ಹೇಮಂತ್ ರಾಜ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್, ಸಿಡಿಪಿಓ ಚಲುವರಾಜು, ಹಿಂದುಳಿದ ವರ್ಗಗಳ ಇಲಾಖೆ ಸಹಾಯ ನಿರ್ದೇಶಕ ಲಿಂಗರಾಜು, ಸಿಡಿಪಿಓ ಚಲುವರಾಜು, ಸಾಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಸರ್ವೇ ಇಲಾಖೆ ಸಹಾಯ ನಿರ್ದೇಶಕ ರಮೇಶನಾಯಕ್, ಆರ್ ಐ ರವಿಕುಮಾರ್, ರಾಜಕುಮಾರ್, ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವರದಿ: ಬಸವರಾಜು ಎಸ್.ಹಂಗಳ