
ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ಇಂದು ನಗರದಲ್ಲಿ ನಡೆದ ವಿವಿಧ ಕಲಾ ತಂಡಗಳು ಹಾಗೂ ಇಲಾಖೆಗಳ ಸ್ತಬ್ದ ಚಿತ್ರಗಳ ಮೆರವಣಿಗೆ ವಿಶೇಷ ಗಮನ ಸೆಳೆಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಸೇರಿದಂತೆ ಇತರೆ ಗಣ್ಯರು ಕಲಾತಂಡಗಳು ಹಾಗೂ ಸ್ತಬ್ದ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆ ಚಾಲನೆಗೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು.
ಮೆರವಣಿಗೆಯಲ್ಲಿ ಅಲಂಕೃತ ಸಾರೋಟು ವಾಹನದಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಬಳಿಕ ಜಿಲ್ಲಾಡಳಿತ ಭವನದಿಂದ ಮೆರವಣಿಗೆ ಹೊರಟಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಚಾಮರಾಜೇಶ್ವರ ದೇವಾಲಯ ತಲುಪಿತು.
ನಂದಿಧ್ವಜ, ನಾದಸ್ವರ, ಬ್ಯಾಂಡ್‌ಸೆಟ್, ಡೊಳ್ಳುಕುಣಿತ , ನಾಸಿಕ್‌ಡೋಲ್, ಬ್ರಾಸ್ ಬ್ಯಾಂಡ್ ಸೆಟ್, ವೀರಗಾಸೆ, ಗೊರವರ ಕುಣಿತ, ಕಂಸಾಳೆನೃತ್ಯ, ಬೀಸುಕಂಸಾಳೆ, ಕೋಲಾಟ, ಸುಗ್ಗಿಕುಣಿತ, ತಮಟೆವಾದನ, ದೊಣ್ಣೆವರಸೆ, ಹುಲಿವೇ?, ಕಲಾ ತಂಡಗಳು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ನೋಡುಗರ ಗಮನ ಸೆಳೆದರು.

ವಿವಿಧ ಇಲಾಖೆಗಳು ತಯಾರಿಸಿದ ಸ್ತಬ್ದ ಚಿತ್ರ ಪ್ರದರ್ಶನ ಸಹ ಮೆರವಣಿಗೆಯ ವಿಶೇಷತೆಗಳಲ್ಲಿ ಒಂದಾಗಿತ್ತು. ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಪಲನಾ ಮತ್ತು ಪಶು ವೈದ್ಯಕೀಯ ಇಲಾಖೆ ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುವ ಸ್ತಬ್ದಚಿತ್ರಗಳ ಪ್ರದರ್ಶನ ಸಹ ಮೆರವಣಿಗೆಯಲ್ಲಿ ಇದದ್ದು ವಿಶೇಷವಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಪೋಷಣ್ ಅಭಿಯಾನ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಪೂರಕ ಪೌಷ್ಠಿಕ ಆಹಾರ, ಸಖಿ ಒನ್ ಸ್ಟಾಪ್ ಸೆಂಟರ್ ಸೇರಿದಂತೆ ಹಲವು ಮಾಹಿತಿ ನೀಡುವ ಸ್ತಬ್ದ ಚಿತ್ರ ಸಹ ಮೆರವಣಿಗೆಯಲ್ಲಿ ಇತ್ತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪಠ್ಯಪುಸ್ತಕ ವಿತರಣೆ, ಬೈಸಿಕಲ್, ಬಿಸಿಯೂಟ, ಕ್ಷೀರಭಾಗ್ಯ ಕಾರ್ಯಕ್ರಮಗಳ ಅನುಷ್ಠಾನ ಮಾಹಿತಿ ನೀಡುವ ಸ್ತಬ್ದ ಚಿತ್ರವನ್ನು ವಿಶೇಷವಾಗಿ ವಿನ್ಯಾಸಗೊಳಿಸಿತ್ತು. ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪರಿಶಿಷ್ಟ ಜನರು, ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ಚಿತ್ರ ಸಮೇತ ವಿವರಿಸುವ ಸ್ತಬ್ದ ಚಿತ್ರ ರೂಪಿಸಿತ್ತು. ಜಿಲ್ಲಾ ನಗರಾಭಿವೃದ್ದಿ ಕೋಶ ಸ್ವಚ್ಚತಾ ವಾಹಿನಿ ಹೆಸರಿನಡಿ ತಯಾರಿಸಿದ್ದ ಸ್ತಬ್ದ ಚಿತ್ರ ಪ್ರದರ್ಶನ ಸಹ ಮೆರವಣಿಗೆಯಲ್ಲಿ ಇತ್ತು. ಅರಣ್ಯ ಇಲಾಖೆ ರೋಜಾ ಕಡ್ಡಿಯಿಂದ ನಿರ್ಮಿಸಿದ್ದ ಆನೆಯ ಪ್ರತಿಕೃತಿ ಆಕರ್ಷಕವಾಗಿತ್ತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಿ.ಎನ್. ಬಾಲರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಇದ್ದರು.
