– ಕಾಡಂಚಿನ ಹೊಸಪುರ ಗ್ರಾಮಕ್ಕೆ ಶಾಸಕ ನಿರಂಜನಕುಮಾರ್ ಭೇಟಿ: ಪರಿಶೀಲನೆ
ಗುಂಡ್ಲುಪೇಟೆ: ಕಾಡಾನೆ ಹಾವಳಿಗೆ ನೀಡುವ ಅಲ್ಪ ಮೊತ್ತದ ಪರಿಹಾರ ನಮಗೆ ಬೇಕಿಲ್ಲ. ಬದಲಾಗಿ ರೈಲ್ವೆ ಬ್ಯಾರಿಕೇಡ್ ಹಾಕಿಸುವ ಮೂಲಕ ಸಮಸ್ಯೆಗೆ ಶಾಸ್ವತ ಪರಿಹಾರ ಕೊಡಿಸಿ ಎಂದು ಹೊಸಪುರ ಗ್ರಾಮದ ರೈತರಾದ ಶಿವಣ್ಣೇಗೌಡ, ರಾಜಪ್ಪ, ಮಹೇಶ್ ಇತರರು ಶಾಸಕ ಸಿ.ಎಸ್. ನಿರಂಜನ ಕುಮಾರ್ ಅವರಲ್ಲಿ ಒತ್ತಾಯಿಸಿದರು.
ತಾಲ್ಲೂಕಿನ ಹೊಸಪುರ ಗ್ರಾಮದಲ್ಲಿ ಬಾಳೆ ಬೆಳೆ ನಾಶವಾಗಿದ್ದ ಮಹೇಶ್ ರ ಜಮೀನು, ರಾಗಿ ತೆನೆ ದಾಸ್ತಾನು ಮಾಡಿದ್ದ ಕಾರಣ ತೋಟದ ಮನೆಯನ್ನು ಜಖಂಗೊಳಿಸಿದ್ದ ಮಹದೇವಪ್ಪಚಾರಿ ಅವರ ಜಮೀನುಗಳಿಗೆ ಶಾಸಕ ನಿರಂಜನ ಕುಮಾರ್ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ವೇಳೆ ರೈತರು ಅಳಲು ತೋಡಿಕೊಂಡರು.
ಸಾವಿರಾರು ರೂ. ಖರ್ಚು ಬಾಳೆ ಬೆಳೆ ಈಗ ಅದು ಕಾಡಾನೆಗಳ ದಾಳಿಗೆ ಸಿಲುಕಿದೆ. ಹೀಗಾದರೆ ಬ್ಯಾಂಕ್ ನಿಂದ ಪಡೆದ ಸಾಲ ಕಟ್ಟುವುದು, ಜೀವನ ನಡೆಸುವುದು ಹೇಗೆ ಎಂಬುದು ತಿಳಿಯದಾಗಿದೆ ಎಂದು ಹಲವು ಮಂದಿ ರೈತರು ಸಮಸ್ಯೆಗಳನ್ನು ಶಾಸಕರ ಮುಂದೆ ಬಿಚ್ಚಿಟ್ಟರು.
ಸಮಸ್ಯೆ ಆಲಿಸಿ ಮಾತನಾಡಿದ ಶಾಸಕ ನಿರಂಜನಕುಮಾರ್, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿಸಲಾಗುವುದು. ಕಾಡಾನೆ ಹಾವಳಿಗೆ ಶಾಸ್ವತ ಪರಿಹಾರ ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ಕಾರಣ ಕಳೆದ ವರ್ಷ ಆನೆ 24 ಕಿ.ಮೀ ಉದ್ದದ ಆನೆ ತಡೆ ಕಂದಕ ನಿರ್ಮಾಣ ಮಾಡಿಸಲಾಗಿದೆ. ಇದರಿಂದ ಕಾಡಾನೆ ಹಾವಳಿ ಮೊದಲಿಗಿಂತ ಸಾಕಷ್ಟು ಕಡಿಮೆ ಆಗಿದೆ. ಸದ್ಯ ಕಾಡಾನೆ ಹೊರ ಬರದಂತೆ ಕಾಯಲು ಹೆಚ್ಚಿನ ನೌಕರರ ನಿಯೋಜನೆ ಆಗಿದೆ. ಇವರು ವಿಶೇಷ ಗಮನ ಕೊಟ್ಟು ಕಾವಲು ಕಾಯಬೇಕು ಎಂದು ಸಲಹೆ ನೀಡಿದರು.
ಬೆಳೆ ಹಾನಿಗೆ ಸಂಬಂಧ ಎಲ್ಲಾ ಅರ್ಜಿಗಳು ವಿಲೇವಾರಿ ಆಗಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆ ಹಾವಳಿ ತಡೆಯುವ ನಿಟ್ಟಿನಲ್ಲಿ ಈ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಮಾಡಿಸಲು ಅರಣ್ಯ ಮಂತ್ರಿ ಒಪ್ಪಿದ್ದಾರೆ ಎಂದು ತಿಳಿಸಿದರು.
ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ಮಾತನಾಡಿ, ಕಾಡಾನೆ ಓಡಾಟಕ್ಕೆ ಮಿತಿ ಇಲ್ಲ. ಈಗಾಗಿ 24 ಕಿ.ಮೀ ಟ್ರಂಚ್, ಮಳೆ ನೀರು ಹಳ್ಳಗಳಲ್ಲಿ ತಡೆಗೋಡೆ, ಅಲ್ಲಲ್ಲಿ ತಾತ್ಕಾಲಿಕ ಸೋಲಾರ್ ವಿದ್ಯುತ್ ಬೇಲಿ ನಿರ್ಮಿಸಲಾಗಿದೆ. ಆದರೂ 16 ಸಲಗಗಳು ಗುಂಪು ಮಾಡಿಕೊಂಡಿರುವ ಕಾರಣ ನಿತ್ಯ ಸಂಜೆಯಾಗುತ್ತಿದ್ದಂತೆ ಕಾಡಿನಿಂದ ಹೊರ ಬರುವ ಪ್ರಯತ್ನ ಮಾಡುತ್ತಲೇ ಇವೆ ಎಂದರು.
ಸಮಸ್ಯೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಹೊಸಪುರ ಗ್ರಾಮ ವ್ಯಾಪ್ತಿಯಲ್ಲಿ 10 ಕಿ.ಮೀ ಉದ್ದಕ್ಕೆ ಸೋಲಾರ್ ಫೆನ್ಸ್ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಎಸಿಎಫ್ ಕೆ.ಪರಮೇಶ್, ಆರ್ ಎಫ್‍ಒ ನಾಗೇಂದ್ರನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್, ಪ್ರಧಾನ ಕಾರ್ಯದರ್ಶಿ ರಾಘವಾಪುರದೇವಯ್ಯ, ಸಾಗುವಳಿ ಸಕ್ರಮ ಸಮಿತಿ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ.ಮಹೇಶ್, ತಾ.ಪಂ ಸದಸ್ಯ ಕೆ.ಪ್ರಭಾಕರ, ಮುಖಂಡರಾದ ಕಮರಹಳ್ಳಿ ರವಿ, ಹೊರೆಯಾಲ ಕೃಷ್ಣ, ಜಯರಾಜು, ಕೆ.ಪಿ.ಶಿವರಾಜು, ಅರೇಪುರ ಮಹದೇವಕುಮಾರ್ ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ