
ಚಾಮರಾಜನಗರ: ಹಲವು ಮಹತ್ವದ ಇಲಾಖೆಗಳ ಸಚಿವ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸಿದ ಡಾ. ಬಾಬುಜಗಜೀವನ್ ರಾಮ್ ಅವರು ಸಂಶೋಧನೆ, ವಿಜ್ಞಾನ, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಇಲಾಖೆಯ ಕಾರ್ಯ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ನ್ಯಾಯ ತಂದು ಕೊಟ್ಟರು ಎಂದು ಚಿತ್ರದುರ್ಗದ ಆದಿಜಾಂಬವ ಮಹಾಸಂಸ್ಥಾನ ಮಠದ, ಕೋಡಿಹಳ್ಳಿ ಶ್ರೀಮದ್ ಕಡಪ ಸಿಂಹಾಸನದ ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ ಅವರು ತಿಳಿಸಿದರು.

ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ೧೧೫ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕ, ರಕ್ಷಣಾ ಸೇರಿದಂತೆ ಹಲವು ಮಹತ್ವದ ಖಾತೆಗಳನ್ನು ಡಾ. ಬಾಬುಜಗಜೀವನ್ ರಾಮ್ ಅವರು ಪರಿಪೂರ್ಣವಾಗಿ ಹಾಗೂ ದಕ್ಷತೆಯಿಂದ ನಿರ್ವಹಣೆ ಮಾಡಿದರು. ಆಳವಾದ ಅಧ್ಯಯನದಿಂದಾಗಿ ಬದುಕಿನ ಹೆಜ್ಜೆಯಲ್ಲಿ ವಿಶೇಷವಾಗಿ ಗಮನ ಸೆಳೆದ ಬಾಬೂಜಿ ಅವರು ಹಸಿವಿನ ಬವಣೆ ನೀಗಲು ಜಾರಿಗೆ ತಂದ ಕ್ರಮಗಳಿಂದ ಹಸಿರು ಕ್ರಾಂತಿಯ ಹರಿಕಾರರು ಎನಿಸಿಕೊಂಡರು ಎಂದರು.
ಯಾವ ವ್ಯಕ್ತಿ ಜನರ ಮನಸ್ಸಿನಲ್ಲಿ ಉಳಿಯಲಿದ್ದಾರೊ ಅವರೇ ಸಾಧಕರು, ಸುಧಾರಕರು ಆಗಿರುತ್ತಾರೆ. ಬದುಕಿನ ಸಾರ್ಥಕತೆಯ ಹೆಜ್ಜೆ ಮೂಡಿಸಬೇಕು. ಅಂತಹವರಲ್ಲಿ ಬಾಬುಜಗಜೀವನ್ ರಾಮ್ ಅವರು ಸಹ ಪ್ರಮುಖರು ಆಗಿದ್ದಾರೆ. ಬಾಬುಜಗಜೀವನ್ ರಾಮ್ ಅವರು ರಾಜ ನೀತಿಜ್ಞರು, ಸಮಾಜ ಸುಧಾರಕರು ಆಗಿದ್ದಾರೆ ಎಂದು ಷಡಕ್ಷರಮುನಿ ದೇಶೀಕೇಂದ್ರ ಸ್ವಾಮಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಮಾಜದ ಉನ್ನತಿಗೆ ದುಡಿದ ಮಹನೀಯರ ವಿಚಾರಗಳು ಹಾಗೂ ಆದರ್ಶಗಳನ್ನು ತಿಳಿಯಬೇಕಿದೆ. ಬಾಬು ಜಗಜೀವನ್ ರಾಮ್ ಅವರ ಸೇವೆ ಸಾಧನೆಗಳನ್ನು ಅರಿಯಬೇಕಿದೆ. ಸಮಾಜದಲ್ಲಿ ಮೇಲು ಕೀಳು ಭಾವನೆ ತೊಡೆದು ಸಮಾನತೆ ಮೂಡಿಸುವ ನಿಟ್ಟಿನಲ್ಲಿ ಎಲ್ಲರು ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಬಾಬುಜಗಜೀವನ್ ರಾಮ್ ರವರು ದಲಿತರ ವಿಮೋಚನೆಗಾಗಿ ೧೯೩೫ರಲ್ಲಿ ಹರಿಜನ ಸೇವಕ ಸಂಘ ಸ್ಥಾಪಿಸಿದರು. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದರು. ಅಸ್ಪೃಶ್ಯತೆ ನಿರ್ಮೂಲನೆಗೂ ಶ್ರಮಿಸಿದರು. ಸಮಾಜ ಸೇವೆಯಲ್ಲೂ ತೊಡಗಿದ್ದ ಧೀಮಂತ ನಾಯಕ ಬಾಬುಜಗಜೀವನ್ ರಾಮ್ ಅವರು ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಬೆಂಗಳೂರು ವಿವಿಯ ಡಾ. ಬಾಬುಜಗಜೀವನ ರಾಮ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಪ್ರೊ. ಡಾ. ಬಿ. ಗಂಗಾಧರ್ ಅವರು ಮಾತನಾಡಿ, ಬಾಬು ಜಗಜೀವನ್ ರಾಮ್ ಅವರು ಪ್ರಾಮಾಣಿಕತೆ, ನಿಷ್ಠೆ, ತ್ಯಾಗದಿಂದ ದೇಶದಲ್ಲಿ ಸ್ಥಾನ ಮಾನಗಳನ್ನು ಗಟ್ಟಿಗೊಳಿಸಿಕೊಂಡರೆ ಹೊರತು ಸ್ವಾರ್ಥದಿಂದಲ್ಲ. ದೇಶಕ್ಕಾಗಿ ಇಡೀ ಜೀವನವನ್ನೇ ಅರ್ಪಿಸಿದರು ಎಂದರು.
ಬರಗಾಲ ಸಂದರ್ಭದಲ್ಲಿ ದೇಶಕ್ಕೆ ಆತಂಕ ಒದಗಿದ ಸನ್ನಿವೇಶದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರು ಸಮಸ್ಯೆಗಳಿಗೆ ಉತ್ತಮ ಪರಿಹಾರ ದೊರಕಿಸಿ ಕೊಡುವ ಮೂಲಕ ದಕ್ಷರೆಂದು ತೋರಿಸಿಕೊಟ್ಟಿದ್ದಾರೆ. ಸ್ವ ಶಕ್ತಿಯಿಂದ ಬೆಳೆದು ಸಂಘಟನಾ ಸಾಮರ್ಥ್ಯದಿಂದ ಗಮನ ಸೆಳೆದರು. ಸ್ವ ಹಿತಾಸಕ್ತಿ ಲಾಭ ಮರೆತು ದೇಶದ ಹಿತಕ್ಕಾಗಿ ನಿಂತವರು. ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ದಿನಗಳಲ್ಲೂ ದೇಶಕ್ಕಾಗಿ ದುಡಿದ ಚೇತನ ಡಾ. ಬಾಬುಜಗಜೀವನ್ ರಾಮ್ ಅವರು ಎಂದು ಪ್ರೊ. ಡಾ. ಬಿ. ಗಂಗಾಧರ್ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆ ಮಾಡಿ ಹೆಚ್ಚು ಚಿನ್ನದ ಪದಕ ಮತ್ತು ನಗದು ಬಹುಮಾನ ಗಳಿಸಿದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಹದೇವಸ್ವಾಮಿ ಹಾಗೂ ತೇಜಸ್ವಿನಿ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ, ನಗರಸಭಾ ಸದಸ್ಯರಾದ ಮಹದೇವಯ್ಯ, ಬಸವಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರೇಮ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಹೆಚ್.ಸಿ. ಭಾಗೀರಥಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಸಮಾರಂಭಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಡಾ. ಬಾಬುಜಗಜೀವನ್ ರಾಮ್ ಅವರ ಭಾವಚಿತ್ರದ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಬಳಿಕ ಕಲಾತಂಡಗಳೊಂದಿಗೆ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ಗಮನಸೆಳೆಯಿತು.
