ಚಿ.ಮ.ಬಿ.ಆರ್( ಮಂಜುನಾಥ ಬಿ.ಆರ್)

ಮೈಸೂರು:  ಒಂದೆಡೆ ಕೆಡುಕಾದರೆ ಇನ್ನೊಂದೆಡೆ ಒಳಿತಾಗುತ್ತಿರುತ್ತದೆ.ಇದಕ್ಕೆ ಈಗಿನ ತತ್ಸಮಾನ ಸಮಯದಲ್ಲಿ ಸಾಮಾಜಿಕ ಕಾಳಜಿ ಮತ್ತು ಸೇವೆಗಳು ಒಂದಾಂದರೊಂದಂತೆ ಮತ್ತು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಸಹಾಯ ಮತ್ತು ಸಹಕಾರಕ್ಕೆ ಮುಂದಾಗುತ್ತಿರುವುದು ಹಾಗು ದೀನರಗೆ ನೆರವಾಗುತ್ತಿರುವುದು ಸಾಕ್ಷಿಯಾಗಿದೆ.ಉದ್ಯೋಗವಿಲ್ಲ ಆದಾಯವಿಲ್ಲ ಜನರ ಹೊಟ್ಟೆಪಾಡು ತಣ್ಣೀರಿನ ಬಟ್ಟೆಯಾಗಿದೆ.ಆದರೆ ಹುಟ್ಟಿಸಿದ ಶಿವ ಹುಲ್ಲು ಮೇಯಿಸುವುದಿಲ್ಲ ಎಂಬ ಗಾದೆಯಂತೆ ಈ ರೀತಿ ಸಮಾಜ ಸೇವೆ ಮಾಡುವ ದಾನಿಗಳಿಂದ ಎಲ್ಲರ ಹೊಟ್ಟೆಗೆ ಅಲ್ಪ ಸ್ವಲ್ಪವಾದರೂ ಗಂಜಿ ಬೀಳುತ್ತಿದೆ.ಅವಶ್ಯಕ ಆಹಾರ ಪೂರೈಕೆ ಆಗುತ್ತಿದೆ.ಎಲ್ಲರಲ್ಲೂ ನಾವು ಇದ್ದೇವೆ ಎನ್ನುವ ಭರವಸೆ ಮೂಡಿಸುವ ಭಾವನೆ ಬಂದಿರುವುದು ಭವಿಷ್ಯದ ಉತ್ತಮ ನಿರ್ಮಾಣಕ್ಕೆ ಬುನಾದಿ ಆದಂತಿದೆ.ದೇಶದ ಎಲ್ಲಾ ಕಡೆ ಸಾಮಾಜಿಕ ಸಂಘಟನೆಗಳು ಹೊಸ ಹೊಸ ಯೋಜನೆಗಳೊಂದಿಗೆ ಸಮಾಜದ ಸುಧಾರಣೆಗಾಗಿ ಮತ್ತು ಸಮತೋಲನದೊಂದಿಗೆ ಸುಸ್ಥಿತಿಗೆ ಬರಲು ಹೆಚ್ಚೆಚ್ಚು ಸ್ಥಾಪನೆ ಆಗುತ್ತಿದೆ.ಜೊತೆಗೆ ಈ ಹಿಂದೆ ಇದ್ದಂತಹ ಸಂಘಟನೆಗಳೆಲ್ಲವೂ ಈ ಸಂಧರ್ಭದಲ್ಲಿ ಇನ್ನೂ ಮತ್ತಷ್ಟು ಕಾರ್ಯ ಪ್ರವೃತ್ತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಶಿಕ್ಷಣ, ಸಂಘಟನೆ, ಹೋರಾಟ ಕರೋನಾ ವಿರುದ್ಧ ಈ ಬಗೆಯಲ್ಲೂ ನಡೆಯುತ್ತಿರುವುದು ಹೆಗ್ಗುರುತಾಗಿದೆ.ಅಂಬೇಡ್ಕರ್ ಹೇಳಿದ ತತ್ವಗಳು ಕೇವಲ ಹಕ್ಕುಗಳಿಗಾಗಿ ಕಾನೂನಿನ ಸಲಹೆಗಳೊಂದಿಗೆ ಹೋರಾಡುವುದಲ್ಲ ಈ ರೀತಿಯ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವುದು ಮತ್ತು ಒಬ್ಬರಿಗೆ ಒಬ್ಬರು ನೆರವಾಗುವುದು ಕೂಡ ಹೌದು ಎಂಬುದನ್ನು ಹಲವಾರು ಸಂಘಟನೆಗಳು ನಿದರ್ಶನಯುಕ್ತವಾಗಿ ತೋರಿಸಿ ಕೊಡುತ್ತಿವೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ರೀತಿಯ ಕರೋನಾ ವಿರುದ್ಧದ ಹೋರಾಟ ಹೆಚ್ಚಾಗಿರುವುದನ್ನು ಗಮನಿಸಬಹುದು.ನಮ್ಮ ಎಡಿನ್ ಸಿನರ್ಜಿ ಮೈಸೂರು, ಮೈಸೂರಿನ ಹೆಸರಾಂತ ಮಾನವ ಸಂಪನ್ಮೂಲ ಸಂಸ್ಥೆ, ತನ್ನ ಅನನ್ಯ ಸಾಮಾಜಿಕ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿದ್ದು ಕೊರೋನದ ಮೊದಲ ಅಲೆಯ ಲಾಕ್ಡೌನ್ ಸಂದರ್ಭದಲ್ಲಿ ಮೈಸೂರಿನ ಹಲವಾರು ಪ್ರದೇಶಗಳಲ್ಲಿ ದಿನಕ್ಕೆ 1,000 ದಂತೆ ಸುಮಾರು 34 ಸಾವಿರ ಆಹಾರ ಪೊಟ್ಟಣಗಳನ್ನು ನೀಡುವ ಮುಖಾಂತರ ಸಹಾಯ ಹಸ್ತದ ರೂಪವಾಗಿ ಜೊತೆಗೆ ಅಡಿಗೆ ಸಾಮಗ್ರಿಗಳು, ಔಷಧಿಗಳು ಹಾಗೂ ಸ್ಯಾನಿಟರಿ ಪ್ಯಾಡ್ ಗಳನ್ನು ನೀಡಲಾಗಿತ್ತು. ಕೊರೋನದ ಎರಡನೆ ಅಲೆಯ ಸಂದರ್ಭದಲ್ಲೂ ಎಡಿನ್ ಸಿನರ್ಜಿ ಸಂಸ್ಥೆ ಆಹಾರ ಪೊಟ್ಟಣಗಳನ್ನು ನೀಡಲು ಪ್ರಾರಂಭಿಸಿದ್ದು 24-05-2021 ರಿಂದ ದಿನಕ್ಕೆ 250 ಆಹಾರ ಪೊಟ್ಟಣಗಳನ್ನು ನೀಡುತ್ತಿದೆ. ಈ ಸಾಮಾಜಿಕ ಕಾರ್ಯಕ್ರಮವು ಸ್ವಯಂ ಧನಸಹಾಯದಿಂದ ಪ್ರಾರಂಭವಾಗಿದ್ದು, ಕಳೆದಬಾರಿಯಂತೆ ಮೈಸೂರಿನ ಹಲವಾರು ಮಾನವ ಸಂಪನ್ಮೂಲ ಅಧಿಕಾರಿಗಳು, ಹಲವಾರು ವೃತ್ತಿಪರರು ಕೈ ಜೋಡಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಯಾರಿಗಾದರೂ ಆಹಾರ ಪೊಟ್ಟಣಗಳ ಅವಶ್ಯಕತೆ ಇದ್ದಲ್ಲಿ  ದೂರವಾಣಿಗೆ ಸಂಪರ್ಕಿಸಿ.ಇನ್ನೂ ಹೆಚ್ಚಿನ ಸಹಕಾರ ವನ್ನು ಪಡೆದುಕೊಳ್ಳಬಹುದು.

 

By admin