ಮೈಸೂರು: ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ನಿಕಟಪೂರ್ವ ಉಪ ಪ್ರಚಾರ್ಯರಾದ ಡಾ. ಪ್ರವೀಣ್ ಕುಲಕರ್ಣಿ ಅವರು ದೆಹಲಿಯ ಐಸಿಎಂಆರ್‌ನಲ್ಲಿ ವಿಜ್ಞಾನಿ–ಇ (Scientist-E) ಹುದ್ದೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸ್ಪಂದನ ಸಂಸ್ಥೆಯ ವತಿಯಿಂದ ಕುವೆಂಪುನಗರದ ಶ್ರೀ ಬಸವೇಶ್ವರ ಕೃಪದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯೊಂದಿಗೆ ಆರಂಭವಾಗಿ, ಬಿಎಸ್ಎಸ್ ವಿದ್ಯಾಲಯದ 3ನೇ ತರಗತಿಯ ವಿದ್ಯಾರ್ಥಿನಿ ಕು. ಲಕ್ಷಣ ಅವರ ಪ್ರಾರ್ಥನೆಯೊಂದಿಗೆ ಮುಂದುವರಿಯಿತು. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಮರಿಟಸ್ ಡಾ. ಗುರುಬಸವರಾಜ ಅವರು ಸ್ವಾಗತಿಸಿ ಡಾ. ಪ್ರವೀಣ್ ಕುಲಕರ್ಣಿಯವರ ಸಾಧನೆಗಳ ಬಗ್ಗೆ ವಿವರಿಸಿದರು. ಬಳಿಕ ಡಾ. ಕೆ.ಆರ್. ಕುಮಾರಸ್ವಾಮಿ ಅವರು ಅಭಿನಂದನಾ ಪತ್ರವನ್ನು ವಾಚಿಸಿದರು.
ಡಾ. ಲಕ್ಷ್ಮೀನಾರಾಯಣ, ಡಾ. ಗುರುಬಸವರಾಜ ಹಾಗೂ ಎಂ. ರಾಜು ಅವರು ಸೇರಿ ಡಾ. ಪ್ರವೀಣ್ ಕುಲಕರ್ಣಿಯವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಅವರ ಮಾತೃಶ್ರೀ ಶ್ರೀಮತಿ ಗೀತಾ ಹಾಗೂ ಧರ್ಮಪತ್ನಿ ಡಾ. ರಜನಿ ಅವರನ್ನು ಸಹ ಗೌರವಿಸಲಾಯಿತು.
ಸ್ಪಂದನ ಅಧ್ಯಕ್ಷ ಎಂ. ಜಯಶಂಕರ್ ಅವರು ಮಾತನಾಡಿ, ಅಲ್ಪವಯಸ್ಸಿನಲ್ಲೇ 186 ಸಂಶೋಧನಾ ಪ್ರಕಟಣೆಗಳನ್ನು ಪ್ರಕಟಿಸಿರುವುದು, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಯೋಜನೆಗಳಲ್ಲಿ ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್ ಆಗಿ ಕಾರ್ಯನಿರ್ವಹಿಸಿರುವುದು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಡಾ. ಪ್ರವೀಣ್ ಕುಲಕರ್ಣಿಯವರು ಗಮನಾರ್ಹ ಸಾಧನೆ ಮಾಡಿರುವುದನ್ನು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರವೀಣ್ ಕುಲಕರ್ಣಿ ಅವರು ಐಸಿಎಂಆರ್‌ನಲ್ಲಿ ವಿಜ್ಞಾನಿ–ಇ ಹುದ್ದೆಗೆ ಆಯ್ಕೆಯಾಗಲು ಜೆಎಸ್ಎಸ್ ಸಂಸ್ಥೆಯ ಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಹಾಗೂ ಸಂಸ್ಥೆಯ ಪ್ರೋತ್ಸಾಹವೇ ಕಾರಣವಾಗಿದೆ ಎಂದು ತಿಳಿಸಿದರು. ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಡಾ. ಹೆಚ್. ಬಸವನಗೌಡಪ್ಪ, ಡಾ. ಬಿ. ಮಂಜುನಾಥ್ ಸೇರಿದಂತೆ ಹಲವು ಗಣ್ಯರನ್ನು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮೀನಾರಾಯಣ, ಡಾ. ಎಸ್.ಎಂ. ಪ್ರಭುಲಿಂಗಸ್ವಾಮಿ, ಡಾ. ಕೆ.ಆರ್. ಕುಮಾರಸ್ವಾಮಿ, ಡಾ. ಎಸ್. ಸುಂದರ್ ರಾಜನ್, ಡಾ. ಸುಧಾಕರ್, ಡಾ. ಶಿವಪ್ರಕಾಶ್, ಡಾ. ವೆಂಕಟೇಶ್ ಸೇರಿದಂತೆ ಅನೇಕ ವೈದ್ಯರು ಹಾಗೂ ಆಹ್ವಾನಿತರು ಭಾಗವಹಿಸಿದ್ದರು. ಅರುಣ್ ಅವರು ವಂದಿಸಿದರು.
