ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಕಾಲೋನಿಯಲ್ಲಿ ಕೊರೊನಾ ಕಾರಣದಿಂದ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಸೋಲಿಗ, ಕಾಡು ಕುರುಬ ಹಾಗೂ ಜೇನುಕುರುಬ ಜನಾಂಗದ 250 ಕುಟುಂಬಗಳಿಗೆ ಈಶ ಫೌಂಡೇಶನ್ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರಾಥಾಮಸ್ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಈಶ ಫೌಂಡೇಶನ್ ಅವರು ಸಮಾಜಮುಖಿ ಕೆಲಸ ಮಾಡುತ್ತ ಸಮಾಜದ ಕಟ್ಟಕಡೆಯ ಜನರಿಗೆ ಸಂಕಟದ ಸಮಯದಲ್ಲಿ ಆಹಾರ ಪದಾರ್ಥಗಳನ್ನು ನೀಡಿ ಅವರಿಗೆ ಜೀವನ ನಡೆಸಲು ಮುಂದಾಗುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಸಾರ್ವಜನಿಕರಿಗೆ ಕೊರೊನಾ ಸೋಂಕು ತಗುಲದಂತೆ ಮಾಡಲು ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ನೀಡುತ್ತಿದೆ. ತಾವು ಸಹ ಲಸಿಕೆ ಪಡೆದುಕೊಂಡ ನಂತರ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದು ಮೊದಲಿಗಿಂತ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ಬುಡಕಟ್ಟು ಜನಾಂಗದ ಮಹಿಳೆಯರು ಯಾವುದೇ ಪೂರ್ವಾಗ್ರಹಗಳಿಗೆ ಒಳಗಾಗದೆ ಲಸಿಕೆ ಹಾಕಿಸಿಕೊಳ್ಳುವ ಜತೆಗೆ ಪುರುಷರಿಗೂ ಹಾಕಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಈಶ ಫೌಂಡೆಶನ್‍ನ ರಾಘವೇಂದ್ರ, ತೀರ್ಥಾನಂದ, ಮಹಾಬಲ, ಅಭಿನಂದನ್, ಯೋಗಶಿಕ್ಷಕಿ ಮಣಿ, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಸರ್ಕಲ್ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್‍ಪೆಕ್ಟರ್ ರಾಜೇಂದ್ರ, ನಕ್ಸಲ್ ನಿಗ್ರಹ ಪಡೆಯ ನಾಗರಾಜು, ಬೇರಂಬಾಡಿ ಗ್ರಾಮಪಂಚಾಯಿತಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಶೀಲಾ ಇತರರು ಇದ್ದರು.