ಮೈಸೂರು: ಲಾಕ್ ಡೌನ್ ನಿಂದಾಗಿ ಸಂಬಳವಿಲ್ಲದೆ ಅನೇಕ ಮಂದಿ ಪತ್ರಕರ್ತರು ಸಂಕಷ್ಟಕ್ಕೆ ಸಿಲುಕಿದ್ದು, ಆಹಾರಕ್ಕೂ ಸಮಸ್ಯೆಯಾಗಿದ್ದು, ಇದನ್ನು ಮನಗಂಡು ಆಹಾರಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಹೇಳಿದರು.
ನಗರದ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು,ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಾಧ್ಯಮದವರಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಹೃದಯಿಗಳಾದ ಸಾಗರ್ ಅವರ ಮೂಲಕ ದಿನಸಿ ಕಿಟ್ ಗಳನ್ನು ನೀಡಿದ್ದಾರೆ ಎಂದರು.
ಕೊರೊನಾ ವಿಶ್ವದೆಲ್ಲೆಡೆ ಆವರಿಸಿದೆ. ಲಕ್ಷಾಂತರ ಮಂದಿಯ ಜೀವ ತೆಗೆದುಕೊಂಡಿದೆ. ಹಲವರ ಬದುಕನ್ನು ಕಿತ್ತುಕೊಂಡಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಫ್ರಂಟ್ ಲೈನ್ ವರ್ಕರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾದಿಂದ ರಾಜ್ಯದಲ್ಲಿ ಅನೇಕ ಮಂದಿ ಪತ್ರಕರ್ತರು ಸಾವನ್ನಪ್ಪಿದ್ದಾರೆ. ನಮ್ಮ ಪತ್ರಕರ್ತರ ಸುರಕ್ಷತೆಯ ದೃಷ್ಟಿಯಿಂದ ಪತ್ರಕರ್ತರ ಸಂಘ ಅನೇಕ ಸಂಘ-ಸಂಸ್ಥೆಗಳ ನೆರವಿನಿಂದ ಆರೋಗ್ಯ ಸುರಕ್ಷಾ ಪರಿಕರಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಮುಂದಿನ ದಿನಗಳಲ್ಲೂ ಸಂಘವು ಪತ್ರಕರ್ತರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದು, ಎಲ್ಲರೂ ಆರೋಗ್ಯ ಸುರಕ್ಷತೆಯನ್ನು ಕಾಪಾಡಿಕೊಂಡು ಕೆಲಸ ಮಾಡುವಂತೆ ಇದೇ ಸಂದರ್ಭ ಹೇಳಿದರು.
ಪತ್ರಕರ್ತರ ಸಂಘದ ನಗರ ಉಪಾಧ್ಯಕ್ಷ ಎಂ.ಎಸ್.ಬಸವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ಪಿ.ರಂಗಸ್ವಾಮಿ ಸೇರಿದಂತೆ ಪತ್ರಕರ್ತರು ಇದ್ದರು.