ಚಾಮರಾಜನಗರ ಚನ್ನೀಪುರಮೋಳೆ ಶಾಲೆಯಲ್ಲಿ ಸಾಲುಗಿಡ ನೆಡುವ ಕಾರ್ಯಕ್ರಮ


ಚಾಮರಾಜನಗರ: ಚಿತ್ರನಟ ದಿ. ಡಾ.ಪುನೀತ್‌ರಾಜ್ ಕುಮಾರ್ ಅವರ ೪೭ ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಚನ್ನಿಪುರಮೋಳೆ ಉನ್ನತ್ತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಶ್ವರಿ ಟ್ರಸ್ಟ್ ವತಿಯಿಂದ ೧೦೦ ಸಾಲುಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶೆ ಬಿ.ಎಸ್.ಭಾರತಿ ಅವರು ಮಾತನಾಡಿ, ಸಮಾಜಸೇವೆಗಿಂತ ದೊಡ್ಡದಾದ ಸೇವೆ ಮತ್ತೊಂದಿಲ್ಲ. ಗಿಡನೆಟ್ಟು ಪೋಷಣೆ ಕಾರ್ಯಮಾಡುತ್ತಿರುವ ವೆಂಕಟೇಶ್ ಅವರು, ಸಾಲುಮರದ ತಿಮ್ಮಕ್ಕ ಅವರ ಸಾಲಿನಲ್ಲಿ ಅವರು ಒಬ್ಬರಾಗಿದ್ದಾರೆ. ಗಿಡನೆಟ್ಟು ಆದಮೇಲೆ ಆ ಭಾಗದ ಮನೆ ಅಂಗಡಿಮುಂಗಟ್ಟುಗಳವರು ಗಿಡಕ್ಕೆ ನೀರೆರೆದು ಪೋಷಿಸುವ ಕೆಲಸ ಮಾಡಬೇಕು, ಗಿಡನೆಡುವ ಕಾಯಕದಲ್ಲಿ ಮುಂದಾಗಿರುವ ವೆಂಕಟೇಶ್ ಅವರಿಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.
ಜಿಲ್ಲಾ ಕಾನೂನುಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ಮಾತನಾಡಿ, ಅಶೋಕ ಚಕ್ರವರ್ತಿ ತನ್ನ ಆಡಳಿತಾವಧಿಯಲ್ಲಿ ಗಿಡಮರ ಬೆಳೆಸಿ, ಪರಿಸರ ಉಳಿಸುವ ಕಾಳಜಿಮೆರೆದಿದ್ದರು.
ಪ್ರಸ್ತುತ ಸಂದರ್ಭದಲ್ಲಿ ಪರಿಸರ ನಾಶವಾಗುತ್ತಿದ್ದು, ಮುಂದಿನಪೀಳಿಗೆಯ ದೃಷ್ಟಿಯಿಂದ ಪ್ರತಿಯೊಬ್ಬರು ಗಿಡನೆಡುವ ಕಾರ್ಯ ಮಾಡಬೇಕಿದೆ. ನಗರದ ನಾನಾಕಡೆ ಗಿಡನೆಡುವ ಕಾರ್ಯ ಗಿಡಸಂರಕ್ಷಕ ವೆಂಕಟೇಶ್ ಅವರಿಗೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಹುರುದುಂಬಿಸಬೇಕು, ಮುಂದಿನದಿನಗಳಲ್ಲೂ ಅವರ ಪರಿಸರ ಸಂರಕ್ಷಣೆ ಕಾಳಜಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಡಾ.ರಾಜ್ ಕುಮಾರ್ ಅವರ ಸ್ಥಾನಕ್ಕೇರಿದ ಡಾ.ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ, ಇಂದು ಅವರು ನಮನ್ನಗಲಿದರೂ, ಅಭಿಮಾನಿಗಳ ಆರಾಧ್ಯ ದೈವರಾಗಿದ್ದಾರೆ. ನಮ್ಮ ರಾಜ್ಯದಲ್ಲೇ ಅಲ್ಲ. ಹೊರರಾಜ್ಯದಲ್ಲೂ ಅವರು ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಶಾಲಾಮಕ್ಕಳಿಗೆ ಸಿಹಿವಿತರಿಸಲಾಯಿತು.
ಈಶ್ವರಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ನಗರಸಭೆ ೨೪ ನೇ ವಾರ್ಡ್ ಸದಸ್ಯೆ ಭಾಗ್ಯಮ್ಮ, ಮೈಸೂರುವಿವಿಸಿಂಡಿಕೇಟ್ ಸದಸ್ಯ ಪ್ರದೀಪ್ ಕುಮಾರ್ ದೀಕ್ಷಿತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್, ಜಿಲ್ಲಾ ಉಪ್ಪಾರ ಯುವಕಸಂಘದ ಅಧ್ಯಕ್ಷ ಜಯಕುಮಾರ್, ಮುಖ್ಯ ಶಿಕ್ಷಕ ಬಸವಣ್ಣ ಸೇರಿದಂತೆ ಸಹಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.