ಯಾವ ಧೊಂಡಿಯ ತನ್ನ ಧೈರ್ಯ, ಪರಾಕ್ರಮ, ಶೌರ್ಯಗಳ ಕಾರಣದಿಂದ ಧೊಂಡಿಯವಾಘ್ ಎಂದು ಕರೆಸಿಕೊಂಡನೋ, ಆ ಧೊಂಡಿಯನ ಕುರಿತು ನಮ್ಮ ಕರ್ನಾಟಕದ ಬಹುತೇಕರಿಗೆ ಅವನ ಹೆಸರೂ ಗೊತ್ತಿಲ್ಲ, ಅವನ ಕುರಿತ ಯಾವ ವಿಚಾರಗಳೂ ತಿಳಿದಿಲ್ಲವೆಂದರೆ ಇದೊಂದು ದುರಂತ, ದುರದೃಷ್ಟಕರ ಸಂಗತಿ ಅಂದರೆ ತಪ್ಪಿಲ್ಲ. ಕೇವಲ ಧೊಂಡಿಯ ಮಾತ್ರ ಅಲ್ಲ, ಅವನಂತಹ ಅಸಂಖ್ಯ ನೂರಾರು, ಸಾವಿರಾರು ಜನರ ಬಗ್ಗೆ ನಮಗೆ ತಿಳಿದೇ ಇಲ್ಲ. ಇದು ನಮ್ಮ ಇತಿಹಾಸಕಾರರ ತಪ್ಪೋ, ನಮ್ಮ ಆಡಳಿತಗಾರರ ತಪ್ಪೋ, ನಮ್ಮ ಶಿಕ್ಷಣ ಪದ್ಧತಿಯ ತಪ್ಪೋ, ನಮ್ಮ ಪೋಷಕರ ತಪ್ಪೋ, ನಮ್ಮ ನಮ್ಮ ಅಭಿಮಾನ ಶೂನ್ಯತೆಯ ತಪ್ಪೋ ಗೊತ್ತಿಲ್ಲ. ಆದರೆ ತಪ್ಪು ಅನ್ನುವುದು ಮಾತ್ರ ಕಠೋರವಾದ ಸತ್ಯ.
ಧೊಂಡಿಯ ಅಪ್ಪಟ ಕನ್ನಡಿಗ. ಚನ್ನಗಿರಿಯಲ್ಲಿ ಮರಾಠಾ ಪವಾರ್ ಮನೆತನದಲ್ಲಿ 1745ರ ಸುಮಾರಿನಲ್ಲಿ ಹುಟ್ಟಿದವನು. ಬ್ರಿಟಿಷರ ವಿರುದ್ದ ಹೋರಾಡಿದ ಅಪ್ರತಿಮ ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರ. ಕರ್ನಾಟಕದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಗ್ರಗಣ್ಯ.
ಕ್ರಿ.ಶ. ೧೭೯೯-೧೮೦೦ರಲ್ಲಿಯೇ ಬ್ರಿಟಿಷರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಕರುನಾಡಿನ ಹುಲಿ ಧೊಂಡಿಯವಾಘನ ಮಹತ್ವದ ಅರಿವು ಬ್ರಿಟಿಷ್ ಆಳರಸರಿಗೆ ಮತ್ತು ಬ್ರಿಟಿಷ್ ಇತಿಹಾಸಕಾರರಿಗೆ ಆಗಿದ್ದರೂ ನಮ್ಮ ಇತಿಹಾಸಕಾರರು ಅವನ ಕುರಿತು ಏಕೆ ನ್ಯಾಯಯುತ ಗಮನ ಹರಿಸಲಿಲ್ಲ ಎಂಬುದು ಅರ್ಥವಾಗದ ಸಂಗತಿಯಾಗಿದೆ. ಧೊಂಡಿಯವಾಘನ ಬಗ್ಗೆ ಮರಾಠ ಇತಿಹಾಸಕಾರರು ಬರೆದಿದ್ದಾರೆ, ಮುಸ್ಲಿಮ್ ಇತಿಹಾಸಕಾರರು ಬರೆದಿದ್ದಾರೆ, ಬ್ರಿಟಿಷ್ ಇತಿಹಾಸಕಾರರು ಬರೆದಿದ್ದಾರೆ.
ಆದರೆ ನಮ್ಮ ಕನ್ನಡದ ಇತಿಹಾಸಕಾರರಿಗೆ ಅವನು ಕಾಣಲೇ ಇಲ್ಲ ಮತ್ತು ಕಂಡರೂ ಮರಾಠ, ಮುಸ್ಲಿಮ್ ಮತ್ತು ಬ್ರಿಟಿಷರು ಬರೆದಿದ್ದನ್ನೇ ಒಪ್ಪಿಕೊಂಡರೇ ಹೊರತು ಸತ್ಯ ತಿಳಿಯುವ ಮತ್ತು ತಿಳಿಸುವ ಪ್ರಯತ್ನ ಮಾಡಲೇ ಇಲ್ಲ. ಆಂಗ್ಲ ಇತಿಹಾಸಕಾರ ಎಡ್ವರ್ಡ್ ಥಾರ್ನ್‌ಟನ್ ಹೇಳುತ್ತಾನೆ, “ಧೊಂಡಿಯನನ್ನು ಸರಿಯಾದ ಸಮಯದಲ್ಲಿ ಹತ್ತಿಕ್ಕಲಾಗಿರದಿರುತ್ತಿದ್ದರೆ ಅವನು ಎರಡನೆಯ ಹೈದರ್ ಅಲಿ ಆಗುತ್ತಿದ್ದ” . ಬ್ರಿಟಿಷ್ ಅಧಿಕಾರಿ ಎಡ್ವರ್ಡ್ ಕ್ಲೈವ್ ಧೊಂಡಿಯವಾಘನ ಸಂಘಟನಾ ಚಾತುರ್ಯವನ್ನು ಹೊಗಳಿ ಹೇಳಿದ್ದು ಹೀಗೆ: “ಯಾವುದು ಒಂದು ಅರಾಜಕತೆಯ ದಂಗೆಯಾಗಿ ಪ್ರಾರಂಭವಾಗಿತ್ತೋ ಅದು ಕೊನೆಗೆ ಒಂದು ದೊಡ್ಡ ಅಂತರ ರಾಷ್ಟ್ರೀಯ ಯುದ್ಧವಾಗಿ ಪರಿವರ್ತಿತವಾಗಿತ್ತು!” ಇದನ್ನು ಅಂತರ ರಾಷ್ಟ್ರೀಯ ಯುದ್ಧ ಎಂದು ಆತ ಏಕೆ ಹೇಳಿದ್ದನೆಂದರೆ, ಧೊಂಡಿಯನನ್ನು ಮಣಿಸಲು ಬ್ರಿಟಿಷರೊಬ್ಬರಿಂದ ಆಗಲೇ ಇಲ್ಲ, ಅದಕ್ಕಾಗಿ ಅವರು ಮರಾಠ ಮತ್ತು ನಿಜಾಮರ ಸೈನ್ಯಗಳ ಬೆಂಬಲವನ್ನೂ ಪಡೆಯಬೇಕಾಗಿ ಬಂದಿತ್ತು.
ಸುಮಾರು ಒಂದೂವರೆ ವರ್ಷಗಳ ಸತತ ಪ್ರಯತ್ನದ ನಂತರವೇ ಧೊಂಡಿಯನನ್ನು ಹತ್ತಿಕ್ಕಲು ಅವರಿಗೆ ಸಾಧ್ಯವಾದದ್ದು. ಮದ್ರಾಸ್ ಪ್ರಾಂತದ ಗವರ್ನರ್ ಆಗಿದ್ದ ಥಾಮಸ್ ಮುನ್ರೋ, “ಧೊಂಡಿಯವಾಘನನ್ನು ತಡೆಯದಿದ್ದಿದ್ದರೆ ನಿಶ್ಚಿತವಾಗಿ ಆತ ಒಬ್ಬ ಸ್ವತಂತ್ರ ಮತ್ತು ಶಕ್ತಿಯುತ ರಾಜನಾಗುತ್ತಿದ್ದ ಮತ್ತು ಹೊಸ ಅರಸೊತ್ತಿಗೆಯ ಆರಂಭಕ್ಕೆ ಕಾರಣನಾಗುತ್ತಿದ್ದ. ವೆಲ್ಲೆಸ್ಲಿಗೆ ಅವನ ಮಿಲಿಟರಿ ಇತಿಹಾಸದಲ್ಲಿ ಅದ್ವಿತೀಯನಾಗಿ ಹೆಸರು ಬರಲು ಧೊಂಡಿಯವಾಘನ ವಿರುದ್ಧದ ಕಾರ್ಯಾಚರಣೆಯೇ ಕಾರಣವಾಗಿತ್ತು” ಎಂದಿದ್ದಾನೆ. ಧೊಂಡಿಯನನ್ನು ಎದುರಿಸಲು ಬ್ರಿಟಿಷರು ಒಂದು ವಿಶೇಷ ಸೈನ್ಯಪಡೆಯನ್ನೇ ಆರ್ಥರ್ ವೆಲ್ಲೆಸ್ಲಿ ನೇತೃತ್ವದಲ್ಲಿ ನೇಮಿಸಿದ್ದರು. ಧೊಂಡಿಯನನ್ನು ಮಣಿಸಲು ಅವನಿಗೆ ಒಂದೂವರೆ ವರ್ಷ ಬೇಕಾಯಿತು. ಅವನ ಆತ್ಮ ಚರಿತ್ರೆಯಲ್ಲಿ ಆತ ಧೊಂಡಿಯನ ವಿರುದ್ಧದ ಗೆಲುವು ನನ್ನ ಜೀವಮಾನದ ಅತ್ಯುನ್ನತ ಸಾಧನೆ ಎಂದು ಹೇಳಿಕೊಂಡಿದ್ದಾನೆ.
ಬ್ರಿಟಿಷರ ದಾಖಲೆಗಳ ಪ್ರಕಾರವೇ ಧೊಂಡಿಯವಾಘನ ಬಳಿ ಹತ್ತಿರ ಹತ್ತಿರ 90,000ದವರೆಗೆ ಅಶ್ವದಳ, 24,000ಕ್ಕೂ ಹೆಚ್ಚು ಪದಾತಿದಳವಿತ್ತು. ಆತನ ಚಟುವಟಿಕೆಗಳು ಶಿಕಾರಿಪುರದಿಂದ ಹಿಡಿದು ದೂರದ ಬೆಳಗಾಮ್‌ವರೆಗೆ ಮತ್ತು ಕೊಲ್ಹಾಪುರದ ಗಡಿಯವರೆಗೂ, ನಿಜಾಮನ ಪ್ರದೇಶದಲ್ಲೂ, ಕರಾವಳಿ ಜಿಲ್ಲೆಗಳಲ್ಲೂ ವ್ಯಾಪಿಸಿತ್ತು. ಧೊಂಡಿಯನ ಆಡಳಿತ ವೈಖರಿ ಹಿತಮಿತ ಮತ್ತು ಉದಾರತನದಿಂದ ಕೂಡಿದ್ದಾಗಿದ್ದು ದಿನೇ ದಿನೇ ಜನರ ಸದಭಿಪ್ರಾಯ ಗಳಿಸಿಕೊಳ್ಳುತ್ತಿತ್ತು ಎಂದು ಹೇಳಿವೆ. (ಕರ್ನಾಟಕ ಗೆಜೆಟಿಯರ್ – ಪು.೩೪೧).
ಬ್ರಿಟಿಷರ ದೃಷ್ಟಿಯಲ್ಲಿ ಧೊಂಡಿಯ ಎಷ್ಟು ಅಪಾಯಕಾರಿಯಾಗಿದ್ದ ಎಂಬುದಕ್ಕೆ ಆರ್ಥರ್ ವೆಲ್ಲೆಸ್ಲಿಗೆ ಬ್ರಿಟಿಷ್ ಸರ್ಕಾರದ ಕಾರ್ಯದರ್ಶಿ ಮಿ. ವೆಬ್ಸ್ ಕರ್ನಲ್ 24.5.1800ರಲ್ಲಿ ಬರೆದ ಪತ್ರದ ಈ ಸಾಲು ಸಾಕ್ಷಿಯಾಗಿದೆ: “ಧೊಂಡಿಯ ವಾಘನನ್ನು ಅವನು ಎಲ್ಲಿದ್ದರೂ ಬೆನ್ನಟ್ಟಬೇಕು ಮತ್ತು ಅವನನ್ನು ಹತ್ತಿರದ ಮೊದಲ ಮರಕ್ಕೆ ನೇಣು ಹಾಕಬೇಕು.” ಆದರೆ ಅವನನ್ನು ನೇಣು ಹಾಕುವ ಸಂದರ್ಭಕ್ಕೆ ಅವಕಾಶ ಆಗಲೇ ಇಲ್ಲ. 1800ರ ಸೆಪ್ಟೆಂಬರ್, 10 ರಂದು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕೊಟ್ನೆಕಲ್ ಹತ್ತಿರ ನಡೆದ ಯುದ್ಧದಲ್ಲಿ ಯುದ್ಧ ಮಾಡುತ್ತಲೇ ಬ್ರಟಿಷರ ಗುಂಡಿಗೆ ಎದೆಯೊಡ್ಡಿ ಪ್ರಾಣ ಬಿಟ್ಟಿದ್ದ ಧೊಂಡಿಯ.
ಈಸ್ಟ್ ಇಂಡಿಯ ಕಂಪೆನಿಯ ಭಾರತದ ಗವರ್ನರ್ ಜನರಲ್ಲನ ಕಾರ್ಯದರ್ಶಿ ಜೆ. ವೆಬ್ಸ್ ಸರ್ಕಾರದ ಪರವಾಗಿ ಧೊಂಡಿಯವಾಘನ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದ ಆರ್ಥರ್ ವೆಲ್ಲೆಸ್ಲಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಹೀಗೆ: “ಬಂಡಾಯಗಾರ ಧೊಂಡಿಯನ ಶಕ್ತಿ ಅಪಾಯಕಾರಿ ಮಟ್ಟಕ್ಕೆ ಹೆಚ್ಚಿದ್ದು, ಅದು ದ್ವೀಪಕಲ್ಪದ (ದಕ್ಷಿಣ ಭಾರತ) ಪಶ್ಚಿಮ ಭಾಗದಲ್ಲಿ ಗೌರವಾನ್ವಿತ ಕಂಪೆನಿಯ ಮತ್ತು ಅದರ ಮಿತ್ರರ ಸ್ವಾಧೀನದಲ್ಲಿನ ಪ್ರದೇಶಗಳಲ್ಲಿ ತಳಮಳ ಹೆಚ್ಚಿಸಿದ್ದ ಸಂದರ್ಭದಲ್ಲಿ, ಕ. ವೆಲ್ಲೆಸ್ಲಿಯ ನೇತೃತ್ವದ ಸೈನ್ಯದ ಯಶಸ್ಸಿಗೆ ಗೌರವಾನ್ವಿತ ಗವರ್ನರ್ ಇನ್ ಕೌನ್ಸಿಲ್ ಅತ್ಯುನ್ನತ ಮಟ್ಟದ ರಾಜಕೀಯ ಮಹತ್ವವನ್ನು ಕೊಡುತ್ತದೆ.” ಇದು ವೆಲ್ಲೆಸ್ಲಿಗೆ ನೀಡಿದ ಮೆಚ್ಚುಗೆಯ ಪತ್ರವಾಗಿದ್ದರೂ, ವಾಸ್ತವದಲ್ಲಿ ಧೊಂಡಿಯವಾಘನ ಶಕ್ತಿ ಮತ್ತು ಪ್ರಾಬಲ್ಯಕ್ಕೆ ನೀಡಿದ ಪ್ರಮಾಣ ಪತ್ರವಾಗಿದೆ.
ಸಂಘರ್ಷದಿಂದಲೇ ಆರಂಭವಾಗಿ ಸಂಘರ್ಷದಿಂದಲೇ ಅಂತ್ಯವಾದ ಧೊಂಡಿಯವಾಘನ ಜೀವನವನ್ನು ಅವಲೋಕಿಸಿದಾಗ ನಮಗೆ ಗೋಚರಿಸುವ ಅವನ ಜೀವನದ ಮಜಲುಗಳನ್ನು ಸಂಕ್ಷಿಪ್ತವಾಗಿ ಹೀಗೆ ಪಟ್ಟಿ ಮಾಡಬಹುದು;
- ಕ್ರಿ.ಶ. 1740-45ರ ಸುಮಾರಿನಲ್ಲಿ ಚನ್ನಗಿರಿಯಲ್ಲಿ ಮರಾಠ ಪವಾರ್ ಮನೆತನಕ್ಕೆ ಸೇರಿದ ದಂಪತಿಯ ಪುತ್ರನಾದ ಧೊಂಡಿಯ ಕೆಳದಿ ಸಂಸ್ಥಾನ ಪತನಗೊಳ್ಳುವ ಸಮಯದಲ್ಲಿ (ಕ್ರಿ.ಶ. 1763) ತರುಣಾವಸ್ಥೆಯಲ್ಲಿದ್ದು, ಅಶ್ವಸವಾರಿ, ಕತ್ತಿವರಸೆ, ಇತ್ಯಾದಿ ಯುದ್ಧಕಲೆಗಳಲ್ಲಿ ಪರಿಣಿತನಾಗಿರುತ್ತಾನೆ. ಕೆಳದಿ ಸಂಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹೈದರಾಲಿ ಕೆಳದಿ ಸಂಸ್ಥಾನವನ್ನು ಕೈವಶ ಮಾಡಿಕೊಂಡು ಅದನ್ನು ಮೈಸೂರು ಸಂಸ್ಥಾನದ ಭಾಗವನ್ನಾಗಿ ಮಾಡಿಕೊಳ್ಳುತ್ತಾನೆ.
- ಹೈದರಾಲಿ-ಟೀಪು ಆಳ್ವಿಕೆಯ ಮೈಸೂರು ಸಂಸ್ಥಾನದಲ್ಲಿ ಅಶ್ವದಳದ ನಾಯಕನಾಗಿ ಸ್ವಲ್ಪ ಸಮಯ ಸೇವೆ ಸಲ್ಲಿಕೆ. ಸ್ವಂತ ಸಾಮ್ರಾಜ್ಯದ ಕನಸಿನೊಂದಿಗೆ ಉತ್ತರ ಕರ್ನಾಟಕದೆಡೆಗೆ ಸಾಗಿ ಸವಣೂರನ್ನು ಕೇಂದ್ರವಾಗಿರಿಸಿಕೊಂಡು ಚಟುವಟಿಕೆ. ಸುತ್ತಮುತ್ತಲ ಕೋಟೆಗಳ ಕೈವಶ ಮಾಡಿಕೊಂಡು ಸ್ವತಂತ್ರವಾಗಿ ಕೆಲವು ವರ್ಷ ಆಳ್ವಿಕೆ ನಡೆಸುತ್ತಾನೆ.
- ಮರಾಠರ ಸುಬೇದಾರ್ ಧೊಂಡೋಪಂತ್ ಗೋಖಲೆಯಿಂದ ಸೋತು ಹಿಮ್ಮೆಟ್ಟಬೇಕಾಗಿ ಬಂದು ಟೀಪುವಿನೊಂದಿಗೆ ಸಂಧಾನ. ಟೀಪುವಿನಿಂದ ಸೈನ್ಯದಲ್ಲಿ ಉನ್ನತ ಹುದ್ದೆ, ಹೆಚ್ಚಿನ ಸಂಬಳದ ಆಮಿಷದೊಂದಿಗೆ ಅವನ ಬಲವಂತದ ಮತಾಂತರ. ಮತಾಂತರ ಒಪ್ಪದಿದ್ದ ಕಾರಣ ಅವಕೃಪೆಗೆ ಒಳಗಾಗಿ ಶ್ರೀರಂಗಪಟ್ಟಣದಲ್ಲಿ 1794ರಿಂದ 1799ರವರೆಗೆ 5 ವರ್ಷಗಳ ಸೆರೆವಾಸ, ಚಿತ್ರಹಿಂಸೆ. ಟೀಪುವಿಗೆ ಸಹಕಾರ ನೀಡಿ, ಪ್ರತಿಯಾಗಿ ತಾನೂ ಬೆಳೆಯಲು ಸಹಕಾರ ಬಯಸಿದವನಿಗೆ ಟೀಪುವಿನಿಂದ ಸಿಕ್ಕಿದ್ದು ಈ ಬಳುವಳಿ!
- ಟೀಪು ಪತನದೊಂದಿಗೆ 1799ರಲ್ಲಿ ಸೆರೆವಾಸದಿಂದ ತಪ್ಪಿಸಿಕೊಂಡು ಅನುಚರರೊಂದಿಗೆ ಬಿದನೂರಿಗೆ ಧಾವಿಸಿ, ಶಿವಮೊಗ್ಗ, ಬಿದನೂರನ್ನು ಸ್ವಾಧೀನಕ್ಕೆ ಪಡೆಯುವುದರೊಂದಿಗೆ ಕಾರ್ಯಾಚರಣೆ ಪ್ರಾರಂಭ. ಬ್ರಿಟಿಷರ ಆಳ್ವಿಕೆಯ ಅಪಾಯದ ಅರಿವನ್ನು ಸುತ್ತಮುತ್ತಲ, ನೆರೆ ಪ್ರದೇಶಗಳ ರಾಜರುಗಳು, ಪಾಳೆಯಗಾರರಿಗೆ ಮೂಡಿಸಿ ಅವರನ್ನು ಬ್ರಿಟಿಷರ ವಿರುದ್ಧ ಎತ್ತಿಕಟ್ಟುವ ಪ್ರಯತ್ನ. ಶಿಕಾರಿಪುರ, ತರಿಕೆರೆ, ಚಿತ್ರದುರ್ಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅಧಿಪತ್ಯ ಸ್ಥಾಪನೆ.
- ಧೊಂಡಿಯವಾಘನನ್ನು ಹತ್ತಿಕ್ಕದಿದ್ದರೆ ಇತರ ಪಾಳೆಯಗಾರರು, ಅರಸರುಗಳೂ ದಂಗೆಯೆದ್ದು ಬ್ರಿಟಿಷರ ಅಧಿಪತ್ಯಕ್ಕೆ ಸವಾಲಾಗುವುದೆಂದು ಅರಿತ ಬ್ರಿಟಿಷ್ ಆಡಳಿತದಿಂದ ಧೊಂಡಿಯನ ನಿಗ್ರಹಕ್ಕೆ ಆದ್ಯತೆ. ಮರಾಠರ ಮತ್ತು ನಿಜಾಮರ ಸಹಾಯ ಬಳಕೆ. ಬ್ರಿಟಿಷರು ಬಿದನೂರು ಮತ್ತು ಸುತ್ತಮುತ್ತಲ ಪ್ರದೇಶಗಳ ಒಡೆತನ ಸಾಧಿಸಿದ್ದರಿಂದ, ಧೊಂಡಿಯ ತುಂಗಭದ್ರ ನದಿ ದಾಟಿ ಮರಾಠರ ಸೀಮೆಗೆ ಸಾಗುವಂತೆ ಆದುದು.
- ಧೊಂಡಿಯವಾಘ್ ಪುನಃ ಸವಣೂರು, ಹರಪನಹಳ್ಳಿ, ರಾಣೆಬೆನ್ನೂರು, ಹಾನಗಲ್, ಡಂಬಳ, ಜಾಲಿಹಾಳ್, ಕಿತ್ತೂರು, ಗೋಕಾಕ, ನವಲಗುಂದಗಳಲ್ಲಿ ಪಾರಮ್ಯ ಸಾಧಿಸಿ, ಸವಣೂರನ್ನು ಭದ್ರನೆಲೆ ಮತ್ತು ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಣೆ ನಡೆಸಿದುದು. ದಕ್ಷಿಣ ಕನ್ನಡದ ಜಮಾಲಾಬಾದ್, ಉತ್ತರ ಕನ್ನಡದ ಸೋಂದೆ ಸಹ ಇವನ ಅಧಿಪತ್ಯಕ್ಕೆ ಸೇರಿದವು. ಹೀಗಾಗಿ ಉಭಯ ಲೋಕಾಧೀಶ್ವರ ಎಂಬ ಬಿರುದಿಗೆ ಪಾತ್ರನಾದುದು. ಕೊಲ್ಹಾಪುರದ ರಾಜ, ಆನೆಗೊಂದಿಯ ರಾಜ, ಸುರಪುರದ ನಾಯಕರು, ಕೇರಳದ ವರ್ಮ, ತಮಿಳುನಾಡಿನ ಪಾಂಡ್ಯನ್, ಸುತ್ತಮುತ್ತಲದ ಪಾಳೆಯಗಾರರು, ಅರಸರುಗಳು ಮುಂತಾದವರ ವಿಶ್ವಾಸ ಸಾಧಿಸಿ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಪರಸ್ಪರ ಸಹಕರಿಸಲು ಒಮ್ಮತಕ್ಕೆ ಬರುವಂತೆ ಮಾಡಿದುದು ಅವನ ದೂರದೃಷ್ಟಿ ಮತ್ತು ಸಂಘಟನಾ ಚಾತುರ್ಯಕ್ಕೆ ಸಾಕ್ಷಿ. ಫ್ರೆಂಚರೂ ಸಹ ಧೊಂಡಿಯನಿಗೆ ಸಹಕರಿಸಲು ಮುಂದೆ ಬಂದದ್ದು.
- ಬ್ರಿಟಿಷರಿಂದ ಧೊಂಡಿಯನ ಬೆನ್ನಟ್ಟುವಿಕೆ ಕಾರ್ಯದಲ್ಲಿ ಮರಾಠರು ಮತ್ತು ನಿಜಾಮರ ಸಹಾಯ ಬಳಕೆ. ಆರ್ಥರ್ ವೆಲ್ಲೆಸ್ಲಿಗೆ ಕಾರ್ಯಾಚರಣೆಯ ಸಾರಥ್ಯ. ಸತತವಾಗಿ ಒಂದು ವರ್ಷ, ಮೂರು ತಿಂಗಳುಗಳ ಕಾಲ ನಡೆದ ಕಾರ್ಯಾಚರಣೆ. ಕೊನೆಯಲ್ಲಿ ಬ್ರಿಟಿಷರ ಚಕ್ರವ್ಯೂಹದಲ್ಲಿ ಸಿಲುಕಿ ಧೊಂಡಿಯವಾಘನ ವೀರೋಚಿತ ಅಂತ್ಯ. ಧೊಂಡಿಯನ ಸಹಕಾರಿಗಳು ಅವನ ನೆರವಿಗೆ ಬರದಂತೆ ಮಾಡಿದ್ದು ಬ್ರಿಟಿಷರ ಗೆಲುವಿಗೆ ಮುಖ್ಯ ಕಾರಣವಾಗಿತ್ತು. ಸಕಾಲಿಕ ನೆರವು ಸಿಕ್ಕಿದ್ದರೆ, ಚಕ್ರವ್ಯೂಹದಿಂದ ಪಾರಾಗಿಬಿಟ್ಟಿದ್ದರೆ, ಬ್ರಿಟಿಷರದೇ ಅಭಿಪ್ರಾಯದಂತೆ, ಧೊಂಡಿಯನಿಂದ ಇತಿಹಾಸದ ಚಿತ್ರಣವೇ ಬದಲಾಗುತ್ತಿದ್ದುದರಲ್ಲಿ ಸಂದೇಹವಿರಲಿಲ್ಲ. ಧೊಂಡಿಯನನ್ನು ಇಷ್ಟೊಂದು ದೀರ್ಘ ಕಾಲದವರೆಗೆ ಹಿಂಬಾಲಿಸಿದರೂ ಅವನನ್ನು ಹಿಡಿಯಲಾಗಲೀ, ಮಣಿಸಲಾಗಲೀ ಆಗದಿರುವುದಕ್ಕೆ ಒಂದು ರೀತಿಯ ನಿರಾಶೆಯೂ ವೆಲ್ಲೆಸ್ಲಿಗೆ ಕಾಡಿದ್ದುದಕ್ಕೆ ಅವನು ಲೆ.ಕ. ಕ್ಲೋಸ್‌ಗೆ 8.8.1800ರಲ್ಲಿ ಬರೆದ ಪತ್ರದ ಈ ಸಾಲುಗಳೇ ಸಾಕ್ಷಿಯಾಗಿವೆ: “ಈ ಯುದ್ಧಕ್ಕೆ ಒಂದು ರೀತಿ ಅರ್ಥವೇ ಇಲ್ಲ. ಕೆಲವೇ ಕೆಲವು ಅಶ್ವದಳದ ಸೈನಿಕರನ್ನು ಹೊಂದಿರುವ ಏಕ ವ್ಯಕ್ತಿಯನ್ನು ಪ್ರಪಂಚದ ಕೊನೆಯವರೆಗೂ ಹಿಂಬಾಲಿಸುತ್ತಲೇ ಹೋದರೂ ಅವನು ಸಿಗುತ್ತಿಲ್ಲ. ಹಾಗೆಂದು ಅವನನ್ನು ಬಿಡುವಂತೆಯೂ ಇಲ್ಲ. ನಮ್ಮ ಸೈನ್ಯ ಕಾಲ್ತೆಗೆದ ಕೂಡಲೇ ಅವನು ಹಿಂತಿರುಗಿ ಬಂದುಬಿಡತ್ತಾನೆ.” ಗೆರಿಲ್ಲಾ ಮಾದರಿ ತಂತ್ರ ಅನುಸರಿಸುತ್ತಿದ್ದ ಧೊಂಡಿಯನಿಂದ ಬ್ರಿಟಿಷರು ಹೈರಾಣಾಗಿ ಹೋಗಿದ್ದರು.
ಧೊಂಡಿಯವಾಘನ ಸಾಹಸಮಯ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಅಂಶಗಳೆಂದರೆ, ಸ್ವಾಭಿಮಾನ, ತನ್ನದೇ ಆದ ಅರಸೊತ್ತಿಗೆ ಪ್ರಾರಂಭಿಸುವ ಮಹತ್ವಾಕಾಂಕ್ಷೆ, ಎಂತಹ ವಿಷಮ ಸನ್ನಿವೇಶದಲ್ಲೂ ಧೃತಿಗೆಡದ ಆತ್ಮ ಸ್ಥೈರ್ಯ, ಬ್ರಿಟಿಷರ ವಿರುದ್ಧ ಹೋರಾಡುವ ಅಚಲ ನಿರ್ಧಾರ, ಸ್ವಾತಂತ್ರ್ಯದ ತುಡಿತ ಮತ್ತು ಸಂಘಟನಾ ಚಾತುರ್ಯ. ಟೀಪುವಿನ ಸೆರೆಮನೆಯಿಂದ ಹೊರಬಿದ್ದ ಕ್ಷಣದಿಂದ ಅದುಮಿಟ್ಟಿದ್ದ ಆಕಾಂಕ್ಷೆಗಳಿಗೆ ಜೀವ ಬಂದಂತೆ, ಪುಟಿದೆದ್ದ ಹುಲಿಯಂತೆ ಆತ ಕೇವಲ ಒಂದು ವರ್ಷ, ನಾಲ್ಕು ತಿಂಗಳಿನಲ್ಲಿ ಇಷ್ಟೆಲ್ಲಾ ಸಾಧಿಸಿದನೆಂದರೆ ಆತನ ಛಲ ಮತ್ತು ಗಟ್ಟಿತನಗಳ ದರ್ಶನ ಆಗದಿರದು. ಇಷ್ಟು ಅಲ್ಪ ಸಮಯದಲ್ಲಿ ಸುಮಾರು 90,000ದಷ್ಟು ಸಂಖ್ಯೆಯ ಯೋಧರು ಅವನೊಡನೆ ಕೈಜೋಡಿಸಿದ್ದರು, ಸಾವಿರಾರು ಯೋಧರು ಪ್ರಾಣತ್ಯಾಗ ಮಾಡಿದರು ಎಂದರೆ ಅದಕ್ಕೆ ಅವನ ನಾಯಕತ್ವ, ಆಯಸ್ಕಾಂತೀಯ ವ್ಯಕ್ತಿತ್ವ ಮತ್ತು ಸಂಘಟನಾ ಚಾತುರ್ಯವೇ ಕಾರಣವಾಗಿತ್ತಲ್ಲದೇ ಮತ್ತೇನೂ ಅಲ್ಲ. ನಾಡಿನ ಎಲ್ಲೆಡೆ ಎಲ್ಲ ಜನರಿಂದ ಸ್ವಪ್ರೇರಿತ ಬೆಂಬಲ, ಸಹಕಾರ ಪಡೆದ ಜನಪ್ರಿಯ ನಾಯಕನೂ ಆಗಿ ರೂಪುಗೊಂಡಿದ್ದುದಂತೂ ವಿಶೇಷ. ಒಂದು ವೇಳೆ ಅವನು ಟೀಪುವಿನ ಸೆರೆಮನೆಯಲ್ಲಿ 5 ವರ್ಷಗಳ ಕಾಲ ಬಂದಿಯಾಗದೆ ಇರುತ್ತಿದ್ದರೆ, ಬಹುಷಃ ಮತ್ತೊಂದು ಅರಸೊತ್ತಿಗೆಯ ಉದಯವಾಗುತ್ತಿತ್ತು. ಅಷ್ಟೇ ಅಲ್ಲ, ಭದ್ರವಾಗಿ ನೆಲೆಯೂರಲು ಅವಕಾಶವಾಗದಿದ್ದ ಧೊಂಡಿಯನೇ ಆಂಗ್ಲರಿಗೆ ಅಷ್ಟೊಂದು ಪ್ರತಿರೋಧ ಒಡ್ಡಿದ್ದನೆಂದರೆ, ಇನ್ನು ಭದ್ರವಾಗಿ ಸ್ಥಾಪಿತನಾದ ಧೊಂಡಿಯನಿಂದ ಅವರು ಕರುನಾಡಿನಲ್ಲಿ ಮತ್ತಷ್ಟು ತೀವ್ರತರವಾದ ಪ್ರತಿರೋಧ ಎದುರಿಸಬೇಕಾಗಿ ಬರುತ್ತಿತ್ತು. ಏಕೆಂದರೆ, ಪರಿಸ್ಥಿತಿಯ ಕೈಗೊಂಬೆಗಳಾಗಿ ಧೊಂಡಿಯನ ವಿರುದ್ಧವಾಗಿ ಮತ್ತು ಬ್ರಿಟಿಷರ ಪರವಾಗಿ ಹೋರಾಡಿದ್ದವರು ಆಗ ಧೊಂಡಿಯನ ಜೊತೆಗೆ ಇರುತ್ತಿದ್ದರು. ಅವನಿಗಾಗಿ ಮೈಸೂರು, ಬಿದನೂರು ಸೀಮೆಗಳಲ್ಲದೆ, ಉತ್ತರ ಕರ್ನಾಟಕದ ಭಾಗಗಳು, ಮರಾಠ ಮತ್ತು ನಿಜಾಮರ ಸೀಮೆಗಳಲ್ಲೂ ಸಾಮಾನ್ಯರು ಪ್ರಾಣಾಪಾಯ ಲೆಕ್ಕಿಸದೆ ಸಹಕಾರಿಗಳಾಗಿ ಕೆಲಸ ಮಾಡಿದ್ದರು ಮತ್ತು ಇದೇ ಕಾರಣಕ್ಕಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರು ಎಂಬುದು ಅವನು ಅವರೆಲ್ಲರ ಆಶಾಕಿರಣವಾಗಿದ್ದ ಎಂಬುದಕ್ಕೆ ಮತ್ತು ಆತನ ಸಂಘಟನಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ.
ಧೊಂಡಿಯವಾಘನ ನೆನಪನ್ನು ಉಳಿಸುವ, ಅವನ ಮತ್ತು ಅವನಂತಹ ಸಾವಿರಾರು ಜನರ ಬಲಿದಾನಗಳನ್ನು ಸ್ಮರಿಸುವ ಮತ್ತು ಗೌರವಿಸುವ ಕಾರ್ಯ ಅತ್ಯಗತ್ಯವಾಗಿ ಆಗಬೇಕಾಗಿದೆ. ಸ್ವಾಭಿಮಾನದಿಂದ ಕೂಡಿದ ನವಯುಗ ನಿರ್ಮಾಣಕ್ಕೆ ಇಂತಹವರ ನೆನಪು ಮಾರ್ಗದರ್ಶಿಯಾಗುತ್ತದೆ.

ಡಾ. ಈ ಸಿ ನಿಂಗರಾಜ್ ಗೌಡ
ಸಿಂಡಿಕೇಟ್ ಸದಸ್ಯರು,
ಮೈಸೂರು ವಿಶ್ವವಿದ್ಯಾನಿಲಯ ಮತ್ತು ಪ್ರಧಾನ ಕಾರ್ಯದರ್ಶಿ,
ಧೋಂಡಿಯಾವಾಘ್ ಜಾಗೃತಿ ಸಮಿತಿ, ಕರ್ನಾಟಕ.
ಮೊ.9980184789,9448501804.