ಹಾಸನ: ವಿವಾಹವಾಗಿ ತಿಂಗಳು ತುಂಬುವ ಮೊದಲೇ ನವವಿವಾಹಿತ ಪತಿ ಮತ್ತು ಮನೆಯವರ ವರದಕ್ಷಿಣೆ ದಾಹಕ್ಕೆ ಬಲಿಯಾದ ಘಟನೆ ಅರಸೀಕೆರೆ ತಾಲ್ಲೂಕಿನ ಮಾಲೇಕಲ್ಲು ತಿರುಪತಿ ಗ್ರಾಮದಲ್ಲಿ ನಡೆದಿದೆ.

ಭವ್ಯ(19) ಎಂಬಾಕೆಯೇ ಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ಬಲಿಯಾದ ದುರ್ದೈವಿ. ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಮೇಳೇನಹಳ್ಳಿ ಗ್ರಾಮದ ನಿವಾಸಿ ಮಹೇಶ್ ಎಂಬುವರ ಪುತ್ರಿಯಾದ ಭವ್ಯಳನ್ನು ಮಾಲೇಕಲ್ಲು ತಿರುಪತಿ ಗ್ರಾಮದ ಮಲ್ಲಿಕಾರ್ಜುನ  ಎಂಬುವರ ಪುತ್ರ ಜಗದೀಶ್ ಗೆ ಮೇ. 31ರಂದು ಮದುವೆ ಮಾಡಿ ಕೊಡಲಾಗಿತ್ತು.

ಆದರೆ ವರದಕ್ಷಿಣೆ ದಾಹ ಹೊಂದಿದ್ದ ಗಂಡ ಜಗದೀಶ್ ಮನೆಯವರು ಮದುವೆಯಾದ ದಿನದಿಂದಲೇ ವರದಕ್ಷಿಣೆ ತರುವಂತೆ ಭವ್ಯಳಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ತವರಿಗೆ ಹಣ ತರುವಂತೆ ಕಳುಹಿಸಿದ್ದರು. ಈ ಸಂಬಂಧ ರಾಜಿ ಪಂಚಾಯಿತಿ ನಡೆಸಿ ಹೆತ್ತವರು ಆಕೆಯನ್ನು ಮತ್ತೆ ಗಂಡನ ಮನೆಗೆ ಬಿಟ್ಟು ಹೋಗಿದ್ದರು.

ಜೂ.16ರ ಬೆಳಿಗ್ಗೆ ಮಲ್ಲಿಕಾರ್ಜುನ ಎಂಬವರು ಭವ್ಯಳ ತಂದೆ ಮಹೇಶ‍್ ಅವರಿಗೆ ಫೋನ್ ಮಾಡಿ ನಿಮ್ಮ ಮಗಳು ನೀರಿನ ತೊಟ್ಟಿಗೆ ಬಿದ್ದು  ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಹೇಶ್ ಮತ್ತು ಸಂಬಂಧಿಕರು ತೆರಳಿ ಶವವನ್ನು ಪರಿಶೀಲಿಸಿದಾಗ ಮಂಚದ ಮೇಲೆ ಮಲಗಿಸಿದ್ದ ರೀತಿಯಲ್ಲಿ ಅವಳ ಶವವಿತ್ತು. ಅಷ್ಟೇ ಅಲ್ಲದೆ ಬಲಕಿವಿಯಿಂದ ರಕ್ತ ಸ್ರಾವವಾಗುತ್ತಿದ್ದು, ಕೈಗಳ ಮೇಲೆ ತರಚಿದ ಗಾಯಗಳಾಗಿದ್ದು, ತೊಟ್ಟಿಗೆ ಬಿದ್ದು ಸತ್ತಂತೆ ಕಾಣಿಸುತ್ತಿರಲಿಲ್ಲ ಹೀಗಾಗಿ ಪೊಲೀಸರಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಡಿವೈಎಸ್‌ಪಿ ಎಲ್, ನಾಗೇಶ್, ಸಿಪಿಐ ವಸಂತ್, ತಹಸೀಲ್ದಾರ್ ಸಂತೋಷ್‌ಕುಮಾರ್,  ಪಿಎಸ್ ಐ ತಿಮ್ಮಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin