ಗುಂಡ್ಲುಪೇಟೆ: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಚರಂಡಿ ಕೊಳಚೆ ನೀರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದೊಳಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದು, ದುರ್ವಾಸನೆ ಕುಡಿದು ನಿಲ್ದಾಣದೊಳಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಮೈಸೂರು, ತಮಿಳುನಾಡು, ಕೇರಳ ತೆರಳಲು ಪ್ರತಿದಿನ ಬಸ್ ನಿಲ್ದಾಣಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಮಳೆ ಬಂದ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದೊಳಗೆ ರಸ್ತೆ ಮೇಲೆ ಹರಿಯುವ ಮಳೆ ನೀರು ಮತ್ತು ಚರಂಡಿ ಕೊಳಚೆ ನೀರು ನೇರವಾಗಿ ನುಗ್ಗಿ ಕೆರೆಯಂತೆ ಮಾರ್ಪಾಡಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದ್ದರು ಸಹ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ಹೊಸ ಚರಂಡಿಯಲ್ಲು ಹರಿಯದ ನೀರು: ಪಟ್ಟಣ ವ್ಯಾಪ್ತಿಯ ಹೆದ್ದಾರಿ ಎರಡು ಬದಿಯಲ್ಲು ಮಳೆ ಮತ್ತು ಕೊಳಚೆ ನೀರು ಹರಿದು ಹೋಗಲು ಹೊಸದಾಗಿ ಚರಂಡಿ ನಿರ್ಮಾಣ ಮಾಡಲಾಗಿತ್ತು. ಆದರೆ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕಾರಣ ಮಳೆ ನೀರು ಚರಂಡಿಗೆ ಹೋಗದೆ ರಸ್ತೆ ಮೇಲೆ ನಿಲ್ಲುವಂತಾಗಿದೆ. ಇದರಿಂದ ಕೋಟ್ಯಾಂತರ ರೂ. ಖರ್ಚು ಮಾಡಿ ನಿರ್ಮಾಣ ಮಾಡಲಾದ ಚರಂಡಿ ವ್ಯರ್ಥವಾದಂತಾಗಿದೆ.

ಶಾಸಕರೇ ಇತ್ತ ಗಮನಿಸಿ: ಮಳೆ ಬಂದ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಊಟಿ ಸರ್ಕಲ್ ಮತ್ತು ಮಡಹಳ್ಳಿ ವೃತ್ತದಲ್ಲಿ ನೀರು ಹೆಚ್ಚಿನ ರೀತಿಯಲ್ಲಿ ನಿಲ್ಲುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ಶಾಸಕ ಸಿ.ಎಸ್.ನಿರಂಜನಕುಮಾರ್ ಇತ್ತ ಗಮನ ಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಪಟ್ಟಣದ ನಿವಾಸಿಗಳು ಒತ್ತಾಯ ಮಾಡಿದ್ದಾರೆ.

ವರದಿ: ಬಸವರಾಜು ಎಸ್.ಹಂಗಳ