ಚಾಮರಾಜನಗರ: ಮುಂದಿನ ದಿನಗಳಲ್ಲಿ ತೆರಕಣಾಂಬಿ ಪದವಿ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ತಿಳಿಸಿದರು.
ತಾಲೂಕಿನ ತೆರಕಣಾಂಬಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಮತ್ತು ಹೊಸ ಕೋರ್ಸ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪದವಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಸಹ ಆರಂಭ ಮಾಡಲು ಸಿದ್ಧತೆ ನಡೆಸಲಾಗಿದೆ. ಮುಖ್ಯವಾಗಿ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿ, ಆಟೋಮೆಷಿನ್ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲು ಆದ್ಯತೆ ನೀಡಲಾಗುವುದು. ಇದರಿಂದ ವಿದ್ಯಾರ್ಥಿಗಳು ಪದವಿ ಶಿಕ್ಷಣ ಮುಗಿದ ಬಳಿಕ ಉದ್ಯೋಗ ಅವಕಾಶಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದರು.
ಸರ್ಕಾರವು ಮೈಸೂರು ವಿವಿಗೆ ಮೂರು ಪದವಿ ಕಾಲೇಜುಗಳನ್ನು ಹಸ್ತಾಂತರ ಮಾಡಿದೆ. ಇದರಲ್ಲಿ ತೆರಕಣಾಂಬಿ ಪದವಿ ಕಾಲೇಜು ಸಹ ಒಂದಾಗಿದೆ. ಈಗಾಗಲೇ ಕಾಲೇಜಿನಲ್ಲಿ ಬಿಸಿಎ, ಬಿಬಿಎ ಹಾಗೂ ಬಿ.ಕಾಂ ಕೋರ್ಸ್ ಗಳನ್ನು ಆರಂಭ ಮಾಡಲಾಗಿದೆ. ಇದರ ಜೊತೆಗೆ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ಪ್ರೊ. ಜಿ. ಹೇಮಂತ್ ಕುಮಾರ್ ಅವರು ತಿಳಿಸಿದರು.
ಶಾಸಕರಾದ ಸಿ.ಎಸ್. ನಿರಂಜನ್‌ಕುಮಾರ್ ಅವರು ಮಾತನಾಡಿ ತೆರಕಣಾಂಬಿ ಪದವಿ ಕಾಲೇಜನ್ನು ಕಾರಣಾಂತರಗಳಿಂದ ಮುಚ್ಚುವ ಪರಿಸ್ಥಿತಿ ಬಂದಿತ್ತು. ಕಾಲೇಜು ಉಳಿಸಲು ದೊಡ್ಡ ಮಟ್ಟದ ಹೋರಾಟವೇ ನಡೆದಿತ್ತು. ಕಾಲೇಜು ಉಳಿಸಲು ನಿಯೋಗ ತೆರಳಿ ಸಚಿವರಾದ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿ ಕಾಲೇಜು ಉಳಿಸಲು ಪ್ರಯತ್ನ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಕಟ್ಟಡವನ್ನು ಸಮಗ್ರವಾಗಿ ಬಳಕೆ ಮಾಡಿಕೊಳ್ಳಲು ಹಾಗೂ ಈ ಭಾಗದ ಜನರಿಗೆ ಉಪಯೋಗವಾಗುವಂತೆ ಮಾಡಲು ಕಾಲೇಜನ್ನು ಮೈಸೂರು ವಿ.ವಿ ಗೆ ಹಸ್ತಾಂತರ ಮಾಡಲಾಯಿತು. ಹಸ್ತಾಂತರದ ನಂತರ ಹಳೆಯ ಕೋರ್ಸ್‌ಗಳ ಬದಲಾಗಿ ಹೊಸ ಕೋರ್ಸ್‌ಗಳನ್ನು ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ.ಆರ್.ಶಿವಪ್ಪ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸರಾದ ಪ್ರದೀಪ್ ಕುಮಾರ್ ದೀಕ್ಷಿತ್, ಮೈಸೂರು ವಿವಿ ಶೈಕ್ಷಣಿಕ ಮಂಡಳಿ ಸದಸ್ಯರಾದ ಎಂ.ಸಿ. ರಾಜಶೇಖರ್, ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಆರ್. ಮಹೇಶ್ ಸೇರಿದಂತೆ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
