ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಲ್ಲೀಗ ಬಿರುಕು ಕಾಣಿಸಿಕೊಂಡಿದೆ. ಸದ್ಯಕ್ಕೆ ಕೂಟಕ್ಕೆ ಧಕ್ಕೆ ತರುವಂತಹ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಮತ್ತು ಖಜಾಂಚಿ ಜಗದೀಶ್ ಅವರನ್ನು ಕೂಟದಿಂದ ಉಚ್ಛಾಟನೆ ಮಾಡಲಾಗಿದೆ. ಮತ್ತೊಂದೆಡೆ ಇದನ್ನು ವಿರೋಧಿಸಿ ಮತ್ತಿಬ್ಬರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿದ್ದೇ ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಲ್ಲೀಗ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈಗಾಗಲೇ ಕೆಲವರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧವೇ ಹರಿಹಾಯುತ್ತಿದ್ದು, ಕೂಟದಲ್ಲಿ ಸರ್ವಾಧಿಕಾರದ ನಡೆಗಳು ಜಾಸ್ತಿಯಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದೀಗ ಕಳೆದ ಜೂನ್ 5ರಂದು ಕೂಟದಿಂದ ನಡೆಸಿದ ವಿಡಿಯೋ ಕಾನ್ಫರೆನ್ಸ್ ಕಾರ್ಯಕಾರಣಿ ಸಭೆಯಲ್ಲಿ ಕೂಟದ ಸರ್ವ ಸದಸ್ಯರು ಸರ್ವಾನುಮತದಿಂದ ಕೂಟದ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ತೆಗೆದುಕೊಂಡಿರುವ ನಿರ್ಣಯದಂತೆ ಜಂಟಿ ಕಾರ್ಯದರ್ಶಿ ಆನಂದ್ ಮತ್ತು ಖಜಾಂಚಿ ಜಗದೀಶ್ ಅವರನ್ನು ಅವರ ಹುದ್ದೆಗಳಿಂದ ವಜಾ ಮಾಡಿದ್ದು ಮತ್ತು ಕೂಟದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳ ಮೇ 16 ರಂದು ತಮಗೆ 15 ದಿನಗಳೊಳಗೆ ಉತ್ತರ ನೀಡುವಂತೆ ಕಾರಣ ಕೇಳುವ ಸೂಚನಾ ಪತ್ರ ರವಾನೆ ಮಾಡಿದ್ದು ತಾವು ವ್ಯಾಟ್ಸಪ್ ಮೂಲಕ ಉತ್ತರ ನೀಡಿದ್ದು, ತಾವು ನೀಡಿರುವ ಉತ್ತರ ಸಮಂಜಸವಾಗುವುದಿಲ್ಲ. ಹೀಗಾಗಿ ಜೂನ್ 5ರಂದು ನಡೆದ ವಿಡಿಯೋ ಕಾನ್ಫರೆನ್ಸ್ ಕಾರ್ಯಕಾರಣಿ ಸಭೆಯಲ್ಲಿ ಕೂಟದ ಸರ್ವ ಸದಸ್ಯರು ಸರ್ವಾನುಮತದಿಂದ ತಮ್ಮ ಸಂಘ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ತಮ್ಮನ್ನು ಕೂಟದ ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಯಿಂದ ವಜಾ ಮಾಡಿದ್ದು ಮತ್ತು ಕೂಟದಿಂದ ಉಚ್ಚಾಟನೆ ಮಾಡಲು ನಿರ್ಧಾರ ಮಾಡಿದೆ. ಅದರಂತೆ ಇನ್ನು ಮುಂದೆ ಕೂಟದ ಯಾವುದೇ ಕಾರ್ಯಚಟುವಟಿಕೆಗಳಲ್ಲಿ ತಾವು ಪಾಲ್ಗೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನೊಂದೆಡೆ ಸಂಘದ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಮತ್ತು ಖಜಾಂಚಿ ಜಗದೀಶ್ ಅವರನ್ನು ಉಚ್ಛಾಟನೆ ಮಾಡಿದ್ದನ್ನು ವಿರೋಧಿಸಿ ಕೂಟದ ಪ್ರಚಾರ ಸಮಿತಿ ಕಾರ್ಯದರ್ಶಿಗಳಾದ ಚೇತನ್ ರಾಜ್ ಮತ್ತು ನಾಗೇಂದ್ರ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಿದ್ದು ಅದನ್ನು ಅಂಗೀಕರಿಸಿರುವುದಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.