ಗುಂಡ್ಲುಪೇಟೆ: ಗುಂಡ್ಲುಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಎಂ. ಮಹದೇವಸ್ವಾಮಿ ಅವರು ವರ್ಗಾವಣೆಯಾದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ವರ್ಗದವರ ವತಿಯಿಂದ ಪಟ್ಟಣದ ಹೊರ ವಲಯದ ಖಾಸಗೀ ರೆಸಾರ್ಟ್‍ನಲ್ಲಿ ಸಮಾರಂಭ ಏರ್ಪಡಿಸಿ ಬೀಳ್ಕೊಡುಗೆ ನೀಡಲಾಯಿತು.

ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಮಹದೇವಸ್ವಾಮಿ, ಗುಂಡ್ಲುಪೇಟೆಯಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸಿರುವುದು ತೃಪ್ತಿ ತಂದಿದೆ. ಇದಕ್ಕೆ ತಾಲ್ಲೂಕಿನ ಸಾರ್ವಜನಿಕರು, ವಿವಿಧ ಪ್ರಗತಿಪರ ಸಂಘಟನೆ ಸಹಕಾರವೇ ಕಾರಣ. ತಾಲ್ಲೂಕಿನ ಜನತೆ ಶಾಂತಿ ಪ್ರಿಯರಾಗಿದ್ದು, ಕಾನೂನು ಪ್ರಕಾರ ನಡೆದುಕೊಳ್ಳಲು ಎಲ್ಲಾ ಸಮಯದಲ್ಲಿಯೂ ಸಹಕಾರ ನೀಡಿದ್ದಾರೆ ಎಂದರು.

ಗುಂಡ್ಲುಪೇಟೆ ಪಟ್ಟಣ, ಬೇಗೂರು, ತೆರಕಣಾಂಬಿ ಠಾಣಾ ಪೊಲೀಸ್ ಸಿಬ್ಬಂದಿ ವರ್ಗದವರು ಉತ್ತಮ ಕೆಲಸ ನಿರ್ವಹಣೆ ಮಾಡಿದ ಹಿನ್ನೆಲೆಯಲ್ಲಿ ಅವರ ಸಹಕಾರದಿಂದ ತಾಲ್ಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಯಿತು. ಕೊರೊನಾ, ಗ್ರಾಮ ಪಂಚಾಯಿತಿ ಚುನಾವಣೆ ವೇಳೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ಸಹಕಾರವನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.

ಡಿವೈಎಸ್ಪಿ ಪ್ರಿಯದರ್ಶಿನಿ ಶಾಣಿಕೊಪ್ಪ ಮಾತನಾಡಿ, ಕಡಿಮೆ ಅವಧಿಯಲ್ಲಿ ಮಹದೇವಸ್ವಾಮಿ ಅವರು ಸೇವೆ ಸಲ್ಲಿಸಿದರೂ ಸಹ ಹೆಚ್ಚಿನ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಇದು ಅವರ ವ್ಯಕ್ತಿತ್ವ ಮತ್ತು ಆಡಳಿತ ವೈಖರಿಯನ್ನು ಎತ್ತಿ ತೋರಿಸುತ್ತದೆ ಎಂದು ಶ್ಲಾಘಿಸಿದರು.

ಸಬ್ ಇನ್ಸ್‍ಪೆಕ್ಟರ್ ಜೆ. ರಾಜೇಂದ್ರ ಮಾತನಾಡಿ, ತಾಲ್ಲೂಕಿಗೆ ಬಂದು ನಾನು ನಾಲ್ಕು ತಿಂಗಳು ಕಳೆದಿದ್ದು, ಮಹದೇವಸ್ವಾಮಿ ಅವರು ತಮಗೆ ಅಣ್ಣನಂತೆ ಬೆನ್ನೆಲುಬಾಗಿ ನಿಂತು ಎಲ್ಲಾ ಸಂದರ್ಭದಲ್ಲಿಯೂ ಮಾರ್ಗದರ್ಶನ ನೀಡಿದ್ದಾರೆ. ಅದರಿಂದಲೇ ನಾವು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದರು.

ಈ ಸಂದರ್ಭದಲ್ಲಿ ನೂತನವಾಗಿ ಗುಂಡ್ಲುಪೇಟೆಗೆ ಸರ್ಕಲ್ ಇನ್ಸ್‍ಪೆಕ್ಟರ್ ನೇಮಕಗೊಂಡ ಎಂ. ಲಕ್ಷ್ಮಿಕಾಂತ್ ಅವರಿಗೆ ಸ್ವಾಗತ ಕೋರಲಾಯಿತು.

ಸಮಾರಂಭದಲ್ಲಿ ಬೇಗೂರು ಠಾಣೆ ಸಬ್ ಇನ್ಸ್‍ಪೆಕ್ಟರ್ ಕೃಷ್ಣಕಾಂತ್, ತೆರಕಣಾಂಬಿ ಠಾಣೆ ಸಬ್ ಇನ್ಸ್‍ಪೆಕ್ಟರ್ ರಾಧಾ, ಎಎಸ್‍ಐ ಶಿವಶಂಕರಪ್ಪ, ನಟರಾಜು, ನಾಗರಾಜು, ಪೇದೆಗಳಾದ ಶಿವನಂಜಪ್ಪ, ಪ್ರಭುಸ್ವಾಮಿ ಸೇರಿದಂತೆ ಪೋಲೀಸ್ ಸಿಬ್ಬಂದಿ ವರ್ಗದವರು, ವಿವಿಧ ಸಂಘಟನೆ ಮುಖಂಡರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin