ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)


ಕುವೆಂಪು ವಿಶ್ವತೆಯನ್ನು ಹೊಂದಲು ಶೋಧಿತಾರ್ಥವಾಗಿ ಕೈಗೊಂಡ ಫಲಶೃತಿಗಳೇ  ಕೃತಿಗಳಾದವು ಅವರು ವಿಶ್ವಕವಿಯಾದರು.ವಿಶ್ವಮಾನವ ಧರ್ಮ ಸ್ವೀಕರಿಸಿ ವಿಶ್ವವನ್ನು ಬೆರೆತುಕೊಂಡರು.ಪ್ರಕೃತಿಸೃಷ್ಟಿಯನ್ನು ಕುವೆಂಪು ಅವರು ತುಂಬಾ ಸೂಕ್ಷ್ಮವಾಗಿಯೇ ಅರಿತಿದ್ದಾರೆ.

ಈ ಅರಿವು ನಿಸರ್ಗದೊಂದಿಗೆ ಸದಾ ನಿಕಟ ಸಂಬಂಧವನ್ನು ಹೊಂದಿದುದರ ಫಲವೇ ಇರಬೇಕು.ಮನೋವೈಜ್ಞಾನಿಕತೆಯನ್ನು ತಮ್ಮ ಜೀವನದ ಅನುಭವಗಳಲ್ಲಿ ಸಾಕಷ್ಟು ಅನ್ವಯಗೊಳಿಸಿ ನಿಜದಾಟಿಯನ್ನು ಮನುಷ್ಯ ಲೋಕಕ್ಕೆ ಸದಾ ನೀಡುವಂತರಾದರು.ವೈಜ್ಞಾನಿಕತೆ ,ವೈಚಾರಿಕತೆ, ಮಾನವೀಯತೆ ಹಾಗೂ ವಿವಿಧ ನೈತಿಕ ಆಯಾಮಾಗಳ ಜಾಡು ಹಿಡಿದು ಹೊರಟಾಗ ಕುವೆಂಪು ಅವರು ಬೆರೆತದ್ದು ವಿಶ್ವತೆ.ಮಾನವರೆನಿಸಿದ ನಾವು ಸದಾ ನಮ್ಮೊಂದಿಗೆ ಇರುವವರ ನಡುವೆ ಅಂತರ ಮತ್ತು ಭಿನ್ನತೆಯನ್ನು ಸೂಚಿಸಿಕೊಂಡು ಅಥವಾ ಗುರುತಿಸಿಕೊಂಡು; ಪ್ರತ್ಯೇಕತೆಯನ್ನು ಬಯಸಿ ಶ್ರೇಷ್ಠ ಮತ್ತು ಕನಿಷ್ಠಗಳ ಅಶಾಶ್ವತ ಭ್ರಮೆಗೆ ಸಿಲುಕುವುದೊಂದೇ ಪರಮಧ್ಯೇಯವಾಗಿಸಿಕೊಂಡಿರುತ್ತೇವೆ.

ಇದು ಸಮಾಜದಲ್ಲಿ ಬಹಳ ಹೆಚ್ಚಾಗಿದೆ.ವಿಶ್ವತೆಗೆ ಬೆರೆಯುವ ಮನೋಧರ್ಮ ಅತೀ ವಿರಳ.ಯಾರ್ಯಾರು ಈ ವಿಶ್ವತೆಗೆ ಜಿಗಿದರೋ ಅವರೆಲ್ಲಾ ಯುಗದ ಸಂಚಾರದಲ್ಲಿ ತೊಡಗಿದ್ದಾರೆ.ಈ ಭ್ರಮೆಯಲ್ಲಿ ಬಿದ್ದವರೇ ಮಣ್ಣಾದವರು.ಕುವೆಂಪು ವರಗೆ ಅಳಿಯುವ ಚಿಂತೆ ಇರಲಿಲ್ಲ ಅವರ ಜೀವನಶೈಲಿಯೇ ಸಾಕ್ಷಿ. ಅವರಿಗಿದ್ದದ್ದು ನಾನು ಪ್ರತ್ಯೇಕತೆಯನ್ನು ಹೊಂದುವ ವಿಲಕ್ಷಣಗಳನ್ನು ಕಳಚಿಕೊಳ್ಳುವ ಬಗೆ ಎನಿತು ಎಂದು.ಈ ಚಿಂತನೆಯಲ್ಲಿ ಮಾನವ ಸಮಾಜದ ಶೋಧನಾಕಾರ್ಯಕ್ಕೆ ಮುಂದಾದ ಕುವೆಂಪು ಅವರು ಮೂಲಕ್ಕಿಳಿದರು ಮತ್ತು ಪ್ರಥಮಕ್ಕಿಳಿದರು.ಬಹುದೂರ ಸಾಗಿಬಂದ ನಮಗೆ ನಮ್ಮ ಮೂಲವೇ ಕೆಂದ್ರವಾಗಿರಬೇಕು.ಮೂಲವನ್ನು ಅಥವಾ ಪ್ರಥಮವನ್ನು ಮರೆತ ನಾವುಗಳು ಮುಂದೇನೇ ಸಾಧಿಸಿದರು ಅಥವಾ ಕಂಡುಕೊಂಡರು ಅದು ಭದ್ರತೆಯನ್ನು ಕಳೆದುಕೊಳ್ಳುತ್ತದೆ ಜೊತೆಗೆ ವಿನಾಶವನ್ನು ಹೊಂದುತ್ತದೆ‌.ಮೂಲದಲ್ಲಿ ಸೃಷ್ಟಿಯ ಸ್ವರೂಪ ಪೂರ್ಣವನ್ನು ಹೊಂದಿದೆ‌.

ನಾವು ಕೂಡ ವಿಶ್ವಕ್ಕೆ ಕಾಲಿಟ್ಟಾಗ ಪ್ರಕೃತಿಯ ಅಂಶಗಳ ಆಧಾರಿತವಾಗಿ ಮನುಷ್ಯತ್ವ ನಿಸರ್ಗಸಮರೂಪಿ ಲಕ್ಷಣಗಳನ್ನು ಪಡೆದು ಬಂದಿರುತ್ತೇವೆ.ಇದಕ್ಕೆ ನಮ್ಮ ಬಾಲ್ಯವು ಸಾಕಷ್ಟು ಉದಾಹರಣೆಗಳನ್ನು ನೀಡುತ್ತದೆ.ಕುವೆಂಪು ಅವರು ತಮ್ಮ ಬಾಲ್ಯ ಮತ್ತು ವಯೋ ಬೆಳವಣಿಗೆಯ ದಿನಗಳನ್ನು ಸಮಾಜದೊಂದಿಗೆ ತೂಗಿ ನೋಡಿದಾಗ ಸೃಷ್ಟಿಯ ಮೂಲ ರೂಪದ ಅರಿವಾಗಿದೆ.ಹಾಗಾಗಿಯೇ ಕುವೆಂಪು, ಹುಟ್ಟಿದ ಮಗುವನ್ನು ವಿಶ್ವಮಾನವ ಎಂದು ಘೋಷಿಸುತ್ತಾರೆ.ಇದು ಸತ್ಯವಾದ ಹೇಳಿಕೆ, ಯುಗಕ್ಕೂ ಒಪ್ಪುವ ಮಾತು.ಈ ಮಾತಿಗೆ ನಮ್ಮಲ್ಲಿ ಒಂದು ಉದಾಹರಣೆ ಇದೆ.ನಾವು ಬಾಲ್ಯದಲ್ಲಿರುವಾಗ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿದವರೆಲ್ಲರೂ ನಮಗೆ ಬಂಧುಗಳೇ ಆಗಿ ಕಾಣುತ್ತಿದ್ದರು.ಈ ಚರ್ಚ್ ,ಮಸೀದಿ, ದೇವಸ್ಥಾನಗಳಂತೆಯೇ ಮತ್ತು ಅಲ್ಲಿರುವ ದೇವರುಗಳೆಲ್ಲವೂ ನಮ್ಮ ದೇವರುಗಳಂತೆಯೇ ಕಾಣುತ್ತಿದ್ದವು‌.ಧರ್ಮ ಎನ್ನುವುದು ಸ್ವಲ್ಪವೂ ತಿಳಿಯದ ವಿಚಾರ.ಈ ಮಡಿ ,ಮೈಲಿಗೆ,ಶ್ರೇಷ್ಠ, ಕನಿಷ್ಠ, ಇವುಗಳೆಲ್ಲವೂ ನಮಗೆಲ್ಲರಿಗೂ ಬಾಲ್ಯದಲ್ಲಿ ಕಾಣದ ಲೋಕ.ಯಾರ ಮನೆಗಾದರೂ ನಗ್ಗುತ್ತಿದ್ದೋ ವಿಶ್ವಾಸದಲ್ಲಿದ್ದಾಗ.ಅಲ್ಲಿ ಅವರ ಸಂಸ್ಕೃತಿ ನಮ್ಮನ್ನೇನೂ ವಿಚಲನೆಗೊಳಿಸುತ್ತಿರಲಿಲ್ಲ.ಪ್ರಮಾದಕ್ಕೆ, ಅಪವಾದಕ್ಕೆ ಎಡೆಮಾಡುತ್ತಿರಲಿಲ್ಲ ಹಾಗೊಂದು ವೇಳೆ ಈ ಪ್ರಮಾದ ಮತ್ತು ಅಪವಾದಗಳು ಏನೇ ಆದರೂ ನಮಗೆ ತಿಳಿಯುತ್ತಿರಲಿಲ್ಲ‌.ಹೊಡೆದರೆ ಮಾತ್ರ ಅಳು, ತಿಳಿಯದ ಬೈಗುಳಗಳಿಗೆ ಅಳು, ಇಷ್ಟೇ ನಮ್ಮ ಪ್ರತಿಕ್ರಿಯೆ.ಆದರೆ ನಾವು ಬಾಲ್ಯದಲ್ಲಿದ್ದಾಗ ವಿಶ್ವತೆಯಲ್ಲಿ ಹೊಂದಾಗಿ ಬಿಟ್ಟಿದ್ದೋ ಎನ್ನುವುದಷ್ಟೇ ಬಾಲ್ಯದ ಎಲ್ಲಾ ಸನ್ನಿವೇಶಗಳ ಮತ್ತು ಕ್ರಿಯಾದಿಗಳ ಮೊತ್ತ.ಗೊತ್ತು ನಮಗೀಗ ನಾವು ವಿಶ್ವದಿಂದ ಎಷ್ಟು ಪ್ರತ್ಯೇಕತೆಯನ್ನು ಹೊಂದಿದ್ದೇವೆ ಎಂದು ಜಾತಿ,ಮತ,ಧರ್ಮ,ಸಂಸ್ಕೃತಿ, ಇತ್ಯಾದಿ ಎಲ್ಲಾ ವಿಚಾರಗಳಲ್ಲೂ ಅಂತರವನ್ನು ಬಹುಎತ್ತರ ವಿಸ್ತಾರ ವ್ಯತ್ಯಾಸವನ್ನು ಹೊಂದುಕೊಂಡಿದ್ದೇವೆ.

ಇದು ಒಮ್ಮೆಲೆ ಆದುದಲ್ಲ ನಮ್ಮ ಬೆಳವಣಿಗೆಯಲ್ಲಿ ನಿಧಾನಗತಿಯಲ್ಲಿ ಎಲ್ಲವೂ ಆದದ್ದು.ಮನುಷ್ಯನಾಗಲು ಪರಿಚಯಮಾಡಿಕೊಂಡ ಕೆಲುವುಗಳಲ್ಲೇ ಇನ್ನೂ ಮಾನವ ಪ್ರಾಣಿಯಾಗಿ ಉಳಿಯುವ ಅದೆಷ್ಟೋ ವಿಚಾರಗಳನ್ನು ಕಲಿಯುತ್ತಿದ್ದೇವೆ.ಇದರಿಂದಾಗಿಯೇ ನಾವು ಎಷ್ಟೇ ಬದುಕಿನುದ್ದಕ್ಕೂ ತಿಳಿಯುತ್ತಿದ್ದರೂ ಅಲ್ಪಮಾನವರಾಗಿ ಉಳಿದಿರುವುದು.ಬೆಳವಣಿಗೆ ಪೀಳಿಗೆಯವರಾದ ನಾವು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಮಾನವ ನೆಲೆಯ ಪೂರ್ಣ ಪರಿಚಯ ಮಾಡಿಕೊಡುವಲ್ಲೇ ವಿಶ್ವದೊಂದಿಗೆ ಬೆರೆಯುವ ಬಗೆಯನ್ನು ತಿಳಿಹೇಳಿಕೊಡುವುದರ ಬದಲು ವಿಶ್ವದಿಂದ ಪ್ರತ್ಯೇಕತೆಯನ್ನು ಬಯಸಿ ನಿಲ್ಲುವ ಹಲವು ಮಾರ್ಗಗಳನ್ನು ನಾವುಗಳೇ ತೋರ್ಪಡಿಸಿಕೊಡುತ್ತಿದ್ದೇವೆ.ಒಮ್ಮೊಮ್ಮೆ ನಾವು ತಿಳಿಯಪಡಿಸುವ ಜ್ಞಾನವು ಹೇಗೆಲ್ಲಾ ಅಪಾರ್ಥತೆಯನ್ನು ಹೊಂದುತ್ತದೆ ಎನ್ನುವುದಕ್ಕೆ ಈ ವಿಶ್ವಮಾನವ ಅಲ್ಪಮಾನವನಾಗುವ ಪರಿಕಲ್ಪನೆಯು ಸುಲಭವಾಗಿಯೇ ಅರ್ಥೈಸುತ್ತಿದೆ.ಈ ಪ್ರಕೃತಿ ಮಾನವನಿಂದ ಬಯಸುವುದೇ ವಿಶ್ವಪ್ರಜ್ಞೆಯನ್ನು.ಪ್ರಕೃತಿಯಲ್ಲಿ ಭೇಧವಿಲ್ಲ ಅಭೇಧ ಧರ್ಮವೇ ಅದರ ಸ್ವಾರಸ್ಯ.ವೈವಿಧ್ಯತೆಯೇ ಅದರ ಸೌಂದರ್ಯ.ಈ ಪ್ರತ್ಯೇಕತೆಯನ್ನು ಬಯಸಿ ನಿಂತ ನಮ್ಮಿಂದಲೇ! ಪ್ರಕೃತಿಗೆ ನೋವುಂಟಾಗುತ್ತಿದೆ‌.

ಗಡಿಗಳ ನಿರ್ಮಾಣ ನಿಸರ್ಗವನ್ನು ಕಟ್ಟಿಹಾಕಿದಂತಿದೆ.ನಿಸರ್ಗ ವ್ಯಾಸವನ್ನು ವಿಭಜಿತಗೊಳಿಸುತ್ತಿರುವುದು ಅದರ ಚಲನೆಗೆ ಅಡ್ಡಿಯಾಗತೊಡಗಿದೆ‌.ಪ್ರಕೃತಿಯೂ ಕೂಡ ಸಮತೋಲನ ಕಾಯ್ದುಕೊಳ್ಳಲು ಆಗಾಗ ತೋರುವ ಭಯಂಕರತೆಯ ಸೂಕ್ಷ್ಮತೆಯನ್ನು ಅರಿತ ಕುವೆಂಪು ಅವರು ಪರಿಹಾರೋಪಾಯವಾಗಿ ತಿಳಿಸಿದ ವಿಚಾರವೇ ವಿಶ್ವಪ್ರಜ್ಞೆ.ಕೆಲವೊಮ್ಮೆ ಕುವೆಂಪು ಅವರು ಹೊರಗಿನ ಹೋರಾಟಗಳಿಗೆ ಸ್ವೌಮ್ಯವಾಗಿ ಇದ್ದುದ್ದನ್ನು ಕಂಡು ಟೀಕಿಸಿದ್ದುಂಟು.ಕೇವಲ ನಾಮಪ್ರತಿಷ್ಠೆ ದುಡಿಮೆ ಅವರಲ್ಲಿ ಹೆಚ್ಚು ಎಂದು ಅವರ ಸಮಾಕಾಲೀನರೂ ದೂರಿದ್ದು ಉಂಟು.ಅವರು ಸ್ವೌಮ್ಯವಾಗಿಯೇ ಎಲ್ಲರಿಗಾಗಿ ಹೋರಾಡುತ್ತಿದ್ದರೆನ್ನುವುದು ಬಲುಸೂಕ್ಷ್ಮವಿಚಾರ.ಸಮಾಜದಲ್ಲಿ ಎಲ್ಲರನ್ನೂ ಒಗ್ಗಟ್ಟಾಗಿ ಕಾಣಬೇಕೆಂಬ ಅವರ ಮಹಾನಿಲುವಿಗೆ ಒಬ್ಬರ ಪರ ನಿಂತು ಇನ್ನೊಬ್ಬರನ್ನು ಜರಿಯುವುದು ಅಗತ್ಯವಿಲ್ಲ ಅಥವಾ ಸರಿಯಿಲ್ಲವೆಂದು ತಿಳಿದಿದ್ದರು.ಒಬ್ಬರನ್ನು ಸೋಲಿಸಿ ಇನ್ನೊಬ್ಬರನ್ನು ಗೆಲ್ಲಿಸಿ ಬದುಕುವುದು ತತ್ಸಮಾನಕ್ಕೆ ಒಳ್ಳೆಯದಾದ್ದರೂ ಭವಿಷ್ಯದಲ್ಲಿ ವಿಷಕಾರಿ ಬೆಳವಣಿಗೆಗಳಿಗೆ ನಾವೇ ಉತ್ತೇಜನ ಕೊಟ್ಟಂತೆ ಆಗುತ್ತದೆ‌.ಸಮಾಜಕ್ಕೆ ಅಗತ್ಯವಿರದ ವ್ಯವಸ್ಥೆಗಳಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಂತಾಗುತ್ತದೆಂದು.ಅವರು ಕೆಲವುಗಳಿಗೆ ಸ್ವೌಮ್ಯವಾಗಿಯೇ ಉಳಿದು ತಮ್ಮ ಬರವಣಿಗಾ ಧರ್ಮದಲ್ಲಿ ಎಲ್ಲರಿಗೂ ಒಳ್ಳೆಯದಾಗುವಂತೆ ಭೋಧಿಸುತ್ತಿದ್ದರು.ಅದನ್ನು ಅರಿಯದ ಕರ್ಮಿಗಳು ತಮ್ಮ ಮನೋಇಚ್ಛಾ ಸ್ಮರಿಸಿದರು.ಜನಜಾಹಿರಾತಿಗೆ ತಂದು ಒಣ ಘೋಷಣೆಗಳ ಕೂಗಿದರು.ಇದರಿಂದಾದ ನಷ್ಟ ಲೋಕಕ್ಕೆ ಹೊರತು ಕುವೆಂಪು ಅವರಿಗಲ್ಲ.ಆದರೂ ಲೋಕಹಿತಬಂಧು ಕುವೆಂಪು ಅವರು ಸಮಾಜದ ನೈತಿಕ ಭದ್ರತೆಗೆ ಶ್ರಮಿಸಿದ್ದು ಅವರ ಜೀವನ ಮತ್ತು ಅವರ ಕೃತಿಗಳನ್ನು ಪರಿಶೋಧಿಸಿದಾಗ ತಿಳಿದು ಬರುವ ಮುಖ್ಯ ವಿಷಯ ವಸ್ತು.ನನ್ನ ಬದುಕಿನ ವಿಶ್ವಮಾನತೆ ಇಂದು ನನಗೆ ಅಲ್ಪಸ್ವಲ್ಪ ಮರೆಯಾದಂತೆ ತಲ್ಲಣ ಉಂಟುಪಡಿಸಿದೆ.

ಇದಕ್ಕೆ ಖಂಡಿತ ನನ್ನ ಸುತ್ತಮುತ್ತಲಿನ ವಾತಾವರಣವನ್ನು ಸಮಾಜವನ್ನು ದೂಷಿಸುತ್ತೇನೆ.ನಾನು ಬೆಳೆದ ಊರು ಕ್ರಿಶ್ಚಿಯನ್ ಸಮುದಾಯವನ್ನು ಹೇರಳವಾಗಿ ಹೊಂದಿದ್ದ ಸ್ಥಳ.ನನಗೆ ಅಲ್ಲಿರುವ ಯೇಸುವೇ ಈಶನಾಗಿದ್ದ‌.ನಂತರ ಹದಿಹರೆಯದ ವಯಸ್ಸಿನಲ್ಲಿ ಮುಸ್ಲಿಮ್ ಸಮುದಾಯದವರೊಂದಿಗೆ ಬದುಕುವ ಅವಕಾಶ.ಅಲ್ಲೂ ಅವರಲ್ಲೂ ಒಂದಾಗಿ ಹೋದೆ.ಅದೇಕೋ ಈ ಹಿಂದಿನ ಕೆಲ ವರುಷಗಳಲ್ಲಿ ಎಲ್ಲಿ ಹೋದರೂ ನನಗೆ ವಿಶ್ವತೆಯ ಪ್ರತ್ಯೇಕತೆ ಗೋಚರಿಸಿ ಹೆಚ್ಚು ಅಂತರ ಕಂಡಿದೆ.ಅವರು ಬೇರೆ ನಾವು ಬೇರೆ ಎನ್ನುವ ಅರಿವು ಸಿಕ್ಕಿದ್ದರಲ್ಲೇ ಪ್ರತ್ಯೇಕತೆಯ ಸುಳಿವು ತಿಳಿದು ಬೇಸರವಾಗಿದೆ.ಅವರನ್ನೆಲ್ಲಾ ಇಂದಿಗೂ ಈಗಲೂ ಪ್ರೀತಿಸುವುದೇ ಸಹೋದರರೆನ್ನುವುದೇ ನನ್ನ ಮನೋಧರ್ಮವಾದರೂ ನಾನು ಮಗುವಾಗಿದ್ದಾಗ ,ಬಾಲ್ಯದ ಹುಡುಗನಾಗಿದ್ದಾಗ ಇದ್ದ ಪರಿಪೂರ್ಣ ವಿಶ್ವಮಾನವತೆಯ ಅಂಶ ಈಗ ಅಷ್ಟಿಲ್ಲ.ಹಾಗಾಗಿ ಕುವೆಂಪು ಹೇಳಿದ *”ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ ಬೆಳೆಯುತ್ತಲೇ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ”*ಎನ್ನುವ ಮಾತು ನನ್ನನ್ನು ಹೆಚ್ಚು ಕಾಡಿದುಂಟು.ಕುವೆಂಪು ಅವರ ಈ ಒಂದು ಹೇಳಿಕೆಯಲ್ಲೇ ಅವರ ಬದುಕಿನ ಒಟ್ಟಾರೆಯ ಅವಲೋಕನ ನನಗೆ ತಿಳಿದುಬಿಟ್ಟಿತು.

ಪ್ರಕೃತಿಯ ನಿಜತತ್ವ ಅರಿವಾಯಿತು.ಆಧ್ಯಾತ್ಮಿಕತೆ ಭಾವವನ್ನು ಸೊಗಸಾಗಿ ಸಾರಿದ ರೀತಿ ಇಷ್ಟವಾಯಿತು.ನಾನು ವಿಶ್ವಮಾನವನಾಗಲು ಹೇರಳವಾಗಿ ಬಯಸುತ್ತೇನೆ.ಬನ್ನೀ ನೀವೂ ಕೂಡ ವಿಶ್ವಮಾನವರಾಗಿ ನಮ್ಮ ಮುಂದಿನ ಪೀಳಿಗೆಗೆ ವಿಶ್ವಮಾನವ ಸಂದೇಶವನ್ನು ಸಾರೋಣ.ಬದುಕಿನ ಪೂರ್ತ ಶೋಧಿಸಿ ಕೊನೆಗೆ ವಿಶ್ವಕ್ಕೆ  ವಿಶ್ವಮಾನವ ಪ್ರಜ್ಞೆಯನ್ನು ಸಾರಿದ ಕುವೆಂಪು ಅವರನ್ನು ಸ್ಮರಿಸುತ್ತ ಗೌರವಸಲ್ಲಿಸೋಣ ಗೌರವಂತರಾಗಿ ಬಾಳೋಣ.