ಮೈಸೂರು, ಫೆ.೧೨- ನಟ, ನಿರ್ದೇಶಕ, ನಿರ್ಮಾಪಕ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ ಅಭಿನಯದ ಏಕ್ ಲವ್ ಯಾ’ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರೇಮ್ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದರು. ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾಗೆ ಜೋಡಿಯಾಗಿ ರಚಿತಾ ರಾಮ್ ಹಾಗೂ ಹೊಸ ನಟಿ ಕೊಡಗಿನ ಬೆಡಗಿ ಗ್ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ಫೆ.೨೪ ರಂದು ರಾಜ್ಯಾದ್ಯಂತ ಚಿತ್ರ ತೆರೆ ಕಾಣಲು ಸಿದ್ದ ವಾಗಿದೆ.

ಬಳಿಕ ಮಾತನಾಡಿದ ನಿರ್ದೇಶಕ ಪ್ರೇಮ್, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಮಹೇಂದ್ರ ಸಿನ್ಹ ಅದ್ಬುತ ವಾಗಿ ಕ್ಯಾಮಾರ ಕೈ ಚಳಕ ಏಕ್ ಲವ್ ಯಾ’ ಅತ್ಯುತ್ತಮವಾಗಿ ಮೂಡಿಬಂದಿದೆ. ಫೆ.೧೪ರಂದು ಚಿತ್ರದ ೬ನೇ ಹಾಡು ಬಿಡುಗಡೆಯಾಗಿದೆ. ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ಕಾಶ್ಮೀರ, ರಾಜಸ್ಥಾನ, ಊಟಿ ಇನ್ನಿತರೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ತಿಳಿಸಿದರು.

ಈಗಾಗಲೇ ಚಿತ್ರದ ೫ ಹಾಡುಗಳು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡದ ಜೊತೆಗೆ ತಮಿಳು, ತೆಲುಗಿಗೂ ಚಿತ್ರ ಡಬ್ ಆಗಿದ್ದು, ಕನ್ನಡದಲ್ಲಿ ಬಿಡುಗಡೆಯಾದ ಒಂದು ವಾರದ ಬಳಿಕ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸುಮಾರು ೩೨೦ ಚಿತ್ರಮಂದಿರಗಳಲ್ಲಿ ಏಕ್ ಲವ್ ಯಾ’ ಸಿನಿಮಾ ಬಿಡುಗಡೆಯಾಗಲಿದೆ ಎಂದರು.

ಕರಿಯಾ ಸಿನಿಮಾದಿಂದ ಇಲ್ಲಿಯವರೆಗೆ ನಿರ್ದೇಶನ ಮಾಡಿದ ಎಲ್ಲಾ ಸಿನಿಮಾಗಳು ಹಿಟ್ ಆಗಿದ್ದು, ನಿರ್ಮಾಪಕರಿಗೆ ಯಾವುದೇ ರೀತಿಯಲ್ಲೂ ನಷ್ಟವಾಗಿಲ್ಲ. ಪ್ರೇಕ್ಷಕರು ಚಿತ್ರ ನೋಡಲು ಹಾಡುಗಳೇ ಆಹ್ವಾನ ನೀಡುತ್ತವೆ. ಆದ್ದರಿಂದ ಏಕ್ ಲವ್ ಯಾ’ ಚಿತ್ರದ ಹಾಡುಗಳನ್ನು ರಮಣಿಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಬಿಡುಗಡೆಯಾಗಿರುವ ಹಾಡುಗಳನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ನೈಜ ಘಟನೆಯಾದರಿತ ಈ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡಿದ್ದು ನಾನು ಹಳೇ ನಿರ್ಮಾಪಕ ಅನ್ನುವುದಕ್ಕಿಂತ ನಾನು ಕೂಡ ಹೊಸ ನಿರ್ಮಾಪಕರಂತೆ ಹೊಸಬರಿಗೆ ಮಾದರಿ ಆಗಬೇಕು ಎಂದು ಕನ್ನಡ ಚಿತ್ರರಂಗದಲ್ಲಿ ಅವರು ಬೆಳೆಯಲು ಪ್ರೋತ್ಸಾಹಿಸಲಾಗಿದೆ ಎಂದು ಹೇಳಿದರು.

ಈ ವೇಳೆ ನಟ ರಾಣಾ, ನಟಿ ಗ್ರೀಷ್ಮಾ ನಾಣಯ್ಯ, ಛಾಯಾಗ್ರಾಹಕ ಮಹೇಂದ್ರ ಸಿಂಹ, ಹಾಸ್ಯ ನಟರಾದ ಸೂರಜ್, ನಿಖಿಲ್, ಹಿತೇಷ್, ವಿಜಯ್ ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.