ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದ ಹೊರ ವಲಯದ ಒಂಟಮಾಲಪುರದ ಬಳಿ
ಸಲಗವೊಂದರ ಮೃತದೇಹ ಪತ್ತೆಯಾಗಿದ್ದು, ಇದು ಸ್ವಾಭಾವಿಕ ಸಾವೇ ಅಥವಾ ಗುಂಡೇಟಿಗೆ ಬಲಿಯಾಗಿದೆಯಾ ಎಂಬ ಸಂಶಯ ಕಾಡತೊಡಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿವಲಯದ ಹನೂರು ಬಫರ್ ವಲಯ ವ್ಯಾಪ್ತಿಗೆ ಸೇರಿದ ಒಂಟಮಾಲಪುರ ಕೆರೆಯ ಬಳಿ ಒಂಟಿ ಸಲಗದ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಸಲಗ ಸಾವನ್ನಪ್ಪಿರುವ ವಿಚಾರವನ್ನು ಅರಣ್ಯಾಧಿಕಾರಿಗಳಿಗೆ ಸ್ಥಳೀಯ ಕೆಲ ರೈತರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಪಶು ವೈದ್ಯಾಧಿಕಾರಿ ಸಿದ್ದರಾಜು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾಡಾನೆಯು ಯಾವಾಗ ಸತ್ತಿದೆ? ಯಾವ ಕಾರಣದಿಂದ ಸತ್ತಿದೆ? ಎಂಬ ನಿಖರವಾದ ಮಾಹಿತಿ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೆ ತಿಳಿಯಲಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ತಂಡಗಳು ಕಾರ್ಯಾಚರಿಸುತ್ತಿರುವ ಗುಮಾನಿಗಳಿವೆ. ಇತ್ತೀಚೆಗಷ್ಟೆ ಜಿಂಕೆ ಬೇಟೆಯಾಡಿ ಮಾಂಸದೊಂದಿಗೆ ಇಬ್ಬರು ಸಿಕ್ಕಿ ಬಿದ್ದಿದ್ದರಲ್ಲದೆ, ಇವರ ಬಳಿ ಆನೆ ದಂತವೂ ಸಿಕ್ಕಿತ್ತು. ಹೀಗಾಗಿಯೇ ಸತ್ತ ಸಲಗದ ಸುತ್ತಲೂ ಹಲವು ಅನುಮಾನಗಳು ಸೃಷ್ಟಿಯಾಗುತ್ತಿವೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಲಗದ ಸಾವಿಗೆ ಕಾರಣಗಳು ತಿಳಿಯಲಿದ್ದು ಅಲ್ಲಿ ತನಕ ಕಾಯುವುದು ಅನಿವಾರ್ಯವಾಗಿದೆ.