ಚಾಮರಾಜನಗರ: ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯಾಮೂಲ್ಯವಾಗಿದ್ದು ಅದರಲ್ಲೂ ಬಾಲ್ಯ ಪೂರ್ವ ಶಿಕ್ಷಣ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಅಡಿಪಾಯವಾಗಿದೆ ಎಂದು ಶಾಸಕರಾದ ಎನ್. ಮಹೇಶ್ ಅವರು ತಿಳಿಸಿದರು.
ಬಿಳಿಗಿರಿರಂಗನ ಬೆಟ್ಟದ ಯರಕನಗದ್ದೆ ಪೋಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಮಿಗಾ ಫೌಂಡೇಶನ್ ಹಾಗೂ ಇಂಟರ್ ಪಂಪ್ ಗ್ರೂಪ್ ಇಟಲಿ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಲಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಲ್ಲರಿಗೂ ಅತ್ಯಮೂಲ್ಯವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಳ್ಳುವ ಮೂಲಕ ಅವುಗಳ ಪೂರ್ಣ ಪ್ರಯೋಜನ ಪಡೆಯಬೇಕೆಂದು ಸಲಹೆ ಮಾಡಿದರು.
ಇಂಟರ್ ಪಂಪ್ ಗ್ರೂಪ್ ಇಟಲಿಯವರು ೨ ಅಂಗನವಾಡಿ ಕೇಂದ್ರಗಳಿಗೆ ಕಲಿಕಾ ಸಾಮಾಗ್ರಿಗಳನ್ನು ಪೂರೈಸಿದ್ದಲ್ಲದೆ ಹೊಸ ಶೌಚಾಲಯ ನಿರ್ಮಾಣ, ೩ ಅಂಗನವಾಡಿ ಕೇಂದ್ರಗಳನ್ನು ನವೀಕರಿಸಲು ಸಹಕರಿಸಿದ್ದಾರೆ. ಇದು ಅಂಗನವಾಡಿಗಳ ಅಭಿವೃದ್ದಿಗೆ ಪೂರಕವಾಗಿದೆ. ಈ ಪ್ರಯತ್ನದಿಂದಾಗಿ ಬುಡಕಟ್ಟು ಜನರ ಮಕ್ಕಳಿಗೂ ಉತ್ತಮ ದರ್ಜೆಯ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಿದಂತಾಗಿದೆ ಎಂದು ಶಾಸಕರಾದ ಎನ್. ಮಹೇಶ್ ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾ ಲಕ್ಷ್ಮಿ ಅವರು ಮಾತನಾಡಿ ಅಮಿಗಾ ಅಕಾಡೆಮಿ ೨೦೧೯ ರಿಂದಲೇ ತಮಿಳುನಾಡಿನ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷ್ಷಣ ನೀಡುತ್ತಿದ್ದು, ಪ್ರಸ್ತುತ ೧೦೦ ಕ್ಕಿಂತ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷ್ಷಣ ನೀಡುತ್ತಿದೆ. ಅಮಿಗಾ ಅಕಾಡೆಮಿ, ಪೌಂಡೇಶನ್, ಮಾಂಟೆಸರಿ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವುದಲ್ಲದೇ ಗ್ರ್ರಾಮೀಣ ಭಾಗದ ಯುವತಿಯರಿಗೆ ತರಬೇತಿ ನೀಡಿ, ಅವರನ್ನು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಉಚಿತವಾಗಿ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಕಲಿಸಲು ನಿಯೋಜಿಸಿದೆ ಎಂದರು.
ಅಮಿಗಾ ಪೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಲಕ್ಷ್ಮಿ ರಾಮಮೂರ್ತಿ ಅವರು ಅಮಿಗಾ ಕಾರ್ಯಕ್ರಮದಡಿ ಕರ್ನಾಟಕದಲ್ಲಿ ಅಮಿಗಾ ಪೌಂಡೇಶನ್ ಆರಿಸಿಕೊಂಡ ಪ್ರಥಮ ಕೇಂದ್ರ ಬಿಳಿಗಿರಿರಂಗನ ಬೆಟ್ಟವಾಗಿದೆ. ಅಮಿಗಾ ಪೌಂಡೇಶನ್ ಅಂಗನವಾಡಿ ಕೇಂದ್ರಗಳನ್ನು ಬೆಂಬಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಬೇರೆ ಸ್ಥಳಗಳಲ್ಲೂ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಿದೆ ಎಂದು ತಿಳಿಸಿದರು.
ಅಮಿಗಾ ಪೌಂಡೇಶನ್‌ನ ಎಂ.ಆರ್. ಧರ್ಮರಾಜನ್, ಬಿಳಿಗಿರಿರಂಗನ ಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಗಮ್ಮ ಹಾಗೂ ಅಂಗನವಾಡಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.
ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಬುಡಕಟ್ಟು ಜನ ವಸತಿಯ ಮೂರು ಅಂಗನವಾಡಿ ಕೇಂದ್ರಗಳಾದ ಹೊಸಪೋಡು, ಬಂಗಲೆಪೋಡು ಮತ್ತು ಯರಕನಗದ್ದೆ ಪೋಡುಗಳಲ್ಲಿ ಉಚಿತ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.