ಓದಿ ಬೋಧಕನಾಗು

ಕಾದಿ ಕ್ಷತ್ರಿಯನಾಗು

ಶೂದ್ರ ವೈಶ್ಯನೆ ಆಗು

ದುಡಿದು ಗಳಿಸಿ

ಏನಾದರೂ ಆಗು

ನಿನ್ನೊಲವಿನಂತಾಗು

ಏನಾದರೂ ಸರಿಯೆ –

ಮೊದಲು ಮಾನವನಾಗು

ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ ಗರಿಗೆದುರುತ್ತಾ ಸಾಗುತ್ತಿದೆ. ‘ಮೊದಲು ಮಾನವನಾಗು’ ಎಂಬ ಮಾತನ್ನು ಕವಿ ಮತ್ತೆ ಮತ್ತೆ ಎಲ್ಲಾ ಪಂಕ್ತಿಗಳಲ್ಲೂ ಪುನರುಚ್ಚರಿಸಿರುವುದರ ಹಿಂದಿನ ಉದ್ದೇಶ ಹಾಗೂ ಕವಿ ಸಮಾಜದಲ್ಲಿ ಕಂಡುಕೊಂಡ ಕೊರತೆಯಾದರೂ ಏನಿರಬಹುದು ಅನ್ನುವ ಹಲವಾರು ಪ್ರಶ್ನೆಗಳು ಕಾಡತೊಡಗಿದವು. ಹಾಗಾದರೆ ನಾವೆಲ್ಲ ಮಾನವರಲ್ಲವೆ? ಅಥವಾ ಮಾನವರಾಗಿಲ್ಲವೆ? ಅಥವಾ ‘ಮಾನವ’ ಅನ್ನುವ ಪದದ ಅರ್ಥವನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿಲ್ಲವೆ? ಹೀಗೆ ನೂರೆಂಟು ಮಜಲುಗಳಲ್ಲಿ  ಆ ಒಂದು ಸಾಲು ಸಾಮಾಜದ ಮುಂದೆ ಸವಾಲೊಡ್ಡುತ್ತದೆ. 

  ಇಂಗ್ಲೆಂಡಿನ ಕವಿ ಮತ್ತು ವಿಮರ್ಶಕ ಮ್ಯಾಥ್ಯೂ ಆರ್ನಲ್ಡ್‌ ಹೇಳಿರುವಂತೆ “A Word Never end of Mear meaning. It sounds and suggests.” 

  (ಯಾವುದೇ ಒಂದು ಪದ ಕೇವಲ ಅರ್ಥದಿಂದ ಕೊನೆಗೊಳ್ಳುವುದಿಲ್ಲ ಅದು ಧ್ವನಿಸುತ್ತದೆ). ಹೌದು ಇಲ್ಲಿಯೂ ‘ಮಾನವ’ ಎಂಬ ಪದ ಕೇವಲ ಅರ್ಥವಾಗಿರದೆ ಕವಿಯ ಆಂತರ್ಯದ ಮಿಡಿತ ಹಾಗೂ ಸಮಾಜಮುಖಿಯಾನ ತುಡಿತದ ಪ್ರತಿಮೆಯಾಗಿರುವುದರಲ್ಲಿ ಎರಡು ಮಾತಿಲ್ಲ. ಸಮಾಜದ ತುಡಿತಗಳಿಗೆ ಮಿಡಿಯದವರು ನಿಜವಾದ ಶಿಕ್ಷಿತರಾಗಲಾರರು.

  ‘ಮಾನವನಾಗು’ ಎಂಬ ಪದ ಹೇಗೆ ಧ್ವನಿಸುತ್ತದೆಯೋ, ‘ಶಿಕ್ಷಣ’ ಅನ್ನುವುದೂ ಕೇವಲ ಪದವಾಗದೆ ಸಮಾಜಮುಖಿಯಾಗಿ, ಮಾನವನ ಆಂತರ್ಯದ ಓಜಸ್ಸಿನಲ್ಲಿ ಧ್ವನಿಸುವಂತಾಗಬೇಕು. ಇದು ಕೇವಲ ಹೇಳಿಕೆಯಾಗದೆ ಅನುಸರಣೆ,ಅನುಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಹೊಣೆಗಾರರಾರು? ಎಂಬ ಪ್ರಶ್ನೆಗೆ ಉತ್ತರ ನಾವು ನೀವೆಲ್ಲರೂ. ಶಿಕ್ಷಣವನ್ನು  ಕೇವಲ 3E (Examination, Evaluation and Employment) ಗೆ ಮಾತ್ರ ಸೀಮಿತವಾಗಿದ್ದು ವೃತ್ತಿಯ ಹುಡುಕಾಟದಲ್ಲಿ ಅಂಕಗಳಿಕೆಯ ಆಟ ನಾಗಾಲೋಟದಲ್ಲಿ ಸಾಗುತ್ತಿದೆ. ಇತ್ತೀಚೆಗೆ ಪ್ರಕಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ನೋಡಿದಾಗ ಶೇಕಡಾ 90 ರಷ್ಟು(ಕೆಲವರಂತೂ 100 ಕ್ಕೆ 100) ಅಂಕಗಳಿಸಿ ಸಂಪ್ರಸನ್ನರಾಗಿರುವಾಗ ಶಿಕ್ಷಣ ಇಲಾಖೆ ಮೌನವಾಗಿ ತನ್ನ ಬೆನ್ನು ತಾನು ತಟ್ಟಿಕೊಳ್ಳದೆ ಬೇರೆ ವಿಧಿಯೇ ಇಲ್ಲ.

  ಪ್ರಾಥಮಿಕ ಶಿಕ್ಷಣವನ್ನು ಅಂಕ ಮುಕ್ತಗೊಳಿಸಿ ಮಕ್ಕಳಲ್ಲಿ ಒಂದಷ್ಟು ಕ್ರಿಯಾಶೀಲತೆ ಮತ್ತು ಮೌಲ್ಯಶಿಕ್ಷಣವನ್ನು ಅನುಕೂಲಿಸುವಂತೆ ಸಂಯೋಜನೆಗೊಳಿಸಿದ್ದರೂ ಅದು ಕೇವಲ ಸರ್ಕಾರಿ ಶಾಲೆಗಳಿಗಷ್ಟೇ ಸೀಮಿತವಾಗಿ ಖಾಸಗೀ ಶಾಲೆಗಳೆಂದು ಕರೆಸಿಕೊಳ್ಳುವ ಶಿಕ್ಷಣ ಕಂಪನಿಗಳು ಪೋಷಕರನ್ನು ಆಕರ್ಷಿಸಲು ರ್ಯಾಂಕುಗಳ ಮೂಟೆಯನ್ನು ಮಕ್ಕಳ ಮೇಲೆ ಹೊರಿಸಿ ನಿತ್ರಾಣಗೊಳಿಸುತ್ತಿರುವುದು ಗೊತ್ತಿರುವ ಸಂಗತಿ. ಕೇವಲ ಭಾಷಾ ವ್ಯಾಮೋಹದ ಸುಳಿಗೆ ಸಿಲುಕಿರುವ ಪೋಷಕರು ಗುಣಾತ್ಮಕ ಶಿಕ್ಷಣದ ಗೋಜಿಗೆ ಹೋಗದೆ ಸರ್ವಂ ಆಂಗ್ಲಮಯಂ ಆದೊಡೆ ನಮ್ಮ ಮಕ್ಕಳು ಯಶಸ್ಸು ಗಳಿಸಿದಂತೆಯೇ ಸರಿ ಎಂದು ಬೀಗುತ್ತಿರುವಾಗ ಶಿಕ್ಷಣ  ಇಲಾಖೆ ಮೂಖಪ್ರೇಕ್ಷಕನಂತೆ ಎಲ್ಲವನ್ನೂ ಅರಗಿಸಿಕೊಂಡು ದಿವ್ಯಮೌನಿಯಾಗಿದೆ. ವಿಶ್ವವಿದ್ಯಾಲಯಗಳ ಸ್ಥಿತಿಯೂ ಇದರಿಂದ ಹೊರತಾದುದೇನೂ ಅಲ್ಲ. ಭವಿಷ್ಯದ ಭಾರತದ ನಿರ್ಮಾತೃಗಳನ್ನು ರೂಪಿಸಬೇಕಾದ ಕಮ್ಮಟ ಶಾಲೆಗಳೆಲ್ಲ ಪದವಿ ಪ್ರದಾನಕ್ಕೆ ಸೀಮಿತವಾದಾಗ ದಾರಿಯಾವುದಯ್ಯ ಸಂಸ್ಕಾರಕೆ? ಅನ್ನದೆ ಬೇರೆ ವಿಧಿಯಿಲ್ಲ. ಸಮಾಜದಲ್ಲಿ ನೆಡೆಯುತ್ತಿರುವ ಅತ್ಯಾಚಾರ, ಭ್ರಷ್ಟಾಚಾರ, ದರೋಡೆ, ಕೊಲೆ ಇವುಗಳ ಹಿಂದೆ ಇರುವವರು ಸುಶಿಕ್ಷಿತರೇ ಅಧಿಕ ಸಂಖ್ಯೆ ಅನ್ನುವುದು ಸಮೀಕ್ಷೆಯಲ್ಲಿ ತಿಳಿದುಬಂದಿರುವ ವಿಷಯ. 

  ಹಾಗಾದರೆ ನಾವು ಎಡವಿದ್ದಾದರೂ ಎಲ್ಲಿ? ಎಡವುತ್ತಿರುವುದಾದರೂ ಎಲ್ಲಿ? ನೀತಿ ರೂಪಿಸುವಲ್ಲಿಯೋ? ನೀತಿ ಜಾರಿಗೆ ತರುವಲ್ಲಿಯೋ? ಎಂಬ ಉತ್ತರವಿರದ ಪ್ರಶ್ನೆಯನ್ನಿಡಿದು ವಿಚಾರವಂತರು ಅಲೆಯುವಂತಾಗಿದೆ. 

  ರಸ್ತೆಯಲ್ಲಿ ಚಲಿಸುವಾಗ, ಸಾರ್ವಜನಿಕರ ಮಧ್ಯೆ ಇರುವಾಗ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟಾಗುವಾಗ, ಪರಿಸರದ ಮಾಲಿನ್ಯವಾಗುವಾಗ, ದುರ್ಬಲರೊಬ್ಬರು ಕನಿಷ್ಠ ಸಹಾಯ ಯಾಚಿಸಿದಾಗ, ನವೀಕರಿಸಲಾಗದ ಸಂಪನ್ಮೂಲ ಬಳಸುವಾಗ ಸ್ಪಂದಿಸದಿರುವ ನಮ್ಮ ಮನಸ್ಸು ನಾವು ಎಷ್ಟೇ ಪದವಿ ಮೇಲೆ ಪದವಿ ಗಳಿಸಿದ್ದರೂ ಕೇವಲ ಅಕ್ಷರಸ್ಥರೆನ್ನಬಹುದಲ್ಲದೆ ಮತ್ತೇನು? ಶಿಕ್ಷಣ ನಮ್ಮ ಮನಸ್ಥಿತಿಗಳನ್ನು ಬದಲಾಯಿಸಿ ಸುಸಂಸ್ಕೃತರನ್ನಾಗಿಸಿದಾಗ ಮಾತ್ರ ನಾವು ಶಿಕ್ಷಿತರಾಗುತ್ತೇವೆ. ಈಗ ಯೋಚಿಸಿ ಶಿಕ್ಷಣ ಮತ್ತು ಸಂಸ್ಕಾರ ಎರಡಾಗದೆ ‘ಸಂಸ್ಕಾರ’ ಅನ್ನುವುದು ಶಿಕ್ಷಣದಲ್ಲಿ ಅಧ್ವೈತವಾದರೆ ಮಾತ್ರ ‘ಶಿಕ್ಷಣ’ ಎಂಬ ಪದ ಸಂಸ್ಕಾರವನ್ನೂ ಧ್ವನಿಸುತ್ತದೆ. ಇಲ್ಲದಿದ್ದರೆ ಮತ್ತೆ ನಮ್ಮೆದುರಿಗಿರುವುದು ಪರೀಕ್ಷೆ, ಪದವಿ ,ಮೌಲ್ಯಮಾಪನ……

                              ಡಾ.ಕಿರಣ್ ಸಿಡ್ಲೇಹಳ್ಳಿ

                              ಸಾಹಿತಿ ಹಾಗು ಶಿಕ್ಷಕ 

                              9481530236