ಅಕ್ಕಮಹಾದೇವಿ ಒಬ್ಬರು ಆದರ್ಶ ಮಹಿಳೆ. ಹೆಣ್ಣು ಯಾರಿಗೂ ಕಡಿಮೆ ಇಲ್ಲವೆಂಬುದನ್ನು ಆ ಕಾಲದಲ್ಲಿಯೇ ತೋರಿಸಿಕೊಟ್ಟವರು. ತಮ್ಮ ವಚನಗಳ ಮೂಲಕವೇ ಸಮಾಜದ ಅಂಕು-ಡೊಂಕುಗಳನ್ನು ತೋರಿಸಿಕೊಟ್ಟವರು, ಆ ಮೂಲಕ ತಪ್ಪುಗಳನ್ನು ತಿದ್ದುವ ಪ್ರಯತ್ನವನ್ನು ಮಾಡಿದವರು. ಒಂದು ರೀತಿಯಲ್ಲಿ ಇವರನ್ನು ಕನ್ನಡದ ಬಂಡಾಯ ಕವಯತ್ರಿ ಅಂತಲೂ ಕರೆಯುತ್ತಾರೆ.
ಅಕ್ಕಮಹಾದೇವಿ ಒಬ್ಬರು ಸ್ವಾಭಿಮಾನದ ಪ್ರತೀಕವಾಗಿದ್ದವರು. ಸಮಾನತೆ ಬಗ್ಗೆ ಧ್ವನಿಯೆತ್ತಿದವರಾಗಿದ್ದು, ಮಹಿಳಾ ಚಳವಳಿಯನ್ನು ಹುಟ್ಟುಹಾಕಿದವರು. ಮಹಿಳೆ ಎಂದರೆ ಆಕೆ ಅಬಲೆಯಲ್ಲ, ಸಬಲೆ. ಕೇವಲ ಅಡುಗೆ ಮನೆಗಷ್ಟೇ ಆಕೆ ಸೀಮಿತವಲ್ಲ. ಎಲ್ಲ ರಂಗಗಳಲ್ಲೂ ಯಾವ ಪುರುಷನಿಗೂ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುವ ಶಕ್ತಿಯುಳ್ಳವಳು ಎಂಬುದನ್ನು ಜಗತ್ತಿಗೆ ಸಾರಿ ಹೇಳಿದವರು ಅವರು.
ಭಗವಂತ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದು ನಂಬಿದ್ದ ಅಕ್ಕಮಹಾದೇವಿಗೆ ಇಷ್ಟವಿಲ್ಲದಿದ್ದರೂ ಬಾಲ್ಯದಲ್ಲಿ ನಡೆದ ವಿವಾಹ ಕೊನೆಗೆ ಆಕೆ ತನ್ನ ಸರ್ವವನ್ನೂ ಅಂದರೆ ಒಂದೆಳೆ ಬಟ್ಟೆಯನ್ನೂ ತೊರೆದು ನಿರ್ವಸ್ತ್ರವಾಗಿ ಹೊರಟು ಜಗತ್ತಿನ ಕಣ್ಣು ತೆರೆಸಲು ಮುಂದಾಗುವ ಗಟ್ಟಿ ನಿರ್ಧಾರವಿದೆಯಲ್ಲ, ಅದು ಯಾರಿಂದಲೂ ಸಾಧ್ಯವಿಲ್ಲ. ಬಹುಶಃ ಇದಕ್ಕೆ ಅಕ್ಕಮಹಾದೇವಿಯವರಿಗೆ ಅಕ್ಕಮಹಾದೇವಿಯೇ ಸಾಟಿ ಎಂದು ಹೇಳಬಹುದು.
ಲೌಕಿಕ ಹಾಗೂ ಅಲೌಕಿಕ ಜಗತ್ತಿನ ವ್ಯತ್ಯಾಸಗಳನ್ನು ಅಕ್ಕಮಹಾದೇವಿ ತನ್ನ ವಚನಗಳ ಮೂಲಕ ತೆರೆದಿಟ್ಟಿದ್ದಾರೆ. ಅವರ ವಚನಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಇದೀಗ ಜೆ.ಪಿ.ನಗರ ಶರಣ ವೇದಿಕೆಯವರು ಅಕ್ಕಮಹಾದೇವಿಯವರ ಪ್ರತಿಮೆಯನ್ನು ಅನಾವರಣ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇಂದಿನ ಜನತೆ ಸಹಿತ ಮುಂದಿನ ಪೀಳಿಗೆಗೂ ಅಕ್ಕಮಹಾದೇವಿಯವರ ತತ್ವಾದರ್ಶಗಳು ತಲುಪಬೇಕು. ಆ ನಿಟ್ಟಿನಲ್ಲಿ ನಾವು ನೀವೆಲ್ಲರೂ ಶ್ರಮಿಸೋಣ.