ಕಾಲತ್ರಯದ ಮಹಿಮೆಯನ್ನು ಬಲ್ಲವರಾರು, ಅಂದು ಮನೆಯೊಳಗೆಯೇ ತಲೆ ಎತ್ತಿ ಮಾತನಾಡದ ಮಹಿಳೆ ಇಂದು ಜಗತ್ತೇ ತಲೆ ಎತ್ತಿ ತನ್ನನ್ನು ನೋಡುವಂತೆ ತನ್ನ ಮಹಿಳಾ ಶಕ್ತಿಯನ್ನು ಹೊಗಳುವಂತೆ ಬೆಳೆದು ನಿಂತಿದ್ದಾಳೆ. ಕಾಲಘಟ್ಟಕ್ಕಾದ ಅಸಾಧಾರಣ ಮಹಿಳೆಯರನ್ನು ಸರತಿಸಾಲಿನಂತೆ ಭೂತ, ವರ್ತಮಾನವನ್ನು ಅವಲೋಕಿಸಿದಾಗ ವೇದದ ಮೈತ್ರೇಯಿ,ಗಾರ್ಗಿ,ವಚನ ಚಳುವಳಿಯ ಕವಯಿತ್ರಿ ಅಕ್ಕಮಹಾದೇವಿ. ಶಿಕ್ಷಣ ಭೂಮಿಕೆಯಾದ ಸಾವಿತ್ರಿಬಾಯಿ ಪುಲೆ ಹೋರಾಟಕ್ಕೆ ಸೀರೆ ಸುತ್ತಿ ಗಚ್ಚುಗತ್ತಿ ಹಿಡಿದ ಕಿತ್ತೂರು ರಾಣಿ ಚೆನ್ನಮ್ಮ , ದುರ್ಗದ ಓಬವ್ವ ಒಬ್ಬರೇ ಇಬ್ಬರೇ ಸಹಸ್ರ ಮಹಿಳೆಯರು ಸಮಾಜದ ಮುಖ್ಯಸ್ತರದಲ್ಲಿ ನಮ್ಮ ಭಾರತದ ಹಿರಿಮೆಯನ್ನು ಇತಿಹಾಸವನ್ನು ಅದಮ್ಯವಾಗಿ , ಅನನ್ಯವಾಗಿ, ಆಗಸದಷ್ಟು ವಿಶಾಲವಾಗಿ ಎತ್ತಿ ಹಿಡಿದಿದ್ದಾರೆ,

ಭವ್ಯ ಭಾರತದ ಸ್ವಾತಂತ್ರ್ಯದ ನಂತರದಲ್ಲಿ ಮಹಿಳೆಯರ ಪಾತ್ರವೇ ಇಲ್ಲದ ಕ್ಷೇತ್ರವಿಲ್ಲದಂತಾಗಿ ಎಲ್ಲೆಡೆಯೂ ಗೌರವಪೂರ್ಣ ಭಾಗವಹಿಸುವಿಕೆ ಮಹಿಳೆಯರದ್ದಾಗಿದೆ. ರಾಜಕೀಯಕ್ಕೆ ಇಂದಿರಾಗಾಂಧಿ, ಸಮಾಜಕ್ಕೆ ಮದರ್ ತೆರೇಸಾ, ಸಂಗೀತಕ್ಕೆ ಗಂಗೂಬಾಯಿ  ಹಾನಗಲ್, ಕ್ರೀಡೆಗೆ ಪಿ.ಟಿ.ಉಷಾ, ವಿಜ್ಞಾನಲೋಕಕ್ಕೆ ಕಲ್ಪನಾ ಚ್ಹಾವ್ಲಾ, ಸಾಹಿತ್ಯಕ್ಕೆ ಗೀತಾ ನಾಗಭೂಷಣ್, ಸಿನಿಮಾ, ಪತ್ರಿಕೋದ್ಯಮ, ಆಧ್ಯಾತ್ಮಿಕತೆ ಹೀಗೆ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರ ಸಹಭಾಗಿತ್ವ ಲೆಕ್ಕವಿಲ್ಲದಷ್ಟಾಗಿದೆ. ಇಷ್ಟೆಲ್ಲಾ ಪೀಠಿಕೆ ನನ್ನ ಮನದಾಳದ ಮಹಿಳಾ ಸಮುದಾಯದ ಮೇಲಿನ ಅವರ ಸಾಧನೆಯ ಪರವಾಗಿ ಗೌರವಾರ್ಥ ಸ್ಮರಣೆ. ಇಂಥದೇ ಸ್ಮರಣೆಗೆ ಪ್ರಸ್ತುತ ಮುಂಚೂಣಿಯಲ್ಲಿರುವ ಡಾ.ಕೆ.ಲೀಲಾಪ್ರಕಾಶ್ ಕೂಡ ಒಬ್ಬರು. ಇವರು ತ್ರಿಭಾಷಾ ಪಂಡಿತರು ಮಾತೃಭಾಷೆಯಾದ ಕನ್ನಡದಲ್ಲಿ ಸಾಹಿತ್ಯ ಕೃಷಿಯನ್ನು ಕೈಗೊಂಡರೆ ಸಂಸ್ಕೃತ ಭಾಷೆಯಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ.

ಆಂಗ್ಲಭಾಷೆಯಲ್ಲಿ ದೇಶಿಯ ಸಂಸ್ಕೃತಿಯನ್ನು ಹಾಗೂ ವಿದ್ವತ್ತನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅಂತಾರಾಷ್ಟ್ರೀಯ ವಿಚಾರಧಾರೆಗಳನ್ನು ಕನ್ನಡದ ಮೂಲಕ ಸಾಹಿತ್ಯ ಭೂಮಿಕೆಯಲ್ಲಿ ಬಿತ್ತನೆಮಾಡಿದ್ದಾರೆ ಉತ್ತಮ ಫಲವನ್ನು ಗಳಿಸಿಕೊಟ್ಟಿದ್ದಾರೆ. ಇಷ್ಟೆಲ್ಲಾ ಸಾಧನೆಯ ಪುರಸ್ಕೃತರಾದ ಇವರು ಬಿರುದಗಳ ಮಹಿಳಾ ಸಾಮ್ರಾಜ್ಞಿಯಾಗಿದ್ದಾರೆ. ವಿದ್ಯಾನಿಧಿ, ಸಾಹಿತ್ಯ ಸೇವಾರತ್ನ, ಸಾಹಿತ್ಯ ಸರಸ್ವತಿ ಹಾಗು ಚಾಣಕ್ಯ ಶ್ರೀ ಎಂಬಿತ್ಯಾದಿ ಘನ ಬಿರುದುಗಳ ಗಣಿಯಾದ ಇವರು ಹುಟ್ಟಿದ್ದು ಫೇಡಾನಗರಿ ಧಾರವಾಡದಲ್ಲಿ ಏಪ್ರಿಲ್ ೧೮,೧೯೬೦ರಂದು. ಇವರ ತಂದೆ ಕನ್ನಡ ನಾಡಿನ ಮೇರು ತ್ರಿಭಾಷಾ ಪಂಡಿತರಾಗಿದ್ದ ಜ್ಞಾನದ ಹೊನ್ನು ಡಾ.ಕೆ.ಕೃಷ್ಣಮೂರ್ತಿ. ತಾಯಿ ಸರೋಜಮ್ಮ ಇವರಿಬ್ಬರ ಹೆಮ್ಮೆಯ ಪುತ್ರಿ ಇವರು. ಧಾರವಾಡದಲ್ಲಿಯೇ ಡಾ.ಕೆ ಲೀಲಾಪ್ರಕಾಶ್ ಅವರು ಬಾಲ್ಯಶಿಕ್ಷಣದಿಂದ ಹಿಡಿದು ಪದವಿಯವರೆಗೂ ಶಿಕ್ಷಣಾಭ್ಯಾಸ ಪಡೆದುಕೊಡರು. ಕಾಲೇಜು ಮಟ್ಟದಲ್ಲಿ ಮನಃಶಾಸ್ತ್ರ, ತರ್ಕಶಾಸ್ತ್ರ, ಸಂಸ್ಕೃತವನ್ನು ಪ್ರಮುಖ ವಿಷಯಗಳನ್ನಾಗಿ ಅಭ್ಯಸಿಸಿ, ವಿಶ್ವವಿದ್ಯಾನಿಲಯಕ್ಕೆ ೭ನೇ ಸ್ಥಾನವನ್ನು ಪಡೆದರು.೧೯೮೪-೮೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕೃತ ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎರಡು ಚಿನ್ನದ ಪದಕ ಹಾಗು ನಗದು ಬಹುಮಾನವನ್ನು ಪಡೆದರು.

ಇವರ ವಿಶ್ವ ಮಟ್ಟದ ಜ್ಞಾನಕ್ಕೆ ಉದಾಹರಣೆ ಎಂದರೆ ಇವರು ಸಂಶೋಧಕಿ ಆಗಿದ್ದಾಗ ೧೯೯೬ ರಲ್ಲಿ Rudrast’s Kavyalankara an Estimate. ಎಂಬ ಸಂಶೋಧನಾ ಪ್ರಬಂಧಕ್ಕೆ ಡಾ.ಕೆ ಕೃಷ್ಣಮೂರ್ತಿ ಚಿನ್ನದ ಪದಕ (ಮೊದಲ ಅಭ್ಯರ್ಥಿ) ಮತ್ತು ಸಿ.ಆರ್.ನರಸಿಂಹ ಶಾಸ್ತ್ರಿ ನಗದು ಬಹುಮಾನ ಪಡೆದಿದ್ದಾರೆ ಹಾಗೂ ಈ ಸಂಶೋಧನಾ ಪ್ರಬಂಧವನ್ನು ಅಮೇರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದ ಹೆಸರಾಂತ ಪ್ರಾಧ್ಯಾಪಕರಾದ ಡಾ.ಷೆಲ್ಡಾನ್ ಪೊಲಾಕ್ ಮತ್ತು ಭಾರತದ ಖ್ಯಾತ ಸಂಶೋದಕಿ ಪುಣೆಯ ಡಾ. ಸರೋಜಾ ಭಾಟೆಯವರಿಂದ ಪರಿವೀಕ್ಷಿಸಲ್ಪಟ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ೨೦೦೭-೨೦೧೦ ರವರೆಗೆ ಮನಃಶಾಸ್ತ್ರ ವನ್ನು ಅಭ್ಯಸಿಸಿ ಸ್ನಾತಕೋತ್ತರ ಪದವಿಯನ್ನು ಪ್ರಥಮಸ್ಥಾನದಲ್ಲಿ ದೀಕ್ಷಕೃತರಾಗಿದ್ದಾರೆ. ೨೦೧೦ ಏಪ್ರಿಲ್ ೧೬ ರಂದು ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ (ರಿ) ಪ್ರಾರಂಭಿಸಿ ನಿರ್ದೇಶಕರಾಗಿ ಸೇವೆಯಲ್ಲಿ ನಿರತರಾಗಿದ್ದಾರೆ.

ಇವರು ಸ್ವಗೃಹದಲ್ಲಿ ೫೦ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಮನೆಯನ್ನೇ ಗ್ರಂಥಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇವರ ಪುಸ್ತಕ ಪ್ರೇಮಕ್ಕೆ ಇದೊಂದು ದೊಡ್ಡ ನಿದರ್ಶನ. ಯಾರೇ ಸಾಹಿತ್ಯಾಸಕ್ತರು ಇವರ ಮನೆಗೆ ಹೋದರೆ ಸಾಹಿತ್ಯ ಲೋಕವೇ ತೆರೆದುಕೊಂಡಂತೆ ಅನುಭವವನ್ನು ಪಡೆಯುತ್ತಾರೆ. ಸಂಶೋಧಕರಿಗೆ ಸಾಕಷ್ಟು ಅಧ್ಯಯನ ಶೀಲತೆಗೆ ಇವರ ಸಾಹಿತ್ಯ ಸಂಪತ್ತಿನ ಸಂಪಾದಕತ್ವ ಬಹುದೊಡ್ಡ ಉಡುಗೊರೆಯಾಗಿದೆ. ಇವರು ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ಬಹುಮುಖ ಅಭಿವ್ಯಕ್ತಿ ಗೋಚರವಾಗುತ್ತದೆ. ಇವರ “ಅದ್ವೈತದ ಅನುಭಾವಿ ಶ್ರೀ ಶಂಕರರ ಸಿದ್ಧಾಂತ” ಮತ್ತು “ರಾಮಾಯಣದ ಸಾರ್ವಕಾಲಿಕ ಪ್ರಸ್ತುತಿ” ಆಧ್ಯಾತ್ಮಿಕ ಲೇಖನಗಳು ನಾಸ್ತಿಕನಿಗೆ ಆಸ್ತಿಕತ್ವದ ಪ್ರಾಯೋಗಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ. ಇವರ “ಹೆಣ್ಣು ಮಕ್ಕಳ ಶಿಕ್ಷಣದಿಂದ ಮಾತ್ರವೇ ಸಮಾಜದ ಉದ್ಧಾರ ಸಾಧ್ಯ” ಎನ್ನುವ ಲೇಖನ  ಹೆಣ್ಣಿನ ಶಿಕ್ಷಣ ಶ್ರೇಯೋಭಿಲಾಷೆಗೆ ಹಿಡಿದ ಕನ್ನಡಿಯಂತಿದೆ.”

ಸಾಹಿತ್ಯ ಮತ್ತು ಸಂಗೀತ” ಎನ್ನುವ ಲೇಖನದಲ್ಲಿ ಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಮಾತೃ, ಪಿತೃ ಸಂಬಂಧವನ್ನು ಪ್ರಸ್ತುತಪಡಿಸಿದ್ದಾರೆ ಹಾಗೂ ಸಂಗೀತವು, ಸಾಹಿತ್ಯವು ಒಂದು ಮನೋ ಚಿಕಿತ್ಸಕ ಮದ್ದು ಎನ್ನುವ ನಿಲುವನ್ನು ತಿಳಿಸಿದ್ದಾರೆ.  ಕನ್ನಡ ಭಾಷೆಯ ಚಾರಿತ್ರಿಕ ಸಾಹಿತ್ಯದಲ್ಲಿ ಸಂಸ್ಕೃತದ ಕೊಡುಕೊಳ್ಳುವಿಕೆಯ ಮುಖ್ಯಾರ್ಥವಾಗಿ ಇವರ ಸಂಶೋಧನೆ ಪ್ರಮುಖವಾಗಿದೆ.” ಸಂಸ್ಕೃತ ಕವಿಗಳ ಸೌಂದರ್ಯ ಪ್ರಜ್ಞೆ ” ಮತ್ತು “ಸತ್ಯಂ ಶಿವಂ ಸುಂದರಂ ಸೌಂದರ್ಯ ಮಿಮಾಂಸೆಯ ಬಗ್ಗೆ ಸವಿಮರ್ಶೆ” ಹಾಗೂ “ಕಾಳಿದಾಸ, ಪಂಪ ಪಾತ್ರಪರಿಚಯ” ಹೀಗೆ ಇನ್ನೂ ಹಲವು ಲೇಖನಗಳು ಕನ್ನಡ ಭಾಷೆ ಮತ್ತು ಸಾಹಿತ್ಯ ಸಂಸ್ಕೃತದ ಅಡಿಪಾಯದಲ್ಲಿ ಭವ್ಯಕಟ್ಟಡವಾಗಿ ನೆಲೆನಿಂತ ಸನ್ನಿವೇಶಗಳನ್ನು ದಾಖಲಾಂಶಗಳ ಸಮೇತ ಪ್ರಕಟಗೊಂಡಿವೆ. ಇವರು ಸಾಹಿತ್ಯ ಕೃಷಿಯಲ್ಲಿ ಎಲ್ಲಾ ವಿಧವಾಗಿಯೂ ತೊಡಗಿಸಿಕೊಂಡಿದ್ದಾರೆ.

“ಜೀವನ ಸಂಜೀವನ”ಎನ್ನುವ ಆಂಗ್ಲಾನುವಾದ. “ಭುವಿಗಿಳಿದ ಸ್ವರ್ಗ” ಎನ್ನುವ ಪ್ರವಾಸ ಕಥನ. “ವಿಮಲಾ” ಎನ್ನುವ ಕಾದಂಬರಿ. “ಅನಿವಾಸಿ ಹಾಗೂ ಇತರ ಕಥೆಗಳು” ಎನ್ನುವ ಸಣ್ಣ ಕಥೆಗಳು. “ಚಿಂತನ-ಚಿತ್ತಾರ” ಎನ್ನುವ ಚಿಂತನ-ಮಂಥನ ವಿಚಾರಧಾರೆ.”ಚುಟುಕು-ಗುಟುಕು” ಎನ್ನುವ ಚುಟುಕುಗಳು. “ಜನಕನಂದಿನಿ ನಾನಲ್ಲವೇ?” ಎನ್ನುವ ನಾಟಕ ಕೃತಿ. “ಪರಿವರ್ತನೆ ” ಎನ್ನುವ ರೇಡಿಯೋ ಕಿರು ನಾಟಕ. “ಕನ್ನಡ ಭಗವದ್ಗೀತಾ ” ಎನ್ನುವ ಅನುವಾದ. “ಸಂಸ್ಕಾರ ವಾಹಿನಿ” ಎನ್ನುವ ಸಂಸ್ಕಾರ ಸಂಸ್ಕೃತಿಯ ಅಭಿವ್ಯಕ್ತಿ. “ಸಮಗ್ರ ಸಂಸ್ಕೃತ ವ್ಯಾಕರಣ” ಎನ್ನುವ ವ್ಯಾಕರಣ ಗ್ರಂಥ. “ವಿವಿಡ್ ವಿಷನ್” ಇಂಗ್ಲೀಷ್ ಭಾಷೆಯ ವಿದ್ವಲ್ಲೇಖನಗಳ ಸಂಗ್ರಹ. ಡಾ.ಕೆ.ಕೃಷ್ಣಮೂರ್ತಿ (ರಿ)ದಿಂದ ಪ್ರಕಟವಾದ ಕೃತಿಗಳು ಪ್ರಧಾನ ಸಂಪಾದಕರಾಗಿ ಡಾ.ಕೆ.ಲೀಲಾಪ್ರಕಾಶ್ ಇವರೇ “ವಾಮನನ ಕನ್ನಡ ಕಾವ್ಯಾಲಂಕಾರ ಸೂತ್ರವೃತ್ತಿ”,” ಕ್ಷೇಮೇಂದ್ರನ ಕನ್ನಡ ಕವಿ ಕಂಠಾಭರಣ” ಇನ್ನೂ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ.

ಹೀಗೆ ಹೇಳುತ್ತಾ ಹೋದರೆ ನೂರು ಪುಟಗಳಿಗೂ ಮೀರುವ ಇವರ ಸಾಹಿತ್ಯಿಕ ಶ್ರಮದ ವಿವರಣೆ ಸಿಗುತ್ತದೆ. ಅಮೇರಿಕೆಯ ಅಕ್ಕ ಸಮ್ಮೇಳನದಲ್ಲಿ  ಡಾ.ಚಂಪಾರೊಂದಿಗೆ ಸಂವಾದ ಹಾಗೂ ಅಖಿಲ ಭಾರತ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ.ಸುಧಾಮೂರ್ತಿ ಅವರೊಂದಿಗೆ ಸಂವಾದದ ನಿಟ್ಟಿನಲ್ಲಿ ಗಣ್ಯ ಸ್ಥಾನವನ್ನು ನಿಭಾಯಿಸಿದ್ದಾರೆ. ಜೊತೆಗೆ ಹಲವು ಹಿರಿಯ ಸಾಹಿತಿಗಳಾದ ನಾಡೋಜ ದೇ.ಜ.ಗೌ, ಡಾ.ಸಿ.ಪಿ.ಕೆ, ಡಾ. ಮಳಲಿ ವಸಂತಕುಮಾರ್, ಸಿ. ಎಸ್ ಮಂಗಳಮ್ಮ, ಮೈಸೂರು ರಂಗನಾಥ ಮುಂತಾದ ವಿವಿಧ ಸಾಹಿತಿಗಳ ೪೫ ಕ್ಕಿಂತಲೂ ಹೆಚ್ವಿನ ಕೃತಿಗಳನ್ನು ಸಂಪಾದಿಸಿದ್ದಾರೆ. ಸಂಸ್ಕೃತದಿಂದ ೧೦ ಕವನಸಂಕಲನಗಳನ್ನು ಮತ್ತು ೧೦ ನಾಟಕಗಳನ್ನು ಅನುವಾದಿಸಿದ್ದಾರೆ. ಡಾ ಕೆ. ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನದಿಂದ ಪ್ರಕಟವಾದ ೪೫ಕ್ಕಿಂತ ಹೆಚ್ಚಿನ ಕೃತಿಗಳಿಗೆ ಮುನ್ನುಡಿಯನ್ನು ಬರೆದುಕೊಟ್ಟಿದ್ದಾರೆ. ೬೦ಕ್ಕಿಂತ ಹೆಚ್ಚು ಕೃತಿಗಳನ್ನು ೧೦೦ಕ್ಕಿಂತ ಹೆಚ್ಚು ಲೇಖನಗಳನ್ನು ಮಂಡಿಸಿದ್ದಾರೆ. ರೇಡಿಯೋ, ದೂರದರ್ಶನದಲ್ಲಿ ಭಾಗವಹಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ರಾಮಾಯಣ ಭಗವದ್ಗೀತೆಯ ಬಗ್ಗೆ ನಿತ್ಯ ನಿರಂತರ ದೇಶ ವಿದೇಶಗಳಲ್ಲಿ ಪ್ರವಚನ ನೀಡಿದ್ದಾರೆ.

 ೨೨ ವರ್ಷಗಳ ಕಾಲ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ೬೦ ವಸಂತ ತುಂಬಿರುವ ಅವರಿಗೆ ನಾಡಿನ ಉದ್ದಾಮ ಸಾಹಿತಿಗಳೆಲ್ಲ  ಸೇರಿ  ಲೀಲಾಭಾರತೀ ಎಂಬ ಷಷ್ಟ್ಯಬ್ದ ಅಭಿನಂದನಾ ಗ್ರಂಥವನ್ನು  ಅವರಿಗೆ ಅರ್ಪಿಸಿರುವುದು ಅವರ ಪ್ರತಿಭೆಗೆ  ಸಾಕ್ಷಿಯಾಗಿದೆ. ಹೀಗೆ ಬಿಡುವಿಲ್ಲದೆ ನಿರಂತರವಾಗಿ ಬಹುಮುಖ ಕ್ಷೇತಗಳಲ್ಲಿ ಸಾಹಿತ್ಯದ ಬೇರನ್ನು ಭದ್ರವಾಗಿ ನೆಲೆಗೊಳಿಸುತ್ತಿರುವ ಇವರ ಸಾಧನೆಯ ಕರಿತು ನಾನಿಷ್ಟು ಬರೆದಿರುವುದು ಕೇವಲ ಸಾಸಿವೆಯಷ್ಟು. ಇನ್ನೂ ಅದೆಷ್ಟೋ ಬೆಟ್ಟದಷ್ಟು ಅವರ ಕಾಯಕ ಸಾಗುತ್ತಿದೆ. ಮಹಿಳಾ ಸಮುದಾಯವನ್ನು ಪ್ರತಿನಿಧಿಸಿ ಉನ್ನತ ಹಂತಕ್ಕೆ ಏರುತ್ತಿರುವ ಇವರ ಶ್ರೇಯಸ್ಸು ಇನ್ನೂ ಉಜ್ವಲವಾಗಲಿ

.

ಚಿ..ಬಿ.ಆರ್(ಮಂಜುನಾಥ ಬಿ.ಆರ್)

ಯುವಸಾಹಿತಿ,ವಿಮರ್ಶಕ,ಸಂಶೋಧಕ

 ಹೆಚ್.ಡಿ.ಕೋಟೆ ಮೈಸೂರು.888468 4726