ಚಾಮರಾಜನಗರ: ವೈರಾಣುನಿಂದ ಉಂಟಾಗುವ ಡೆಂಘಿ ಜ್ವರ ತಡೆಯಲು ಹಾಗೂ ರೋಗ ಹರಡದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಣಾಮಕಾರಿಯಾಗಿ ವಿವಿಧ ಇಲಾಖೆಗಳು ಜಾಗೃತಿ ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಡೆಂಘಿ ನಿಯಂತ್ರಣ ಸಂಬಂಧ ನಡೆದ ಜಿಲ್ಲಾ ಮಟ್ಟದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಡೆಂಘಿ ಜ್ವರದ ಲಕ್ಷಣಗಳು ಹಾಗೂ ನಿಯಂತ್ರಣ ಸಂಬಂಧ ಮನ ಮುಟ್ಟುವಂತೆ ಜನರಿಗೆ ತಿಳಿವಳಿಕೆ ನೀಡಬೇಕಿದೆ. ಈ ಉದ್ದೇಶಕ್ಕಾಗಿ ಹಲವು ಇಲಾಖೆಗಳು ಸಮನ್ವಯದಿಂದ ಆರೋಗ್ಯ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ರೋಗ ನಿಯಂತ್ರಣಕ್ಕೆ ಲಾರ್ವಾ ಸರ್ವೆ ಮತ್ತು ಲಾರ್ವಾ ನಾಶ ಪ್ರಕ್ರಿಯೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಾಗ ಸಹಕಾರ ನೀಡಬೇಕು. ಕಸ ವಿಲೇವಾರಿ, ಚರಂಡಿ ಸ್ವಚ್ಚತೆ ಸಮರ್ಪಕವಾಗಿ ಆಗಬೇಕು. ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಶೇಖರಣಾ ಸ್ಥಳಗಳನ್ನು ಕಾಲಕಾಲಕ್ಕೆ ಶುಚಿಗೊಳಿಸಬೇಕು ಎಂದರು.
ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಮುಖಾಂತರ ಪ್ರಾರ್ಥನಾ ಸಮಯದಲ್ಲಿ ತಿಳಿವಳಿಕೆ ನೀಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಸಹಕಾರದೊಂದಿಗೆ ಜಾಗೃತಿ ಮೂಡಿಬೇಕು. ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ಗಳಲ್ಲೂ ಸಹ ಡೆಂಗಿ ನಿಯಂತ್ರಣದ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾ ಧಿಕಾರಿಯವರು ತಿಳಿಸಿದರು.
ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರು ಹೆಚ್ಚು ಇರುವ ಕಡೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಬೇಕು. ಎಲ್ಲಾ ಕಾರ್ಮಿಕರಿಗೂ ಆರೋಗ್ಯ ತಪಾಸಣೆಯಾಗಬೇಕು. ಕ್ವಾರಿಗಳಲ್ಲಿ ನೀರು ಸಂಗ್ರಹಣೆಯಾಗದಂತೆ ಹಾಗೂ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು. ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಮೀನುಗಾರಿಕೆ ಇಲಾಖೆ ಸೊಳ್ಳೆ ನಿಯಂತ್ರಿಸುವ ಸಲುವಾಗಿ ಪೂರಕವಾಗಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಸ್ ಡಿಪೋಗಳಲ್ಲಿ ಅನುಪಯುಕ್ತ ಟೈರು ಇನ್ನಿತರ ಸ್ಥಳಗಳಲ್ಲಿ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ವಿಧಾನಗಳನ್ನು ಅನುಸರಿಸಬೇಕು ಎಂದರು.
ಸೊಳ್ಳೆಗಳ ನಿಯಂತ್ರಣಕ್ಕಾಗಿ ನೈರ್ಮಲ್ಯ ಕಾಪಾಡಲು ವಿಶೇಷ ಒತ್ತು ನೀಡಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜನೆ ಮಾಡಬೇಕು. ಮಾರುಕಟ್ಟೆ, ಸಂತೆ ಇನ್ನಿತರ ಜನಸಂದಣಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆಯ ಕುರಿತು ಅರಿವು ಮೂಡಿಸಬೇಕು. ಗ್ರಾಮೀಣ ಭಾಗಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ತೊಡಗಿಸಿಕೊಂಡು ಡೆಂಘಿ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುವಂತೆ ಎಂದು ತಿಳಿಸಿದರು.
ಇದೇ ವೇಳೆ ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಫಾಕ್ಸ್ ಸೋಂಕಿನ ಬಗ್ಗೆಯು ಜಿಲ್ಲೆಯ ಜನರಿಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು. ರೋಗ ಲಕ್ಷಣಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಕೂಡಲೇ ಸಂಪರ್ಕಿಸುವಂತೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕಾಂತರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ನಂದಾ ಹಣಬರಟ್ಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ, ಶಿಕ್ಷಣ ಅಧಿಕಾರಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಸುರೇಶ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಗಿರೀಶ್ ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
