ಸಕಲೇಶಪುರ: ಕಾಡಾನೆಯೊಂದು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಸಿಡೆ ಗ್ರಾಮದಲ್ಲಿ ನಡೆದಿದೆ.
ಹಸಿಡೆ ಗ್ರಾಮದ ಬಳಿ ರೈಲ್ವೇ ಗೇಟ್ ಹತ್ತಿರ ವಾಹನಗಳ ಕ್ರಾಸಿಂಗ್ ಮಾಡುವ ಸ್ಥಳದಲ್ಲಿ ರಾತ್ರಿ ಸುಮಾರು 11.30ರ ವೇಳೆಯಲ್ಲಿ ಬೆಂಗಳೂರು -ಕಾರವಾರ ಎಕ್ಸ್ ಪ್ರೆಸ್ ರೈಲು ಬಂದಿದ್ದು ಇದರ ಇಂಜಿನ್ ರೈಲು ಹಳಿ ದಾಟುತ್ತಿದ್ದ ಕಾಡಾನೆಗೆ ಬಡಿದಿದ್ದು, ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
ಮಾಹಿತಿಗಳ ಪ್ರಕಾರ ರೈಲು ಬರುವ ಹತ್ತು ನಿಮಿಷಗಳ ಮೊದಲು ರೈಲ್ವೆ ಗೇಟ್ ಕಾವಲುಗಾರ ವಾಹನಗಳು ಸಂಚಾರ ಮಾಡದಂತೆ ಗೇಟ್ ಹಾಕಲು ಬಂದಿದ್ದು ಈ ವೇಳೆ ಅಲ್ಲಿ ಕಾಡಾನೆ ಕಾಣಿಸಿರಲಿಲ್ಲ. ಆದರೆ ರೈಲು ಬರುವ ವೇಳೆ ಕಾಡಾನೆ ಬಂದಿದ್ದು, ರೈಲು ಗೇಟಿನ ಎರಡು ಬದಿಯೂ ಆಳವಾದ ಕಂದಕದಿಂದ ಕೂಡಿರುವುದರಿಂದ ಜತೆಗೆ ದಿಢೀರ್ ರೈಲು ಶಬ್ದ ಮಾಡುತ್ತಾ ಬರುವ ವೇಳೆ ರೈಲಿನ ಲೈಟ್ ಕಾಡಾನೆಯ ಕಣ್ಣಿಗೆ ಬಿದ್ದಿದ್ದರಿಂದ ಬಹುಶಃ ಅದಕ್ಕೆ ಹಳಿ ದಾಟಲು ಸಾಧ್ಯವಾಗದೆ ಹಳಿಯಲ್ಲಿ ಸಿಲುಕಿಕೊಂಡಿದೆ. ಪರಿಣಾಮ ರೈಲಿನ ಇಂಜಿನ್ ಅದಕ್ಕೆ ಬಡಿದು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
ವಿಷಯ ತಿಳಿಯುತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮೃತ ಕಾಡಾನೆಯನ್ನು ಕ್ರೇನ್ ಬಳಸಿ ಹೊರತೆಗೆದು ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.