ಮೈಸೂರು: ಧೋಂಡಿಯಾ ವಾಘ ಜಾಗೃತಿ ಸಮಿತಿ ವತಿಯಿಂದ ಡಿ.೧೮ರಂದು ಸ್ವಾತಂತ್ರ್ಯ ಹೋರಾಟಗಾರರಾದ ಧೋಂಡಿಯಾ ವಾಘನ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.೧೮ ರಂದು ಬೆಳಗ್ಗೆ ೯.೩೦ಕ್ಕೆ ಶ್ರೀರಂಗಪಟ್ಟಣದ ರಂಗನಾಥಕಲ್ಯಾಣ ಮಂಟಪದಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ನಾಡಿನ ಹಲವು ವಿದ್ವಾಂಸರು ವಿಚಾರ ಮಂಡಿಸಲಿದ್ದಾರೆ. ಧೋಂಡಿಯಾ ವಾಘನ ಬದುಕು ಮತ್ತು ಹೋರಾಟದ ಬಗ್ಗೆ ಇನ್ನಷ್ಟು ಸಂಗತಿಗಳನ್ನು ಪ್ರಚಾರಪಡಿಸಲಿದ್ದಾರೆ. ರಾಜ್ಯದ ಅನೇಕ ಕಡೆಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದು, ಸಾಹಿತಿ ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಸೇನಾನಿ ಧೋಂಡಿಯನ ಬಗ್ಗೆ ಕರ್ನಾಟಕದ ಯಾರಿಗೆ ತಿಳಿಯದಿರುವುದು ದುರಂತ. ಬ್ರಿಟಿಷರ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಕರುನಾಡಿನ ಹುಲಿ ಧೋಂಡಿಯನ ಬಗ್ಗೆ ತಿಳಿಸಲು ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ವಿಚಾರ ಸಂಕಿರಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ.ಎಸ್.ಆರ್. ಲೀಲಾ, ನಿವೃತ್ತ ತಹಸೀಲ್ದಾರ್ ಕ. ವೆಂ.ನಾಗರಾಜ್, ಸಾಮಾಜಿಕ ಕಾರ್ಯಕರ್ತ ಚನ್ನಗಿರಿಯ ಅಣ್ಣಾಜಿ ಪವಾರ್, ಶಿವಮೊಗ್ಗ ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸುಧೀಂದ್ರ, ಬೆಂಗಳೂರಿನ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ತಿರುಮಲರಾವ್, ವಿಜ್ಞಾನ ಲೇಖಕ ಸಾತನೂರು ದೇವರಾಜು, ರಾಯಚೂರಿನ ನಿವೃತ್ತ ಪ್ರಾಂಶುಪಾಲೆ ಡಾ.ಶಕುಂತಲಾ ಶೆಟ್ಟಿ ಶಿವಮೊಗ್ಗದ ಸಾಮಾಜಿಕ ಕಾರ್ಯಕರ್ತ ರಂಜಿನಿ ದತ್ತಾತ್ರಿ ಸೇರಿದಂತೆ ಹಲವು ಸಾಹಿತಿಗಳು, ಇತಿಹಾಸಕಾರರು, ಶಿಕ್ಷಣ ತಜ್ಞರು, ಸಂಶೋಧಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
